(ವಿಶೇಷ ವರದಿ: ಹೆಚ್.ಕೆ. ಜಗದೀಶ್)
ಗೋಣಿಕೊಪ್ಪ, ನ. 26: ಕೊಡಗಿನಲ್ಲಿ ಅತ್ಯಧಿಕ ವರಮಾನವಿರುವ ಪಂಚಾಯ್ತಿಯೆಂದೇ ಹೆಸರುವಾಸಿಯಾಗಿರುವ ವಾಣಿಜ್ಯ ನಗರ ಗೋಣಿಕೊಪ್ಪ ಪಂಚಾಯ್ತಿ ಕುಡಿಯುವ ನೀರು, ಬೀದಿ ದೀಪ ಬಳಕೆಯ ವಿದ್ಯುತ್ ಬಿಲ್ ಅನ್ನು ಬಾಕಿ ಉಳಿಸಿಕೊಂಡಿದ್ದು, ಇದರ ಮೊತ್ತ 76,38,927 ಆಗಿದೆ. ಪಂಚಾಯ್ತಿ ಸಭೆಗಳಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಾದರೂ ವಿದ್ಯುತ್ ಬಿಲ್ ಮಾತ್ರ ಪ್ರತಿ ತಿಂಗಳು ಏರಿಕೆಯಾಗುತ್ತಲೇ ಬಂದಿದೆ. ಮಾಸಿಕ ಅಂದಾಜು 2 ಲಕ್ಷ ವಿದ್ಯುತ್ ಬಿಲ್ ಬರುತ್ತಿದ್ದ ಈ ಪಂಚಾಯ್ತಿ ನಿಗದಿತ ಸಮಯದಲ್ಲಿ ವಿದ್ಯುತ್ ಬಿಲ್ಲ್‍ನ ಹಣವನ್ನು ಚೆಸ್ಕಾಂ ಇಲಾಖೆಗೆ ಸಂದಾಯ ಮಾಡದ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಅಂದಾಜು 75 ಸಾವಿರ ಬಡ್ಡಿ ಬೆಳೆಯುತ್ತಲೇ ಇದೀಗ ಇಷ್ಟು ದೊಡ್ಡ ಮೊತ್ತವನ್ನು ಕಟ್ಟಲಾರದ ಪರಿಸ್ಥಿತಿಗೆ ತಲಪಿದೆ.
ಕಳೆದ ಮೂರು ತಿಂಗಳ ಹಿಂದೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡ ನೂತನ ಪಿಡಿಒ ಶ್ರೀನಿವಾಸ್ ಈ ಬಗ್ಗೆ ಸ್ವತಃ ವಿಶೇಷ ಆಸಕ್ತಿ ವಹಿಸಿ ತನಿಖೆಗಿಳಿದು ಮೀಟರ್ ಬೋರ್ಡ್‍ನ್ನು ಚೆಸ್ಕಾಂ ಸಿಬ್ಬಂದಿಯ ಸಹಕಾರದಿಂದ ಪರಿಶೀಲನೆ ಮಾಡಿದ ಸಂದರ್ಭ ಇವರಿಗೆ ಅಚ್ಚರಿ ಕಾದಿತ್ತು. ಕೆಲವು ಮೀಟರ್‍ಗಳು ಕೆಟ್ಟು ನಿಂತಿದ್ದು, ಇವುಗಳಿಗೆ ಒಂದೇ ಸಮನೆ ಬಿಲ್ ಹಾಕುತ್ತಿದ್ದಾರೆ. ಸಿಬ್ಬಂದಿಯನ್ನು ಪ್ರಶ್ನಿಸಿದಾಗ ಇದು ಸರಿಯಾಗಿದೆ ಎಂಬ ಹಾರಿಕೆಯ ಉತ್ತರ ನೀಡಿ ನುಣುಚಿಕೊಳ್ಳುವ ಸಂದರ್ಭ ಕಂಡು ಬಂತು. ಪಿಡಿಒ ಶ್ರೀನಿವಾಸ್ ಪಂಚಾಯ್ತಿ ವ್ಯಾಪ್ತಿಯಲ್ಲಿರುವ 5, 7.5 ಹಾಗೂ 10 ಹೆಚ್.ಪಿ.ಯ ನೀರಿನ ಮೋಟಾರ್‍ಗಳಿಗೆ ಅಳವಡಿಸಿರುವ ಮೀಟರ್‍ಗಳು ಸೇರಿದಂತೆ ಒಟ್ಟು 41 ವಿದ್ಯುತ್ ಮೀ.ಗಳನ್ನು ಸ್ವತಃ ಪರಿಶೀಲನೆ ನಡೆಸಿ ಮೀಟರ್ ರೀಡರ್ ತೆಗೆದಿದ್ದಾರೆ. ಇವುಗಳನ್ನು ಕೂಲಂಕಷವಾಗಿ ಅಂಕಿ ಅಂಶಗಳ ಸಹಿತ ಪರಿಶೀಲನೆ ಮಾಡಿದಾಗ ಚೆಸ್ಕಾಂ ಇಲಾಖೆ ಪಂಚಾಯ್ತಿಗೆ ಪ್ರತಿ ತಿಂಗಳು ನೀಡುವ ಬಿಲ್‍ಗೆ ತಾಳೆಯಾಗದಿರುವ ಬಗ್ಗೆ ಬೆಳಕಿಗೆ ಬಂದಿದೆ.
ಕಳೆದ ಮಾರ್ಚ್ ತಿಂಗಳಿನಲ್ಲಿ ಚೆಸ್ಕಾಂ ಇಲಾಖೆಗೆ ಎಸ್ಕ್ರೋ ಖಾತೆಯಿಂದ ಮೂರು ಲಕ್ಷದ ಅರುವತ್ತಾರು ಸಾವಿರ ಜಮಾ ಮಾಡಲಾಗಿದೆ. ಪರಿಶೀಲನೆ ವೇಳೆ ಚೆಸ್ಕಾಂ ಇಲಾಖೆ ಮೀಟರ್‍ನಲ್ಲಿ ಓಡಿರುವ ಯೂನಿಟ್‍ಗಳನ್ನು ಸರಿಯಾಗಿ ಗಮನಿಸದೆ ತಮಗೆ ಇಷ್ಟ ಬಂದ ರೀತಿಯಲ್ಲಿ ಬಿಲ್‍ಗಳನ್ನು ಕಳುಹಿಸಿರುವದು ತಿಳಿದು ಬಂದಿದೆ. ಹಲವಾರು ಪಂಚಾಯ್ತಿಗಳಲ್ಲಿ ಇದೇ ರೀತಿಯ ಮಾತುಗಳು ಕೇಳಿ ಬಂದಿವೆ. ನಗರದಲ್ಲಿ 480 ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ. ಎರಡು ಹೈ ಮಾಸ್ಕ್ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ದೀಪ ಅಳವಡಿಸಲಾಗಿದ್ದು, 200 ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸಲಾಗಿದೆ. ಪ್ರತಿ ತಿಂಗಳ 5ನೇ ತಾರೀಖಿನ ಒಳಗೆ ಚೆಸ್ಕಾಂ ಇಲಾಖೆ ವಿದ್ಯುತ್ ಬಿಲ್ ನೀಡಬೇಕೆಂಬ ನಿಯಮವಿದ್ದರೂ 15ನೇ ತಾರೀಖಿನ ನಂತರ ಬಿಲ್ ನೀಡಲಾಗುತ್ತಿದೆ. ಈ ಹತ್ತು ದಿನದ ಬಿಡುವಿನಲ್ಲಿ ಇಲಾಖೆಯು ಬಡ್ಡಿ ವಿಧಿಸುತ್ತಿದೆ. 24 ವಿದ್ಯುತ್ ಮೀಟರ್‍ಗಳು ಅಳವಡಿಸಲಾಗಿದ್ದು ಕುಡಿಯುವ ನೀರಿಗಾಗಿ 17 ಮೀಟರ್ ಕೆಲಸ ನಿರ್ವಹಿಸುತ್ತಿವೆ.
ಕುಡಿಯುವ ನೀರಿನ ಘಟಕದ ಮೀಟರ್ ಅಳವಡಿಸಲು 5,7.5,ಹಾಗೂ 10ಹೆಚ್.ಪಿ.ಯ ನೀರಿನ ಮೋಟಾರ್‍ಗಳಿಗೆ ಅನುಮತಿ ಪಡೆದ ನಂತರ ಇಲಾಖೆಯು ಮೀಟರ್ ಅಳವಡಿಸುತ್ತದೆ. ದಿನ ಕಳೆದಂತೆ ಮೋಟಾರ್‍ಗಳು ದುರಸ್ತಿಗೆ ಬಂದ ಸಂದರ್ಭ ಈ ಮೋಟಾರ್‍ಗಳನ್ನು ದುರಸ್ತಿಪಡಿಸಿ ಮತ್ತೆ ಅಳವಡಿಸಿದ ಸಂದರ್ಭ ಒಂದಷ್ಟು ವ್ಯತ್ಯಾಸಗಳು ಕಂಡು ಬರುತ್ತದೆ. ಈ ವ್ಯತ್ಯಾಸವನ್ನೇ ಗುರಿಯಾಗಿಸಿಕೊಂಡಿರುವ ಚೆಸ್ಕಾಂನ ವಿಜಿÉಲೆನ್ಸ್ ತಂಡ ಇಂತಹ ಮೋಟಾರ್ ಅಳವಡಿಸಿರುವ ಮೀಟರ್ ಬೋರ್ಡ್ ಬಳಿ ತೆರಳಿ ಅನುಮತಿಗಿಂತ ಹೆಚ್ಚಾಗಿ ವಿದ್ಯುತ್ ಬಳಸುತ್ತಿದ್ದಿರಿ ಎಂಬ ಕಾರಣ ನೀಡಿ ಲಕ್ಷಾಂತರ ಹಣವನ್ನು ದಂಡದ ರೂಪದಲ್ಲಿ ವಿಧಿಸುತ್ತಿದ್ದಾರೆ. ನಿಗದಿತ ಸಮಯದಲ್ಲಿ ಮೀಟರ್ ಬೋರ್ಡ್‍ಗಳು ತೊಂದರೆಯಲ್ಲಿರುವದನ್ನು ಬದಲಾಯಿಸಲು ಇಲಾಖೆಗೆ ಪತ್ರ ಬರೆದರೂ ಈ ಬಗ್ಗೆ ಅಷ್ಟೇನು ತಲೆಕೆಡಿಸಿಕೊಳ್ಳದ ಚೆಸ್ಕಾಂ ಇಲಾಖೆ ನಿಗಮಕ್ಕೆ ಯಾವೆಲ್ಲ ಮೂಲದಿಂದ ಹಣ ಸಂದಾಯವಾಗಬಹುದೆಂಬ ನಿರೀಕ್ಷೆಯಲ್ಲಿಯೇ ದಿನ ದೂಡುತ್ತಿರುವದು ಇದೀಗ ಗುಟ್ಟಾಗಿ ಉಳಿದಿಲ್ಲ.