ವರದಿ: ದುಗ್ಗಳ ಸದಾನಂದ

ನಾಪೋಕ್ಲು, ನ. 28: ಭತ್ತದ ಬೆಳೆಯಿಂದ ರೈತರು ವಿಮುಖರಾಗುತ್ತಿರುವ ಕಾಲಘಟ್ಟದಲ್ಲಿ ಅಲ್ಪಸ್ವಲ್ಪ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿರುವ ರೈತರು ಇದೀಗ ಕಾಡುಹಂದಿಗಳ ಕಾಟದಿಂದ ಕಂಗಾಲಾಗುವಂತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ ಕಾಡುಹಂದಿಗಳ ಪಾಲಾಗುತ್ತಿರುವದರಿಂದ ‘ಕೈಗೆ ಬಂದ ತುತ್ತು ಬಾಯಿಗಿಲ್ಲ’ ಎಂಬಂತಾಗಿದೆ ರೈತರ ಪರಿಸ್ಥಿತಿ.

ಪಾರಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಹಾಗೂ ಕಿರುಂದಾಡು ಗ್ರಾಮದಲ್ಲಿ ಭತ್ತದ ಗದ್ದೆಗಳಿಗೆ ಕಾಡುಹಂದಿಗಳು ದಾಳಿ ಇಡುವ ಮೂಲಕ ವರ್ಷಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆ ಕೈಗೆಟುಕುವ ಸಮಯದಲ್ಲಿ ಕಾಡುಹಂದಿಗಳ ಪಾಲಾಗುತ್ತಿದೆ. ಕಾಡಾನೆ ಹಾವಳಿ, ಹುಲಿ ದಾಳಿಯಿಂದ ಕಂಗೆಟ್ಟ ರೈತರು ಇದೀಗ ಕಾಡುಹಂದಿಗಳ ಕಾಟದಿಂದ ತಲೆಮೇಲೆ ಕೈಹೊತ್ತು ಕೂರುವಂತಾಗಿದೆ.

ಕೈಕಾಡು ಹಾಗೂ ಕಿರುಂದಾಡು ಗ್ರಾಮದಲ್ಲಿ ನೂರರಲ್ಲಿ ಶೇಕಡ ಹತ್ತರಷ್ಟು ಮಂದಿ ಮಾತ್ರ ಭತ್ತ ಬೆಳೆಯುತ್ತಿದ್ದಾರೆ. ಆದರೆ ರಾತ್ರಿ ಸಮಯದಲ್ಲಿ ಅರಣ್ಯ ಪ್ರದೇಶದಿಂದ ಭತ್ತದ ಗದ್ದೆಗಳಿಗೆ ದಾಳಿ ಇಡುವ ಕಾಡುಹಂದಿಗಳು ಭತ್ತದ ಬೆಳೆಯನ್ನು ಸಂಪೂರ್ಣ ತಿಂದು ತುಳಿದು ಧ್ವಂಸಮಾಡುತ್ತಿವೆ. ಕಿರುಂದಾಡು ಗ್ರಾಮದ ಕುಮ್ಮಂಡ ಪೆಮ್ಮಯ್ಯ ಎಂಬವರು ತಮ್ಮ ಒಂದು ಏಕರೆಯಲ್ಲಿ ಬೆಳೆದಿದ್ದ ಭತ್ತದ ಫಸಲಿನಲ್ಲಿ ಅರ್ಧ ಎಕರೆಯಷ್ಟು ಭತ್ತ ಕಾಡುಹಂದಿಗಳ ಪಾಲಾಗಿದೆ. ಇದೇ ರೀತಿ ಗ್ರಾಮದ ಬಹುತೇಕ ರೈತರ ಪರಿಸ್ಥಿತಿಯೂ ಆಗಿದೆ.

ಕಾಡುಹಂದಿಗಳ ಕಾಟವನ್ನು ತಡೆಯಲು ರೈತರು ಗದ್ದೆಗಳಲ್ಲಿ ರಾತ್ರಿಯಿಡಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯುತ್ತಾ ಕಾಡುಹಂದಿಗಳನ್ನು ಓಡಿಸಬೇಕಾಗಿದೆ. ಗ್ರಾಮದ ಬಹುತೇಕ ರೈತರ ಬಳಿ ಬಂದೂಕುಗಳಿದ್ದರೂ ಸಹ ಕಾಡುಹಂದಿಗಳಿಗೆ ಗುಂಡು ಹೊಡೆಯಲು ಅನುಮತಿ ಇಲ್ಲದ್ದರಿಂದ ಕಾಡುಹಂದಿಗಳ ಕಾಟವನ್ನು ಸಹಿಸಿಕೊಂಡು ಕೈಕಟ್ಟಿ ಕೂರುವಂತಹ ಅಸಹಾಯಕ ಸ್ಥಿತಿ ರೈತರದ್ದಾಗಿದೆ.

ಕಾಡುಹಂದಿಗಳ ಹಾವಳಿ ಒಂದೆಡೆಯಾದರೇ, ಪಕ್ಷಿಗಳ ಹಾಗೂ ಮಂಗಗಳ ಕಾಟ ಮತ್ತೊಂದೆಡೆ, ಕಾಫಿತೋಟಗಳಿಗೆ ದಾಳಿ ಮಾಡುವ ಮಂಗಗಳ ಹಿಂಡು ಕಾಫಿಗಿಡದ ರೆಂಬೆಯನ್ನೆಲ್ಲಾ ಮುರಿದು ಹಾಕುತ್ತಿವೆ. ಅಲ್ಲದೇ ತೋಟದಲ್ಲಿ ಬೆಳೆದಿದ್ದ ಬಾಳೆಹಣ್ಣುಗಳನ್ನು ತಿಂದು ನಾಶಪಡಿಸುತ್ತಿರುವದರಿಂದ ಬಾಳೆಹಣ್ಣುಗಳನ್ನು ಬೆಳೆದು ಮಾರಾಟ ಮಾಡುತಿದ್ದ ರೈತರು ಇದೀಗ ಬಾಳೆಹಣ್ಣುಗಳನ್ನು ಖರೀದಿಸಿ ತಿನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿರುವದು ನಿಜಕ್ಕೂ ವಿಷಾದನೀಯ.

ಕಷ್ಟಪಟ್ಟು ಬೆಳೆದ ಕೃಷಿಫಸಲುಗಳು ಕಾಡುಪ್ರಾಣಿಗಳ ಪಾಲಾಗುತ್ತಿರುವದರಿಂದ ಅಲ್ಲದೇ ನಷ್ಟಕ್ಕೊಳಗಾದ ರೈತರಿಗೆ ಸೂಕ್ತ ಪರಿಹಾರವೂ ದೊರಕದ ಕಾರಣ ರೈತರು ಕಂಗಾಲಾಗಿದ್ದಾರೆ.