*ಗೋಣಿಕೊಪ್ಪಲು, ನ. 26: ಕಾನೂರು ಆರೋಗ್ಯ ಕೇಂದ್ರದ ಆವರಣದ ಮಣ್ಣನ್ನು ಜೆ.ಸಿ.ಬಿ. ಯಂತ್ರದ ಮೂಲಕ ರಸ್ತೆಯ ಬದಿಯಲ್ಲಿ ಹಾಕಿ 14ನೇ ಹಣಕಾಸು ಯೋಜನೆಯನ್ನು ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾ ಕುಮಾರಿ ಸ್ಪಷ್ಟೀಕರಣ ನೀಡಿದ್ದಾರೆ.
ಆಸ್ಪತ್ರೆಯ ಆವರಣದಿಂದ ಮಣ್ಣು ತೆಗೆಯಲಾಗಿದೆ ಎಂಬ ಆರೋಪವನ್ನು ಪರಿಶೀಲಿಸಲು ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಯ ಪರವಾಗಿ ಆರ್.ಹೆಚ್.ಎಸ್. ಅಧಿಕಾರಿ ಡಾ. ಗೋಪಿನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭ ಮಾತನಾಡಿದ ಅವರು, ಗ್ರಾ.ಪಂ. ಸದಸ್ಯ ಸಿದ್ದು ನಾಚಪ್ಪ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಗ್ರಾಮದ ಕೆಲವೇ ಕೆಲವು ಬೆರಳೆಣಿಕೆಯ ಮಂದಿ ಈ ರೀತಿಯ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ತೀರ್ಮಾನಿಸಿದ ನಂತರವೇ ಆರೋಗ್ಯ ಕೇಂದ್ರದ ಆವರಣದಲ್ಲಿನ ಮಣ್ಣನ್ನು ರಸ್ತೆಯ ಎರಡು ಬದಿಗಳಿಗೆ ಹಾಕಲಾಗಿದೆ. ಇದರಲ್ಲಿ ದುರುಪಯೋಗ ಮಾಡಿಕೊಂಡಿಲ್ಲ. ಸಾರ್ವಜನಿಕರ ಮನವಿಗೆ ಸ್ಪಂದಿಸಿ ಪಂಚಾಯಿತಿ ಈ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು. ಅಲ್ಲದೆ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆಯಲ್ಲಿಯೂ ರಸ್ತೆಯ ಬದಿಗೆ ಮಣ್ಣನ್ನು ಹಾಕುವ ಮೂಲಕ ರಸ್ತೆಯ ಎರಡು ಬದಿಯನ್ನು ಸಮತಟ್ಟು ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಈ ಎಲ್ಲಾ ಕಾರಣಗಳನ್ನೇ ಮುಂದಿಟ್ಟು ಪಂಚಾಯಿತಿ ವಾಹನಗಳ ಉತ್ತಮ ಸಂಚಾರ ವ್ಯವಸ್ಥೆಗಾಗಿ ಆರೋಗ್ಯ ಕೇಂದ್ರದ ಮಣ್ಣನ್ನು ರಸ್ತೆಯ ಎರಡು ಬದಿಗಳಿಗೆ ಹಾಕಲಾಗಿದೆ. ಇದಕ್ಕೆ ತಾಲೂಕು ವೈದ್ಯಾಧಿಕಾರಿಯವರ ಅನುಮತಿ ಪಡೆದುಕೊಂಡಿದ್ದೇವೆ. ಜತೆಗೆ ಕಾನೂರು ಆರೋಗ್ಯ ಕೇಂದ್ರವನ್ನು ನಿರ್ವಹಿಸುತ್ತಿರುವ ಖಾಸಗಿ ಸಂಸ್ಥೆಯ ವಿಶ್ವನಾಥ್ ಅವರ ಅನುಮತಿಯನ್ನು ಪಡೆದುಕೊಂಡಿದ್ದೇವೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರಕ್ಕೆ ಹೋಗುವ ಮಾರ್ಗ ಹಳ್ಳ ದಿಣ್ಣೆಯಿಂದ ಕೂಡಿತ್ತು. ವೈದ್ಯಾಧಿಕಾರಿಗಳ ವಿಶ್ರಾಂತಿ ಗೃಹಕ್ಕೂ ತೆರಳಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಶವಾಗಾರಕ್ಕೆ ಶವ ಸಾಗಿಸಲು ಸಹ ಕಷ್ಟ ಸಾಧ್ಯವಾಗಿತ್ತು. ಈ ಎಲ್ಲಾ ಸಮಸ್ಯೆಗಳನ್ನು ಪರಿಗಣಿಸಿ ಅಧಿಕಾರಿಗಳ ಅನುಮತಿಯೊಂದಿಗೆ ಆರೋಗ್ಯ ಕೇಂದ್ರದ ಸುತ್ತಲಿನ ಆವರಣವನ್ನು ಸಮತಟ್ಟು ಮಾಡಲು ಜೆ.ಸಿ.ಬಿ. ಯಂತ್ರವನ್ನು ಬಳಸಲಾಗಿದೆ. ಯಂತ್ರದ ಮೂಲಕ ಮಣ್ಣು ತೆಗೆಯುವ ಸಂದರ್ಭ ಹೆಚ್ಚಾದ ಮಣ್ಣನ್ನು ರಸ್ತೆ ಬದಿಗಳಿಗೆ ಹಾಕಿ ಸಮತಟ್ಟು ಮಾಡಲಾಗಿದೆ. ನೂರು ಟ್ರ್ಯಾಕ್ಟರ್‍ನಷ್ಟು ಮಣ್ಣು ತೆಗೆದಿಲ್ಲ. ಆರೋಗ್ಯ ಕೇಂದ್ರದ ಕಟ್ಟಡಗಳಿಗೂ ಮಣ್ಣು ತೆಗೆಯುವ ಸಂದರ್ಭ ಹಾನಿ ಉಂಟಾಗಿಲ್ಲ. ಈ ಮಣ್ಣನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡುವ ವ್ಯವಸ್ಥೆಗೆ ಮುಂದಾಗಿಲ್ಲ. ಪಂಚಾಯಿತಿ ಅಭಿವೃದ್ಧಿಗಾಗಿ ಬಳಸಿಕೊಳ್ಳಲಾಗಿದೆ. ಈ ಕೆಲಸದಿಂದ ಸಾರ್ವಜನಿಕರಿಗೂ ಅನುಕೂಲಕರವಾಗಿದೆ. ಈ ಕಾರ್ಯದ ಹಿಂದೆ ಯಾವದೇ ದುರುದ್ದೇಶ ಇಲ್ಲ ಎಂದು ಹೇಳಿದರು.
ಗ್ರಾಮಸ್ಥ ಪೆÇರಕಂಡ. ಸಿ. ಬೋಪಣ್ಣ ಮಾತನಾಡಿ, ಪಂಚಾಯಿತಿ ಸದಸ್ಯನ ತೇಜೋವಧೆಗೆ ಗ್ರಾಮಸ್ಥರೇ ಆದವರು ಮುಂದಾಗಿರುವದು ವಿಷಾದನೀಯ. ಉತ್ತಮ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿರುವ ಪಂಚಾಯಿತಿಯ ವಿರುದ್ಧ ಈ ರೀತಿಯ ಅವಹೇಳನ ಅಪಪ್ರಚಾರ ಮಾಡುವದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದರು. ಈ ಸಂದರ್ಭ ಕಾನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಳ ದಾನಿಗಳಾದ ಮನ್ನಕ್ಕಮನೆ ಕುಟುಂಬ ಸದಸ್ಯರಾದ ಎಂ.ಜಿ. ಸುನೀಲ್, ಎಂ.ಕೆ. ರವಿ, ಎಂ.ಎ. ರಾಜು, ಗ್ರಾಮಸ್ಥರುಗಳಾದ ಮಾನಿಪಂಡ ಕಿಶೋರ್, ಚೊಟ್ಟೆಕ್‍ಮಾಡ ಸುರೇಶ್ ಬಿದ್ದಪ್ಪ, ಚಿರಿಯಪಂಡ ಕಾಳಪ್ಪ, ಮಚ್ಚಮಾಡ ಕಂದಾ ಭೀಮಯ್ಯ, ಕಾಟಿಮಾಡ ರಾಕೇಶ್, ಚೆರಿಯಪಂಡ ಶ್ಯಾಮ್ ಉತ್ತಪ್ಪ, ಮಾನಿಪಂಡ ಮೋಹನ್, ಚೆಪ್ಪುಡೀರ ಅಯ್ಯಪ್ಪ, ಚೆರಿಯಪಂಡ ಪೂವಣ್ಣ, ಮಚ್ಚಮಾಡ ಗಣಪತಿ, ಹೊಟ್ಟೆಮಾಡ ಸತೀಶ್, ಚೊಟ್ಟೆಕ್‍ಮಾಡ ಸ್ವರೂಪ್ ಬೋಪಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಹಾಜರಿದ್ದರು.