ಪೊನ್ನಂಪೇಟೆ, ನ.27: ನಾಗರ ಹಾವೊಂದು ಎರಡೂ ಕಡೆ ಕತ್ತರಿಸಿ ಎಸೆಯಲ್ಪಟ್ಟಿದ್ದ ಸಣ್ಣ ಪ್ಯಾರಾಚೂಟ್ ಕೊಬ್ಬರಿ ಎಣ್ಣೆ ಡಬ್ಬದಲ್ಲಿ ಸಿಲುಕಿಕೊಂಡಿತ್ತು. ನಾಗರ ಹಾವಿನ ಬೆನ್ನಿನ ಭಾಗಕ್ಕೆ ಕೊಬ್ಬರಿ ಎಣ್ಣೆ ಡಬ್ಬ ಬಿಗಿದುಕೊಂಡಿದ್ದರಿಂದ ನೋವಿನಿಂದ ನರಳಾಡುತ್ತಾ ಅದು ಪೊನ್ನಂಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣಕ್ಕೆ ಪ್ರವೇಶಿಸಿ ಪಕ್ಕದಲ್ಲಿದ್ದ ಹಳೇ ಕಟ್ಟದ ಮೆಟ್ಟಿಲ ಕೆಳಗೆ ಆಶ್ರಯ ಪಡೆದುಕೊಂಡಿತ್ತು.
ಹಾವನ್ನು ಸಂಘದ ಅಧ್ಯಕ್ಷ ಚೀರಂಡ ಕಂದಾ ಸುಬ್ಬಯ್ಯ ಅವರು ಸೂಕ್ಷ್ಮವಾಗಿ ಗಮನಿಸಿದಾಗ ಅದರ ಮೈಗೆ ನೀಲಿ ಬಣ್ಣದ ವಸ್ತು ಸುತ್ತಿಕೊಂಡಿರುವದನ್ನು ಕಂಡು ಉರಗ ಪ್ರೇಮಿ ಸ್ನೇಕ್ ಶರತ್ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣ ಶರತ್‍ಕಾಂತ್ ಹಾಗೂ ಭಾವೆ ಆಗಮಿಸಿ ಹಾವನ್ನು ಹಿಡಿದು ಅದರ ಮೈಗೆ ಸಿಲುಕಿಕೊಂಡಿದ್ದ ಕೊಬ್ಬರಿ ಎಣ್ಣೆ ಡಬ್ಬವನ್ನು ಕತ್ತರಿಸಿ ಹಾವಿಗೆ ಹಿಂಸೆಯಾಗದ ರೀತಿಯಲ್ಲಿ ಸುರಕ್ಷಿತವಾಗಿ ಹೊರತೆಗೆದು ಗಾಯಕ್ಕೆ ಅರಶಿನ ಪುಡಿ ಹಚ್ಚಿ ಪ್ರಥಮ ಚಿಕಿತ್ಸೆ ಮಾಡಿ ನಂತರ ತಿತಿಮತಿ ಅಭಯಾರಣ್ಯಕ್ಕೆ ಬಿಟ್ಟರು.
ಸಾರ್ವಜನಿಕರು ತಾವು ಉಪಯೋಗಿಸಿದ ನಂತರ ಪ್ಲಾಸ್ಟಿಕ್ ಹಾಗೂ ಇನ್ನಿತರ ಡಬ್ಬಗಳನ್ನು ಎಲ್ಲೆಂದರಲ್ಲಿ ಎಸೆಯುವದರಿಂದ ಅದರೊಳಗೆ ಸಿಲುಕಿಕೊಂಡು ಅಥವಾ ಅದನ್ನು ನುಂಗಿ ಪ್ರಾಣಿಗಳು ತೊಂದರೆಗೊಳಗಾಗುತ್ತವೆ. ಈ ರೀತಿ ಮಾಡದೆ ಅಂತಹ ತ್ಯಾಜ್ಯವನ್ನು ಶೇಖರಿಸಿಟ್ಟುಕೊಂಡು ಕಸದ ಗಾಡಿಗಳಿಗೆ ನೀಡಿದರೆ ಇಂತಹ ಅಪಾಯಗಳನ್ನು ತಪ್ಪಿಸ ಬಹುದು ಎಂದು ಉರಗ ಪ್ರೇಮಿ ಶರತ್‍ಕಾಂತ್ ಅಭಿಪ್ರಾಯ ಹಂಚಿಕೊಂಡರು.
-ಚನ್ನನಾಯಕ