ಮಡಿಕೇರಿ, ನ. 27: ಕೊಡಗಿನ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಮನೆಗಳನ್ನು ನಿರ್ಮಿಸಿದ ಯೋಜನೆಗಾಗಿ ರೋಟರಿ ಜಿಲ್ಲೆ 3181ನ ರೀಬಿಲ್ಡ್ ಕೊಡಗು ಯೋಜನಾ ಸಮಿತಿಗೆ ಬಿರ್ಲಾ ಸಮೂಹ ಸಂಸ್ಥೆ ವತಿಯಿಂದ ಗೌರವ ಸನ್ಮಾನ ಸಂದಿದ್ದು, ಸಮಿತಿ ಅಧ್ಯಕ್ಷ ಡಾ. ರವಿ ಅಪ್ಪಾಜಿ ಅವರನ್ನು ಈ ನಿಟ್ಟಿನಲ್ಲಿ ಗೌರವಿಸಲಾಯಿತು. ಕೊಡಗಿನಲ್ಲಿ 2018ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ರೋಟರಿ ಜಿಲ್ಲೆ 3181 ವತಿಯಿಂದ ಸ್ಥಾಪಿತವಾದ ರೀಬಿಲ್ಡ್ ಕೊಡಗು ಯೋಜನೆಯಡಿ 25 ಮನೆಗಳನ್ನು ಮಾದಾಪುರ ಬಳಿಯ ಇಗ್ಗೋಡ್ಲು ಗ್ರಾಮದಲ್ಲಿ ನಿರ್ಮಿಸಲಾಗಿತ್ತು.

ಸಂತ್ರಸ್ತರಿಗಾಗಿ ವಿಳಂಬರಹಿತವಾಗಿ ಮನೆ ನಿರ್ಮಿಸಿಕೊಟ್ಟ ಹಿನ್ನೆಲೆಯಲ್ಲಿ ರೀಬಿಲ್ಡ್ ಕೊಡಗು ಯೋಜನಾ ಸಮಿತಿ ಅಧ್ಯಕ್ಷ ರೋಟರಿ ಜಿಲ್ಲೆಯ ಮಾಜಿ ಗವರ್ನರ್ ಮತ್ತು ಮಡಿಕೇರಿ ರೋಟರಿ ಕ್ಲಬ್ ಸದಸ್ಯರಾದ ಡಾ. ರವಿ ಅಪ್ಪಾಜಿ ಅವರಿಗೆ ಬಿರ್ಲಾ ಸಮೂಹ ಸಂಸ್ಥೆಯ ಅಧ್ಯಕ್ಷೆ ಮತ್ತು ಹ್ಯಾಬಿಟೇಟ್ ಫಾರ್ ಹ್ಯುಮ್ಯಾನಿಟಿ ಇಂಡಿಯಾ ಸಂಸ್ಥೆಯ ಸಲಹಾ ಸಮಿತಿ ಅಧ್ಯಕ್ಷೆ ರಾಜಶ್ರೀ ಬಿರ್ಲಾ ಅವರು ಮುಂಬೈನಲ್ಲಿ ಆಯೋಜಿತ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಡಾ. ರವಿ ಅಪ್ಪಾಜಿ, ದೇಶವ್ಯಾಪಿ ರೋಟರಿ ಸದಸ್ಯರ ಆರ್ಥಿಕ ನೆರವಿನಿಂದ ಕೊಡಗಿನ ಅವರ ಸ್ವಂತ ಜಾಗದಲ್ಲಿಯೇ 5.05 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಮನೆ ನಿರ್ಮಿಸಿಕೊಡುವ ಯೋಜನೆ ಸಾಕಾರಗೊಂಡಿದೆ. ಮುಂದಿನ ಹಂತದಲ್ಲಿ 2020ರ ಮಾರ್ಚ್ ಒಳಗಾಗಿ ಗರಗಂದೂರು ವ್ಯಾಪ್ತಿಯಲ್ಲಿ 25 ಮನೆಗಳು ಸೇರಿದಂತೆ ಒಟ್ಟು 50 ಮನೆಗಳನ್ನು ರೀಬಿಲ್ಡ್ ಕೊಡಗು ಯೋಜನೆಯಡಿ ನಿರ್ಮಿಸಲಾಗುತ್ತದೆ. ಒಟ್ಟು 2.55 ಕೋಟಿ ರೂ. ವೆಚ್ಚದ ಯೋಜನೆ ಇದಾಗಿದೆ ಎಂದು ಹೇಳಿದರು.