ಗೋಣಿಕೊಪ್ಪಲು, ನ. 28: ರೈಲು ಕಂಬಿಗಳನ್ನು ಭದ್ರತೆ ಬೇಲಿಗಳಾಗಿ ಅಳವಡಿಸಿ ಆನೆಗಳು ಕಾಡಿನಿಂದ ನಾಡಿಗೆ ನುಸುಳದಂತೆ ತಡೆಗಟ್ಟಲು ಕ್ರಮ ಕೈಗೊಂಡಿದ್ದರೂ, ಆನೆಗಳು ಮಾತ್ರ ನಾಡಿನಲ್ಲೇ ನೆಲೆಕಂಡುಕೊಂಡಿವೆ. ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಆನೆಗಳ ಉಪಟಳ ರೈತರಿಗೆ ಗೋಳಾಗಿದೆ. ಅರಣ್ಯ ಇಲಾಖೆ ಕಾರ್ಯನಿರ್ವಹಿಸುತ್ತಿರುವ ತಿತಿಮತಿ ಭಾಗದಲ್ಲೇ ಆನೆಗಳು ಹೆಚ್ಚು ದಾಂಧಲೇ ನಡೆಸುತ್ತಿವೆ. ಆನೆಗಳು ಗ್ರಾಮಗಳಿಗೆ ಬಾರದಂತೆ ತಡೆಯಲು ರೈತ ಪರ ಸಂಘಟನೆಗಳ ತೀವ್ರ ಹೋರಾಟದ ಪರಿಣಾಮದಿಂದ ಅರಣ್ಯ ಇಲಾಖೆ ತಿತಿಮತಿ ಭಾಗದಲ್ಲಿ ರೈಲ್ವೇ ಕಂಬಿ ಅಳವಡಿಸಿದರು ಯೋಜನೆ ಶಿಥಿಲಗೊಂಡಿದೆ. ಆನೆ, ಕಾಟಿ ಇತರ ಕಾಡು ಪ್ರಾಣಿಗಳ ದಾಂಧಲೆಯಿಂದ ರೈತರು ಹೈರಾಣಾಗಿದ್ದಾರೆ. ನಿತ್ಯ ಆನೆ ಓಡಿಸುವದೇ ಕಾಯಕವಾಗಿದೆ. ತಿತಿಮತಿ ಸಮೀಪದ ಬಾಳೆಲೆ ಮಾರ್ಗದ ನೊಖ್ಯ ಗ್ರಾಮದಲ್ಲಿ 15 ಆನೆಗಳು ಬೀಡುಬಿಟ್ಟಿದ್ದು, ಆತಂಕ ಸೃಷ್ಟಿಸಿದೆ. ಶಾಲೆ ವಿದ್ಯಾರ್ಥಿಗಳು, ತೋಟ ಕಾರ್ಮಿಕರು ಈ ಮಾರ್ಗ ದಲ್ಲಿ ತೆರಳುವದು ಅಸಾಧ್ಯವಾಗಿದೆ.ಸುಮಾರು 98 ಲಕ್ಷ ವೆಚ್ಚದಲ್ಲಿ 2.8 ಕಿ.ಮೀ ವ್ಯಾಪ್ತಿಯಲ್ಲಿ ರೈಲು ಕಂಬಿಯನ್ನು ಅಳವಡಿಸಲಾಗಿದೆ. ಆದರೆ ಆ ಭಾಗದಲ್ಲೇ ಆನೆಗಳು ಗ್ರಾಮಗಳಿಗೆ ಲಗ್ಗೆ ಇಡುತ್ತಿವೆ. ಕಳಪೆ ಕಾಮಗಾರಿಗಳು ಮತ್ತು ಕಂಬಿ ಅಳವಡಿಸಲು ಆಳವಾದ ಗುಂಡಿ ತೋಡದೆ ಇರುವದೇ ಆನೆಗಳು ಸಲೀಸಾಗಿ ಕಂಬಿಗಳ ಮೂಲಕ ನುಸುಳಲು ಸಾಧ್ಯವಾಗುತ್ತಿದೆ ಎಂದು ಗ್ರಾಮಸ್ಥರ ಆರೋಪವಾಗಿದೆ. ಜೈಪುರ ಎಸ್ಟೇಟ್ ಚಾಮುಂಡಿ ಕಟ್ಟೆಯಿಂದ ಕುಂಞÂರಾಮನ ಕಟ್ಟೆ ಜಂಗಲ್ ಹಾಡಿಯವರೆಗೆ ಈ ರೈಲ್ವೆ ಕಂಬಿ ಅಳವಡಿಕೆ ಯೋಜನೆಯನ್ನು ಪ್ರಯೋಗಿಕ ವಾಗಿ ಅನುಷ್ಠಾನಗೊಳಿ ಸಲಾಗಿದೆ. ಕಂಬಿ ಅಳವಡಿಕೆ ವಿಫಲತೆಯನ್ನು ಕಂಡುಕೊಂಡಿದೆ.

ಆನೆಗಳ ಹಾಗೂ ಇತರ ಕಾಡು ಪ್ರಾಣಿಗಳ ಉಪಟಳದಿಂದ ಈ ಭಾಗದಲ್ಲಿ ಕೃಷಿ

(ಮೊದಲ ಪುಟದಿಂದ) ಮಾಡುವವರ ಸಂಖ್ಯೆ ಇಳಿಮುಖವಾಗಿ ಕೆಲ ವರ್ಷಗಳ ಹಿಂದೆ 4 ಸಾವಿರ ಎಕರೆಯಲ್ಲಿ ಭತ್ತದ ಕೃಷಿ ಮಾಡುತ್ತಿದ್ದ ಈ ಭಾಗದ ರೈತರು ಇದೀಗ ಕೇವಲ 10 ರಿಂದ 15 ಎಕರೆಗಷ್ಟೇ ಕೃಷಿ ಮಾಡುವದನ್ನು ಸೀಮಿತಗೊಳಿಸಿದ್ದಾರೆ. ಕೃಷಿ ಮಾಡದೆ ಬಿಟ್ಟ ಗದ್ದೆಗಳಲ್ಲಿ ಇದೀಗ ಕುರುಚಲು ಕಾಡುಗಳು ಬೆಳೆದು ನಿಂತಿದೆ. ಬೆಳೆದು ನಿಂತ ಕಾಡುಗಳಲ್ಲೆ ಆನೆಗಳು ಬೀಡು ಬಿಡಲು ಕಾರಣವಾಗಿದೆ. ಇದರಿಂದಲೇ ಪ್ರಾಣಿಗಳ ಉಪಟಳದ ಆತಂಕ ರೈತರಿಗೆ ಹೆಚ್ಚಾಗಲು ಕಾರಣವಾಗಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವ್ಯವಸ್ಥೆಗಳಿಗೆ ಮುಖ್ಯ ಕಾರಣವಾಗಿದೆ. ಆನೆಗಳನ್ನು ಕಾಡಿಗಟ್ಟುವ ನೆಪದಲ್ಲಿ ವ್ಯರ್ಥ ಕಾಲಹರಣ ಮಾಡುತ್ತಿದ್ದಾರೆ. ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸುತ್ತಿಲ್ಲ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಆನೆಗಳನ್ನು ಅಟ್ಟುವದೇ ಇವರ ಸಾಹಸದ ಕಾರ್ಯವಾಗಿದೆ. ರೈತರ, ಬೆಳೆಗಾರರ ಬಗ್ಗೆ ಅಧಿಕಾರಿ ಗಳು ಕಾಳಜಿ ಹೊಂದಿದ್ದರೆ ಈ ಸಮಸ್ಯೆಗಳು ಉಲ್ಬಣಿಸುತ್ತಿರಲಿಲ್ಲ ಎಂಬವದು ಗ್ರಾಮಸ್ಥರ ಅಭಿಪ್ರಾಯವಾಗಿದೆ.