ಮಡಿಕೇರಿ, ನ.28: ಜಿಲ್ಲೆಯಲ್ಲಿ ಕಳೆದ 2018 ಮತ್ತು 2019ರ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಮನೆ ಮಠ, ಆಸ್ತಿ-ಪಾಸ್ತಿ, ಬೆಳೆ ಕಳೆದುಕೊಂಡ ಪ್ರದೇಶದ ಜನರ ಪುನರ್ ಜೀವನಕ್ಕೆ ಸ್ಪಂದಿಸುವಲ್ಲಿ ಜಿಲ್ಲಾಡಳಿತ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಮನವಿ ಮಾಡಿದರು.
ಕೊಡಗು ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ಜನರ ಚೇತರಿಕೆಗೆ ಅಗತ್ಯ ಸ್ಪಂದನೆ ಸಂಬಂಧ ಸರ್ಕಾರೇತರ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2018 ರಲ್ಲಿ ಮಡಿಕೇರಿ ತಾಲೂಕಿನ ಕಾಲೂರು, ತಂತಿಪಾಲ, ಮಕ್ಕಂದೂರು, ಎರಡನೇ ಮೊಣ್ಣಂಗೇರಿ ಸೇರಿದಂತೆ ಹಲವು ಗ್ರಾಮಗಳು, ಹಾಗೆಯೇ 2019 ರಲ್ಲಿ ತೋರ ಹಾಗೂ ಕಾವೇರಿ ನದಿ ಪಾತ್ರದ ಹಲವು ಗ್ರಾಮಗಳ ಜನರು ಮನೆ ಮಠ ಕಳೆದುಕೊಂಡು ಸಂತ್ರಸ್ತರಾದರು. ಇಂತಹ ಪ್ರಕೃತಿ ವಿಕೋಪ ಗ್ರಾಮಗಳ ಪುನರ್ ಜೀವನಕ್ಕೆ ಜಿಲ್ಲಾಡಳಿತ ಜೊತೆ ಸರ್ಕಾರೇತರ ಸಂಸ್ಥೆಗಳು ಸಹ ಕೈಜೋಡಿಸಿದಾಗ ಸಂತ್ರಸ್ತರ ಬದುಕಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪ್ರಕೃತಿ ವಿಕೋಪ ಪ್ರದೇಶದಲ್ಲಿ ಅಂಗನವಾಡಿ, ಶಾಲಾ ಕಟ್ಟಡ ನಿರ್ಮಾಣ, ಟೈಲರಿಂಗ್ ಸೇರಿದಂತೆ ವಿವಿಧ ಸ್ವ ಉದ್ಯೋಗ ತರಬೇತಿ ನೀಡುವುದು, ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವುದು, ಕೃಷಿ, ತೋಟಗಾರಿಕೆ ಹಾಗೂ ಹೈನುಗಾರಿಕೆಗೆ ಪ್ರೋತ್ಸಾಹಿಸು ವದು. ಹೀಗೆ ಸಮುದಾಯ ದತ್ತ ಹಲವು ಅಭಿವೃದ್ಧಿ ಚಟುವಟಿಕೆ ಕೈಗೊಳ್ಳುವಂತಾಗಲು ಕೈಜೋಡಿ¸ Àಬೇಕು ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಪ್ರತಿನಿಧಿ ಅಂಕಚಾರಿ ಮಾತನಾಡಿ ಪ್ರಕೃತಿ ವಿಕೋಪದ ಪ್ರದೇಶದಲ್ಲಿ ಶಾಲೆ, ಗಣಕಯಂತ್ರ ಕೊಠಡಿ, ಅಂಗನವಾಡಿ, ಕುಡಿಯುವ ನೀರು, ಶೌಚಾಲಯ ಹೀಗೆ ಹಲವು ಯೋಜನೆ ರೂಪಿಸಲಾಗಿದೆ ಎಂದು ಮಾಹಿತಿ ನೀಡಿದರು. ತೋಟ ಬೆಳೆಗಾರರ ಸಂಘದ ಪ್ರತಿನಿಧಿ ವಿಶ್ವನಾಥ ಶಾಲಾ ಕಟ್ಟಡ ಹಾಗೂ ಸಭಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಕುರಿತು ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್.ಗಾಯತ್ರಿ ಅವರು ಪಡಿಯಾಣಿ ಮತ್ತು ಅಯ್ಯಂಗೇರಿಯಲ್ಲಿ ಮೂರು ಶಾಲಾ ಕೊಠಡಿ ಹಾಗೂ ಎರಡು ಕೊಠಡಿ ಒಳಗೊಂಡ ಒಂದು ಸಭಾಂಗಣ ನಿರ್ಮಿಸುವ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಭಾರತೀಯ ವಿದ್ಯಾಭವನದ ಕಾರ್ಯದರ್ಶಿ ಬಾಲಾಜಿ ಕಶ್ಯಪ್ ಅವರು ಮಾತನಾಡಿ ಕಾಲೂರಿನಲ್ಲಿ ಸಂತ್ರಸ್ತರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು, ಶಾಲಾ ಸಮವಸ್ತ್ರ ನೀಡಿದ್ದಲ್ಲಿ ಹೊಲಿಗೆ ಮಾಡಿಕೊq Àಲಾಗುವದು ಎಂದು ತಿಳಿಸಿದರು. ಕ್ರೈಸ್ಟ್ ವಿಶ್ವವಿದ್ಯಾನಿಲಯದ ಶಿಬು ಕೆ.ಮಣಿ ಅವರು ಪ್ರಕೃತಿ ವಿಕೋಪದ ಪ್ರದೇಶದಲ್ಲಿ ಮೊದಲಿನಂತೆ ಕೃಷಿ ಚಟುವಟಿಕೆ ಕೈಗೊಳ್ಳಲು ಅಗತ್ಯ ಸಹಕಾರ ನೀಡಲಾಗುವದು ಎಂದರು.
ಟಾಟಾ ಟ್ರಸ್ಟ್ನ ಪ್ರತಿನಿಧಿ ಯೊಬ್ಬರು ಜಿಲ್ಲೆಯಲ್ಲಿ ಅತೀ ಹೆಚ್ಚು ಮಳೆಯಾಗುವ ಸೂರ್ಲಬ್ಬಿ ಪ್ರದೇಶದಲ್ಲಿ ಜಾನುವಾರು ಸಾಕಾಣಿಕೆಗೆ ವಿಫುಲ ಅವಕಾಶಗಳಿದ್ದು, ಹಾಲಿನ ಕೇಂದ್ರ ತೆರೆಯುವಂತಾಗಬೇಕು. ಇದರಿಂದ ಅಲ್ಲಿನ ಸ್ಥಳೀಯರಿಗೆ ಅನುಕೂಲ ವಾಗಲಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಹಾಸನ ಹಾಲು ಒಕ್ಕೂಟದ ಜಯಪ್ರಕಾಶ್ ಅವರು 5-6 ಊರಿನ ಗ್ರಾಮಸ್ಥರು ಸೇರಿ ಸಹಕಾರ ಸಂಘ ರಚಿಸಿಕೊಂಡು 2 ಸಾವಿರ ಲೀಟರ್ನಷ್ಟು ಹಾಲು ಉತ್ಪಾದಿಸಿದರೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಪ್ರತಿನಿಧಿ ರವೀಂದ್ರ ರೈ ಅವರು ಮಾತನಾಡಿ ಮಳೆಗಾಲದಲ್ಲಿ ಭಾಗಮಂಡಲದಲ್ಲಿ ಬೋಟ್ ಅಗತ್ಯವಿದ್ದು, ಬೋಟ್ ವ್ಯವಸ್ಥೆ ಕಲ್ಪಿಸಲಾಗುವದು ಎಂದರು. ಹ್ಯಾಬಿಟ್ಯಾಟ್ ಫಾರ್ ಹ್ಯೂಮಾನಿಟಿ ಸಂಸ್ಥೆಯ ಪ್ರತಿನಿಧಿ ಶ್ವೇತಾ ಅವರು ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಸರ್ಕಾರ ನೀಡುವ ಸಹಕಾರದ ಜೊತೆ ಸಂಸ್ಥೆಯೂ ಕೈಜೋಡಿಸಲಿದೆ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹಾ, ಯುನೆಸೆಫ್ ಸಂಸ್ಥೆಯ ಪ್ರತಿನಿಧಿಗಳಾದ ಪ್ರಭಾತ್, ಮನೋಹರ್, ಕರ್ನಲ್ ಮುತ್ತಣ್ಣ, ಕೊಡಗು ಮಾದರಿ ಅರಣ್ಯ ಟ್ರಸ್ಟ್ನ ಶೆರಿ ಸುಬ್ಬಯ್ಯ, ಕೊಡಗು ಫಾರ್ ಟುಮಾರೋ ಸಂಸ್ಥೆಯ ವಿಕ್ರಮ್ ಉತ್ತಪ್ಪ, ದೀಪಿಕಾ ತಿಮ್ಮಯ್ಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ರಾಜು, ಲೋಕೋಪಯೋಗಿ ಇಲಾಖೆ ಇಇ ಇಬ್ರಾಹಿಂ, ಪಂಚಾಯತ್ ರಾಜ್ ಇಲಾಖೆಯ ಇಂಜಿನಿಯರ್ ಪ್ರಭು, ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್, ಓಡಿಪಿ ಸಂಸ್ಥೆಯ ಜಾಯ್ಸ್ ಮೆನೇಜಸ್, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ತಮ್ಮಯ್ಯ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆಂಚಪ್ಪ, ಪೌರಾಯುಕ್ತ ರಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣಾಧಿಕಾರಿ ಕಾಶಿನಾಥ್, ಅನುರಾದ್ ಸಂಸ್ಥೆಯ ಪ್ರತಿನಿಧಿ ಸಲಿಲ ಪಾಟ್ಕರ್ ಇತರರು ಇದ್ದರು.