ವೀರಾಜಪೇಟೆ, ನ. 26: ಪಟ್ಟಣದ ರಸ್ತೆ ಅಗಲೀಕರಣ ಕಾಮಗಾರಿಯನ್ನು ಪ್ರಾರಂಭಿಸಲಾಗ ದಿದ್ದರೆ ಪಟ್ಟಣದ ಈಗಿನ ಪಾರ್ಕಿಂಗ್ ವ್ಯವಸ್ಥೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಏಕಮುಖ ಸಂಚಾರವನ್ನು ರದ್ದುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಆಟೋ ಚಾಲಕರ ಪರವಾಗಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಎಂ.ಎಂ ಪರಮೇಶ್ವರ್ ಶಾಸಕರು ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಹುತೇಕ ಅಂಗಡಿ ಮಾಲೀಕರು ಮತ್ತು ಸಾರ್ವಜನಿಕರು ವಾಹನಗಳನ್ನು ಬೆಳಿಗ್ಗೆ ನಿಲುಗಡೆ ಮಾಡಿ ಸಂಜೆ ಹೋಗುತ್ತಾರೆ. ಗ್ರಾಮೀಣ ಭಾಗದಿಂದ ಬರುವ ಜನರಿಗೆ ಪಾರ್ಕಿಂಗ್ ವ್ಯವಸ್ಥೆ ಇರುವದಿಲ್ಲ. ಅಭಿವೃದ್ದಿ ದೃಷ್ಟಿಯಲ್ಲಿ ರಸ್ತೆ ಅಗಲೀಕರಣ ಆಗಬೇಕು. ರಸ್ತೆಯ ಅಗಲೀಕರಣ ವಿಚಾರದಲ್ಲಿ ಮೇಲ್ನೋಟಕ್ಕೆ ಗೊಂದಲಗಳು ಕಂಡು ಬರುತ್ತಿಲ್ಲ. ಆದರೆ ಪರಿಹಾರದ ವಿಚಾರದಲ್ಲಿ ಗೊಂದಲಗಳಿರು ವದರಿಂದ ಸರ್ಕಾರ ಹಾಗೂ ಶಾಸಕರು ಒಮ್ಮತದ ರೀತಿಯಲ್ಲಿ ಬಗೆಹರಿಸಬೇಕಾಗಿದೆ ಎಂದು ಹೇಳಿದರು.

ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಎನ್.ಎಂ. ಶಿವು ಮಾತನಾಡಿ ಪಟ್ಟಣದ ಮುಖ್ಯರಸ್ತೆ ಬಹಳ ಕಿಷ್ಕಿಂಧೆಯಾಗಿದ್ದು ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಸಾಮಗ್ರಿಗಳನ್ನು ಖರೀದಿಸಲು ಗೋಣಿಕೊಪ್ಪಕ್ಕೆ ತೆರಳುತ್ತಿದ್ದಾರೆ. ಮುಂದಿನ ವರ್ಷ ಕೌಟುಂಬಿಕ ಹಾಕಿ ಮುಕ್ಕಾಟಿರ ಕಪ್ ಹಾಗೂ ಪೊರ್ಕೊಂಡ ಕಪ್ ಕ್ರಿಕೆಟ್ ಪಂದ್ಯಾಟಗಳು ಪಟ್ಟಣ ಹಾಗೂ ಬಾಳುಗೋಡುವಿನಲ್ಲಿ ನಡೆಯು ವದರಿಂದ ಟ್ರಾಫಿಕ್ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಡಿಸೆಂಬರ್ 31ರ ಒಳಗಾಗಿ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡದಿದ್ದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಆಟೋ ಚಾಲಕರು ಮಾಲೀಕರು ಒಂದು ದಿನ ಪ್ರತಿಭಟನೆ ನಡೆಸಿ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆಟೋ ಸಂಚಾರ ಬಂದ್ ಮಾಡಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಆಟೋ ಚಾಲಕರಾದ ಸೋಮಶೇಖರ್, ಮಣಿಕಂಠ, ಸುರೇಶ್‍ಕುಮಾರ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.