ಮಡಿಕೇರಿ, ನ.26 : ಮೂರ್ನಾಡು ಸಮೀಪದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರ್ನಾಡು- ಕುಂಬಳದಾಳು-ಕೊಟ್ಟಮುಡಿ ನಾಪೋಕ್ಲು ರಸ್ತೆಯ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲವಾಗಿದ್ದಾರೆ.

ಅತ್ತ ನಾಪೋಕ್ಲುವಿನಿಂದ ಹಾಗೂ ಇತ್ತ ಮೂರ್ನಾಡುವಿನಿಂದ ಕುಂಬಳದಾಳು ಗ್ರಾಮಕ್ಕೆ ಸಂಪರ್ಕಿಸಲು ಇರುವ ಏಕೈಕ ಪ್ರಮುಖ ರಸ್ತೆ ಇದಾಗಿದ್ದು, ಮಳೆಗಾಲದಲ್ಲಿ ಹೊದ್ದೂರು ಬಳಿ ಕಾವೇರಿ ಉಕ್ಕಿ ಹರಿಯುವ ಸಂದರ್ಭ ಮೂರ್ನಾಡು-ನಾಪೋಕ್ಲು ನಡುವೆ ಸಂಪರ್ಕ ರಸ್ತೆಯಾಗಿಯೂ ಇದೇ ರಸ್ತೆ ಬಳಕೆಯಾಗುತ್ತಿದೆ.

ಆದರೆ ದಿನಂಪ್ರತಿ ನೂರಾರು ವಾಹನಗಳು, ಸಾವಿರಾರು ಮಂದಿ ಗ್ರಾಮಸ್ಥರು ಓಡಾಡುವ ಈ ರಸ್ತೆಗೆ ಕಾಯಕಲ್ಪ ಕಲ್ಪಿಸಲು ಮಾತ್ರ ಯಾರೂ ಮುಂದಾಗುತ್ತಿಲ್ಲ ಎಂಬದು ಕುಂಬಳದಾಳು, ಕುಯ್ಯಂಗೇರಿ, ಹೊದವಾಡ, ಕೊಟ್ಟಮುಡಿ, ಹೊದ್ದೂರು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ವಿಚಾರ ತಿಳಿಸಿದ ಗ್ರಾಮಸ್ಥರು ಈ ರಸ್ತೆ ಸ್ವಲ್ಪ ಮಟ್ಟಿಗೆ ವಾಹನ ಸಂಚಾರಕ್ಕೆ ಯೋಗ್ಯವಾಗಿತ್ತು. ಆದರೆ ಪ್ರಸಕ್ತ ಸಾಲಿನ ಮಾರ್ಚ್ ತಿಂಗಳಿನಲ್ಲಿ ಅಂದಿನ ಲೋಕೋಪಯೋಗಿ ಇಲಾಖೆ ಸಚಿವರಾಗಿದ್ದ ಹೆಚ್.ಡಿ. ರೇವಣ್ಣ ಅವರ ಅಣತಿಯಂತೆ ಮಂಡ್ಯದ ಗುತ್ತಿಗೆದಾರರೊಬ್ಬರು ರಸ್ತೆಯನ್ನು ಅಭಿವೃದ್ಧಿಯ ನೆಪದಲ್ಲಿ ಅಗೆದು ಹಾಕಿದ್ದಾರೆ. ಅಲ್ಪ ಮಟ್ಟಿಗೆ ಉತ್ತಮವಾಗಿದ್ದ ರಸ್ತೆಯ ಎರಡೂ ಬದಿಯಲ್ಲಿ ತಲಾ 4 ಅಡಿಯಷ್ಟು ಅಗಲ ಹಾಗೂ 2 ಅಡಿ ಆಳದವರೆಗೆ ಜೆಸಿಬಿಯಿಂದ ಅಗೆದು ಗುಂಡಿ ಮಾಡಿರುವ ಗುತ್ತಿಗೆದಾರರು, ಆ ಮಣ್ಣನ್ನು ರಸ್ತೆಯ ಚರಂಡಿಗೆ ಹಾಕಿ ಚರಂಡಿಯನ್ನು ಮುಚ್ಚಿದ್ದಾರೆ. ಆದರೆ ಇದೀಗ ಸುಮಾರು 8 ತಿಂಗಳಾದರೂ ಯಾವದೇ ಕೆಲಸ ನಿರ್ವಹಿಸದೆ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಪರಿಣಾಮವಾಗಿ ಮಳೆಗಾಲದಲ್ಲಿ ರಸ್ತೆ ಮತ್ತು ಮಣ್ಣು ಕಿತ್ತುಹೋಗಿ ರಸ್ತೆಯ ಅಗಲವೂ ಕಿರಿದಾಗಿದ್ದು, ಇದರಿಂದಾಗಿ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಒಂದು ಸರಕಾರಿ ಬಸ್ ಕೂಡಾ ಇಲ್ಲದಂತಾಗಿದೆ. ಇದರೊಂದಿಗೆ ರಸ್ತೆಯ ಅವ್ಯವಸ್ಥೆ ಯಿಂದಾಗಿ ಯಾವದೇ ಖಾಸಗಿ ವಾಹನಗಳು ಕೂಡಾ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಈ ರಸ್ತೆಯಲ್ಲಿ ಎದುರುಬದುರಾಗಿ ಎರಡು ವಾಹನಗಳು ಬಂದರೆ ದಾರಿ ಬಿಟ್ಟುಕೊಡಲು ಸಾಧ್ಯವಾಗದೆ ಚಾಲಕರು ಪರದಾಡುವಂತಾಗಿದೆ. ಶಾಲಾ ಬಸ್‍ಗಳು ಕೂಡಾ ಸಂಚರಿಸಲು ತೊಂದರೆಯಾಗಿದ್ದು, ಶಾಲಾ ಮಕ್ಕಳು 4-5 ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಮೂರ್ನಾಡು ಪಟ್ಟಣದ ಮುಖ್ಯದ್ವಾರದ ಬಳಿ ಈ ರಸ್ತೆಯನ್ನೇ ಅತಿಕ್ರಮಿಸಿ ಮಿಲ್ ಹಾಗೂ ಎರಡು ಹೊಟೇಲ್‍ಗಳನ್ನು ನಿರ್ಮಿಸಲಾಗಿದ್ದು, ಇದರಿಂದಾಗಿ ಆ ಮಾರ್ಗಕ್ಕೆ ದೊಡ್ಡ ವಾಹನಗಳು ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ. ಈ ಕಟ್ಟಡಗಳನ್ನು ತೆರವುಗೊಳಿಸುವಂತೆ ಒತ್ತಾಯಿಸಿ 2007ರಿಂದ ಗ್ರಾಮಸ್ಥರು ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವದರೊಂದಿಗೆ ಮೂರ್ನಾಡು-ವೀರಾಜಪೇಟೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರೂ, ಅಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ನೀಡಿದ ಆಶ್ವಾಸನೆಗಳನ್ನು 12 ವರ್ಷಗಳಾದರೂ ಈಡೇರಿಸಿಲ್ಲ. ಇದೀಗ ಕಟ್ಟಡ ಮಾಲೀಕರು ನ್ಯಾಯಾಲಯದಲ್ಲಿ ದಾವೆ ಹೂಡಿ ತಡೆಯಾಜ್ಞೆ ತಂದಿದ್ದು, ಅದನ್ನು ತೆರವುಮಾಡಲು ಹಾಗೂ ಕಾನೂನಿನಡಿಯಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿಲ್ಲ ಎಂದು ಹೇಳಿದರು.

ಇನ್ನೊಂದೆಡೆ ಮೂರ್ನಾಡು-ಕುಂಬಳದಾಳು ರಸ್ತೆಯನ್ನು ಅತಿಕ್ರಮಿಸಿಕೊಂಡು ಅನೇಕರು ಕಾಫಿ- ಅಡಿಕೆ ತೋಟಗಳನ್ನು ನಿರ್ಮಿಸಿಕೊಂಡಿದ್ದರೂ, ಅದನ್ನು ತೆರವುಗೊಳಿಸಲು ಜಿಲ್ಲಾಡಳಿತ ಯಾವದೇ ಕ್ರಮಕೈಗೊಂಡಿಲ್ಲ.

ಈ ರಸ್ತೆಯ ಅಭಿವೃದ್ಧಿಗಾಗಿ ಕಳೆದ 2 ವರ್ಷಗಳ ಹಿಂದೆ ಸಂಸದ ಪ್ರತಾಪ್‍ಸಿಂಹ ಅವರು ಭೂಮಿ ಪೂಜೆಯನ್ನೇನೋ ನೆರವೇರಿಸಿದ್ದಾರೆ. ಆದರೆ ಕಾಮಗಾರಿ ಮಾತ್ರ ಇನ್ನೂ ಆರಂಭವಾಗಿಲ್ಲ. ಇತ್ತ ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ. ಇದರಿಂದಾಗಿ ಕುಂಬಳದಾಳು, ಹೊದ್ದೂರು, ಕೊಟ್ಟಮುಡಿ, ಹೊದವಾಡ ಗ್ರಾಮಸ್ಥರು ತೊಂದರೆ ಅನುಭವಿಸುವಂತಾಗಿದೆ ಎಂದು ಆ ಗ್ರಾಮಗಳ ಗ್ರಾಮಸ್ಥರು ದೂರಿಕೊಂಡಿದ್ದಾರೆ.

15 ದಿನಗಳ ಗಡುವು

ಮೂರ್ನಾಡು-ಕುಂಬಳದಾಳು- ಕೊಟ್ಟಮುಡಿ- ನಾಪೋಕ್ಲು ಸಂಪರ್ಕ ರಸ್ತೆಯ ಅಭಿವೃದ್ಧಿಗಾಗಿ ಮುಂದಿನ 15 ದಿನಗಳ ಒಳಗಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮೂರ್ನಾಡು ವರ್ತಕರು, ವಾಹನ ಚಾಲಕ-ಮಾಲೀಕರು, ಕುಂಬಳದಾಳು, ಹೊದ್ದೂರು, ಕುಯ್ಯಂಗೇರಿ, ಹೊದವಾಡ , ಕೊಟ್ಟಮುಡಿ, ನಾಪೋಕ್ಲು ಗ್ರಾಮಸ್ಥರನ್ನು ಸೇರಿಸಿಕೊಂಡು ವೀರಾಜಪೇಟೆ- ಮಡಿಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುವದರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೂ ಮುತ್ತಿಗೆ ಹಾಕುವದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಗ್ರಾಮದ ಪ್ರಮುಖರಾದ ತೆಕ್ಕಡೆ ಯು.ಗಣಪತಿ, ತೆಕ್ಕಡೆ ಆರ್. ಸುನಂದ, ದಂಬೆಕೋಡಿ ಬಿ.ರಾಜೇಶ್, ದೇವಜನ ಶಿವಪ್ರಕಾಶ್ ಹಾಗೂ ನೆರವಂಡ ಬೋಪಣ್ಣ ಅವರುಗಳು, ಮೂರ್ನಾಡು ಕುಂಬಳದಾಳು ರಸ್ತೆಯನ್ನು ಗ್ರಾಮ ಸಡಕ್ ಯೋಜನೆಯಡಿ ಕೂಡಲೇ ಅಭಿವೃದ್ಧಿಪಡಿಸಬೇಕು. ವಾಹನ ಸಂಚಾರಕ್ಕೆ ಅಡಚರಣೆಯಾಗಿರುವ ಮಿಲ್ ಕಟ್ಟಡ ಹಾಗೂ ಹೊಟೇಲ್ ಕಟ್ಟಡಗಳನ್ನು ಕೂಡಲೇ ಜಿಲ್ಲಾಧಿಕಾರಿಗಳು ತೆರವುಗೊಳಿಸ ಬೇಕು. ಅಲ್ಲದೆ ರಸ್ತೆಯನ್ನು ಎರಡೂ ಬದಿಗಳನ್ನು ಅತಿಕ್ರಮಿಸಿಕೊಂಡು ನಿರ್ಮಿಸಿರುವ ತೋಟಗಳನ್ನೂ ತೆರವು ಮಾಡಿಸಬೇಕು ಮತ್ತು ಈ ಮಾರ್ಗವಾಗಿ ಸಂಚರಿಸುತ್ತಿದ್ದ ಸರಕಾರಿ ಬಸ್‍ನ್ನು ಮತ್ತೆ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಅವರುಗಳು ಒತ್ತಾಯಿಸಿದರು.

ಈ ಬೇಡಿಕೆಗಳ ಕುರಿತು ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದ್ದು, ಮುಂದಿನ 15 ದಿನಗಳ ಒಳಗಾಗಿ ಯಾವದೇ ಸ್ಪಂದನ ದೊರಕದಿದ್ದಲ್ಲಿ ಪ್ರತಿಭಟನೆ ನಡೆಸುವದು ಅನಿವಾರ್ಯವಾಗಲಿದೆ ಎಂದು ತಿಳಿಸಿದ್ದಾರೆ.