ಮಡಿಕೇರಿ, ನ. 28: ಮಾತೃ ಭಾಷೆಯಿಂದ ಮಾತ್ರ ಜ್ಞಾನ ವೃದ್ಧಿಯಾಗಲು ಸಾಧ್ಯ. ಆದ್ದರಿಂದ ಮಾತೃ ಭಾಷೆಯಾದ ಕನ್ನಡಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಜ್ಞಾನ-ಸ್ಥಾನ ಸಂಪಾದಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೊ ಕರೆ ನೀಡಿದರು.ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಗುರುವಾರ ನಡೆದ ದ್ವಿತೀಯ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾತೃ ಭಾಷೆಯಲ್ಲಿ ಕಲಿತಾಗ ಶಬ್ದ ಸಂಪತ್ತು ಬೆಳೆಯುತ್ತದೆ. ಇದರಿಂದ ಪಾಠವನ್ನು ಅರ್ಥೈಸಿ ಕೊಳ್ಳಲು ಸಹಕಾರಿಯಾಗುತ್ತದೆ. ಆದ್ದರಿಂದ ಮಾತೃ ಭಾಷೆಯನ್ನು ವೃದ್ಧಿಸಿಕೊಂಡು ಹೋದಲ್ಲಿ ಭಾಷಾ ಸಂಪತ್ತು ಬೆಳೆಯುತ್ತದೆ.

ವಿದ್ಯಾರ್ಥಿಗಳು ಹಿಂದೆ ಪುಸ್ತಕ ಓದುವದು ಮತ್ತು ಆಟವಾಡುವ ಅಭ್ಯಾಸ ಬೆಳೆಸಿಕೊಂಡಿದ್ದರು, ಮೊಬೈಲ್ ಬಂದ ನಂತರ ಒಳ್ಳೆಯ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ. ಇದರಿಂದ ಭಾಷೆ ವೃದ್ಧಿಯಾಗಲು ಸಾಧ್ಯವೇ ಎಂದು ಪಿ.ಎಸ್. ಮಚ್ಚಾಡೊ ಅವರು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಯೊಬ್ಬರು ಚಿಂತಿಸಬೇಕೆಂದರು.

ಗಾಳಿಬೀಡು ನವೋದಯ ವಿದ್ಯಾಲಯದ ಶಿಕ್ಷಕರಾದ ಮಾರುತಿ ದಾಸಣ್ಣವರ್ ಮಾತನಾಡಿ ಮಾತೃ ಭಾಷೆಗೆ ಇತರ ಎಲ್ಲಾ ಭಾಷೆಗಳ ಶಬ್ದಗಳನ್ನು ಅರಗಿಸಿಕೊಳ್ಳುವ ಶಕ್ತಿ ಇದೆ. ಆದ್ದರಿಂದ ಮಾತೃ ಭಾಷೆ ಕಲಿಕೆ ಮತ್ತು ಓದುವದಕ್ಕೆ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಮತ್ತು ಸಂಸ್ಕøತಿ ಉಳಿಸಿ, ಬೆಳೆಸಬೇಕು ಎಂದರು.

ತಾ.ಪಂ. ಇಒ ಪಿ. ಲಕ್ಷ್ಮಿ ಮಾತನಾಡಿ ಮಾತೃ ಭಾಷೆಯಲ್ಲಿ ಕಲಿಯುವದರಿಂದ ಪರಿಪೂರ್ಣತೆ ಪಡೆಯಬಹುದು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಎಸ್. ಚೇತನ್ ಮಾತನಾಡಿ ಕನ್ನಡ ಭಾಷೆ ಉಳಿಸಿ ಬೆಳೆಸಲು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಮಾತ್ರ ಸರ್ಕಾರಿ ಕ್ಷೇತ್ರದಲ್ಲಿ ಉದ್ಯೋಗವಕಾಶ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು.

ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ವತಿಯಿಂದ ಕನ್ನಡ ಭಾಷೆ ಬೆಳವಣಿಗೆ ಸಂಬಂಧಿಸಿದಂತೆ ಸಾಹಿತ್ಯ ಸಂವಾದ, ವಚನಕಾರರ ಸಮ್ಮೇಳನ, ಉದಯೋನ್ಮುಕ ಬರಹಗಾರರ ಸಮ್ಮೇಳನ ಹೀಗೆ ಪ್ರತಿ ತಿಂಗಳು ಒಂದು ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.

ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ. ರಮೇಶ್, ಕೊಡಗು ಪತ್ರಿಕಾ ಭವನ ಟ್ರಸ್ಟಿ ಬಿ.ಎನ್. ಮನುಶೆಣೈ, ಜಿಲ್ಲಾ ವಾಣಿಜ್ಯೋದ್ಯಮಿಗಳ ಸಹಕಾರ ಸಂಘದ ಅಧ್ಯಕ್ಷ ಕೆ.ಎಂ.ಬಿ. ಗಣೇಶ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಬಳಗದ ಪ್ರಧಾನ ಕಾರ್ಯದರ್ಶಿ ವಿಲ್ಫ್ರೆಡ್ ಕ್ತಾಸ್ತ, ಮಾದೇಟಿರ ಬೆಳ್ಯಪ್ಪ, ಕೆ.ಟಿ. ಬೇಬಿಮ್ಯಾಥ್ಯೂ, ಕೋಡಿ ಚಂದ್ರ ಶೇಖರ್, ಜಯಪ್ರಕಾಶ್, ಲತೀಫ್, ಅಂಬೆಕಲ್ ನವೀನ್ ಇತರರು ಇದ್ದರು.

ಬಳಗದ ನಿರ್ದೇಶಕರಾದ ಲೋಕನಾಥ ಅಮೆಚೂರ್ ಸ್ವಾಗತಿಸಿದರು, ಮುನೀರ್ ಅಹ್ಮದ್ ಮತ್ತು ರೇವತಿ ರಮೇಶ್ ನಿರೂಪಿಸಿದರು, ಲಿಯಾಕತ್ ಅಲಿ ಮತ್ತು ತಂಡದವರು ನಾಡಗೀತೆ ಹಾಡಿದರು. ಪಿ.ಪಿ. ಸುನಿತಾ ವಂದಿಸಿದರು. ಸಭಾ ಕಾರ್ಯ ಕ್ರಮಕ್ಕೂ ಮೊದಲು ರಾಷ್ಟ್ರಕವಿ ಕುವೆಂಪು ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಶಿಕ್ಷಕರ ತಂಡದಿಂದ ನಾಟಕ ಸ್ಪರ್ಧೆ, ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕನ್ನಡದ ಕವಿಗಳು ರಚಿತ ಗೀತಾ ಗಾಯನ ಸ್ಪರ್ಧೆ ನಡೆಯಿತು.

2018-19 ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.