ಚೆಟ್ಟಳ್ಳಿ, ನ. 26: ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕ ಅಪ್ಪನೆರವಂಡ ವಿನು ಕುಞ್ಞಪ್ಪ ಅವರಿಗೆ ಕ್ಯಾಮರಾದಲ್ಲಿ ವನ್ಯಜೀವಿಗಳ ಸೆರೆಹಿಡಿದು ಸಂಗ್ರಹಿಸುವದು ಸೋಶಿಯಲ್ ಮೀಡಿಯಾಗಳಲ್ಲಿ ಅಪ್‍ಲೋಡ್ ಮಾಡುವದು ಹವ್ಯಾಸ. ಕ್ಯಾಮರಾ ಕಣ್ಣೋಳಕ್ಕೆ ಸೆರೆಯಾದ ಫೋಟೋಗಳಲ್ಲಿ ಹಸಿದ ವನ್ಯಜೀವಿಗಳ ಬಾಯಿಯಲ್ಲಿ ಪ್ಲಾಸ್ಟಿಕ್ ಪೊಟ್ಟಣ ತಿಂದು ಪರಿತಪಿಸುವ ದೃಶ್ಯ ಒಂದೆಡೆಯಾದರೆ ಆಹಾರ ಅರಸಿ ಬಂದ ಪಾಣಿ-ಪಕ್ಷಿಗಳು ಕಾಡಿನ ಬದಿಯಲ್ಲಿ ತಿಂದುಂಡು ಬಿಸಾಡಿದ ಪ್ಲಾಸ್ಟಿಕ್ ಬಾಟಲಿ, ಪ್ಯಾಕೇಟ್‍ಗಳನ್ನು ತಿನ್ನುತ್ತಿರುವ ದೃಶ್ಯ ಇನ್ನೊಂದೆಡೆ.

ರಕ್ಷಿತ ಅರಣ್ಯದ ರಸ್ತೆಗಳಲ್ಲಿ ಪ್ರತೀದಿನ ನೂರಾರು ವಾಹನಗಳು ಓಡಾಡುತ್ತಿರುತ್ತವೆ. ವಾಹನದೊಳಗೆ ತಿಂದ ಆಹಾರ ಪೊಟ್ಟಣದ ಬೇಡದ ಪ್ಲಾಸ್ಟಿಕ್ ವಸ್ತುಗಳನ್ನು ಕಾಡಿನ ಬದಿಯಲ್ಲಿ ಬಿಸಾಡಿ ಹೋಗುವರು. ಆಹಾರದ ವಾಸನೆಗೆ ಹುಡುಕಿ ಬಂದ ವನ್ಯಪ್ರಾಣಿಗಳು ತಿಂದು ತನ್ನ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತವೆ.

ದಿನೇದಿನೇ ಮಹಾಮಾರಿಯಂತೆ ರಾಶಿಯಾಗುತ್ತಿರುವ ಪ್ಲಾಸ್ಟಿಕ್‍ಗಳನ್ನು ನಿಷೇಧಿಸಬೇಕೆಂಬ ಹಲವು ಯೋಜನೆಗಳಿದ್ದರೂ ಈವರೆಗೂ ಫಲಕಾರಿಯಾಗುವದು ವಿಪರ್ಯಾಸ. ಮನುಷ್ಯನ ಬದುಕಿಗೆ ಕಂಟಕಪ್ರಾಯವಾಗುವದರ ಜೊತೆಗೆ ಅದೆಷ್ಟೋ ಪ್ರಾಣಿಪಕ್ಷಿಗಳ ಪ್ರಾಣಕ್ಕೂ ಕುತ್ತುಬರುತ್ತಿದೆ. ಮೀನು ಹಿಡಿಯುವ ಬೆಸ್ತರು ಬಿಸಾಡಿದ ತುಂಡು ಬಲೆಗಳು ಆಹಾರ ಅರಸಿ ಬಂದ ಪ್ರಾಣಿಪಕ್ಷಿಗಳು, ಮೀನು ಗಾಳಗಳಲೆಲ್ಲ ಸಿಲುಕಿ ಸಾಯುವದು ಒಂದೆಡೆಯಾದರೆ ಪ್ರತೀ ವರ್ಷ ಪ್ಲಾಸ್ಟಿಕ್ ವಸ್ತುಗಳನ್ನು ತಿಂದು ವನ್ಯಪ್ರಾಣಿಗಳು ಸಾಯುತ್ತಿವೆ. ಅರಣ್ಯ ಇಲಾಖೆ ಮೀಸಲು ಅರಣ್ಯದಲ್ಲಿ ಪ್ರಾಸ್ಟಿಕ್ ವಸ್ತುಗಳ ನಿಷೇಧಕ್ಕೆ ಹಲವು ಯೋಜನೆಗಳನ್ನು ರೂಪಿಸಿದೆ. ಮೀಸಲು ಅರಣ್ಯದ ಒಳಗೆ ಹಲವೆಡೆ ಸೂಚನಾ ಫಲಕವನ್ನು ಅಳವಡಿಸಿದೆ. ಏನೇ ಆದರೂ ಜನರೆಲ್ಲರು ಕೈಜೋಡಿಸಿದಾಗ ಮಾತ್ರ ನಿಯಂತ್ರಣ ಸಾಧ್ಯ ಹೊರತು ಬರೀ ಕಾನೂನಿಂದ ಸಾಧ್ಯವಿಲ್ಲ.

- ಪುತ್ತರಿರ ಕರುಣ್ ಕಾಳಯ್ಯ