ಮಡಿಕೇರಿ, ನ. 25: ಒಂದೊಮ್ಮೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೂ; ವಿದ್ಯುತ್ ಬಳಕೆದಾರರಿಗೂ ನೇರ ಸಂಬಂಧದೊಂದಿಗೆ ಪ್ರತಿ ತಿಂಗಳು ಬಿಲ್ ಪಾವತಿಸಿ; ಹಣ ಸಂಗ್ರಹಿಸುತ್ತಿದ್ದ ಲೈನ್‍ಮನ್‍ಗಳು ಹಾಗೂ ಗ್ರಾಹಕರ ನಡುವೆ ಇಂದು ಸಂಬಂಧ ಕಡಿತಗೊಳ್ಳುವಂತಾಗಿದೆ. ಕರ್ನಾಟಕ ಸರಕಾರದ ಸಂಬಂಧಿಸಿದ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಲೋಪದಿಂದ; ಕೆಳಹಂತದಲ್ಲಿರುವ ಕರ್ತವ್ಯ ನಿರತ ಸಿಬ್ಬಂದಿ ಹಾಗೂ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ.

ಪರಿಣಾಮವೆಂಬಂತೆ ಇಂದು ಕೊಡಗಿನಂತಹ ಪುಟ್ಟ ಜಿಲ್ಲೆಯಲ್ಲಿ ವಿದ್ಯುತ್ ಬಳಕೆದಾರರು; ಸಕಾಲದಲ್ಲಿ ಬಿಲ್ ಹಣವನ್ನು ಪಾವತಿಸದಿರುವ ಅಪವಾದಕ್ಕೆ ಗುರಿಯಾಗುತ್ತಿದ್ದರೆ; ಚೆಸ್ಕಾಂ ಸಿಬ್ಬಂದಿ ಮತ್ತು ಇಲಾಖೆಯ ಅಧಿಕಾರಿಗಳು ಮುಜುಗರ ಅನುಭವಿಸುತ್ತಿದ್ದಾರೆ. ಗ್ರಾಹಕನಿಗೆ ವಿದ್ಯುತ್ ಅನಿವಾರ್ಯವಿರುವ ಕಾರಣ ದುಬಾರಿ ಹಣ ತೆರುವಂತಾಗಿದೆ.ಏಜೆನ್ಸಿ ಹೊಣೆ : ಮಾಹಿತಿ ಪ್ರಕಾರ ಬೆಂಗಳೂರು ಮೂಲದ ಖಾಸಗಿ ಏಜೆನ್ಸಿಗೆ ಕಳೆದ ಒಂದು ದಶಕದಿಂದ ಕೊಡಗಿನಲ್ಲಿ; ವಿದ್ಯುತ್ ಗ್ರಾಹಕರಿಗೆ ದೈನಂದಿನ ಬಳಕೆಯ ಮಾಸಿಕ ಬಿಲ್‍ಗಳನ್ನು ನೀಡುವಂತೆ ಸಂಬಂಧಿಸಿದ ಇಲಾಖೆಯು ಉನ್ನತ ಮಟ್ಟದಲ್ಲಿ ಒಡಂಬಡಿಕೆ ಆಗಿದೆ.

ಈ ಏಜೆನ್ಸಿಯ ಮಂದಿ ಪ್ರತಿಯೊಬ್ಬ ಗ್ರಾಹಕನಿಗೆ; ಸಂಬಂಧಿಸಿದ ಮನೆ ಅಥವಾ ಮಳಿಗೆ, ಉದ್ದಿಮೆಯ ತಿಂಗಳ ಬಳಕೆಯ ವಿದ್ಯುತ್ ಅನ್ನು; ಅಲ್ಲಿ ಅಳವಡಿಸುವ ಮೀಟರ್‍ನಲ್ಲಿ ಪರಿಶೀಲಿಸಿ; ಆ ಬಾಬ್ತು ಹಣದ ಮೊತ್ತಕ್ಕೆ ಬಿಲ್ ನೀಡಬೇಕೆಂಬ ನಿಯಮವಿದೆ. ಈ ರೀತಿ ಒಡಂಬಡಿಕೆ ಮಾಡಿಕೊಂಡಿರುವ ಏಜೆನ್ಸಿ ಗ್ರಾಹಕರಿಗೆ ಸಕಾಲದಲ್ಲಿ ಬಿಲ್ ನೀಡದೆ ನಿರ್ಲಕ್ಷ್ಯ ತೋರುತ್ತಿರುವ ಆರೋಪವಿದೆ. ಅಲ್ಲದೆ; ಮಾಸಿಕ ಬಿಲ್ ಬದಲಿಗೆ ಆಗೊಮ್ಮೆ - ಈಗೊಮ್ಮೆ ಕನಿಷ್ಟ ದರ ನಿಗದಿಪಡಿಸಿ; ಮೀಟರ್ ಪರಿಶೀಲನೆ ಮಾಡದೆ ಎಲ್ಲಿಯೋ ಕುಳಿತುಕೊಂಡು ಬಿಲ್ ನೀಡಿ ಬಿಡುತ್ತಿದೆ ಎಂದು ಗ್ರಾಹಕರು ದೂರುತ್ತಾರೆ.

ಗೊಂದಲದಲ್ಲಿ ಸಿಬ್ಬಂದಿ : ಈ ರೀತಿ ಏಜೆನ್ಸಿ ಒದಗಿಸುವ ಬಿಲ್ ವಸೂಲಿಗೆ ಚೆಸ್ಕಾಂ ಸಿಬ್ಬಂದಿ ತೆರಳಿದಾಗ; ಅಲ್ಲಿ ಅಧಿಕ ಮೊತ್ತದ ಲೆಕ್ಕದೊಂದಿಗೆ ಪ್ರತಿ ತಿಂಗಳು ಗ್ರಾಹಕ ಒಂದಿಷ್ಟು ಹಣ ಪಾವತಿಸದೆ ಬಾಕಿ ಉಳಿಸಿಕೊಂಡಂತಾಗಲಿದೆ; ಈ ಬಗ್ಗೆ ಏಜೆನ್ಸಿ ಮಂದಿಯ ಗಮನ ಸೆಳೆದಾಗ ಮಾತ್ರ ಸಂಬಂಧಿಸಿದ ಗ್ರಾಹಕರ ಬಳಿ ತೆರಳಿ; ನಾಲ್ಕಾರು ತಿಂಗಳ ಬಿಲ್ ಹಣ ಹತ್ತಿಪ್ಪತ್ತು ಸಾವಿರ ರೂ. ನಮೂದಿಸಿದ್ದಿದೆ. ಏಕಕಾಲಕ್ಕೆ ದೊಡ್ಡ ಮೊತ್ತ ಪಾವತಿಸಲು ಗ್ರಾಹಕ ಪರದಾಡುವಂತಾಗಿದೆ.

ಕುಳಿತಲ್ಲೇ ಹಣ : ಆದರೆ ಈ ರೀತಿ ಕುಳಿತಲ್ಲೇ ಮನಬಂದಂತೆ ಮೀಟರ್ ಸಂಖ್ಯೆಗೆ ತಕ್ಕಂತೆ ಬಿಲ್ ನಮೂದಿಸಿ; ಚೆಸ್ಕಾಂಗೆ ರವಾನಿಸುವ ಏಜೆನ್ಸಿ ಮಂದಿ; ಪಟ್ಟಣ ಪ್ರದೇಶದಲ್ಲಿ ಪ್ರತಿ ಮನೆಯ ಮೀಟರ್ ಪರಿಶೀಲನೆ ಬಾಬ್ತು

(ಮೊದಲ ಪುಟದಿಂದ) ರೂ. 4 ರಿಂದ 9 ತನಕ ಕಮೀಷನ್ ಪಡೆಯುತ್ತಿದ್ದಾರೆ; ಗ್ರಾಮೀಣ ಭಾಗದಲ್ಲಿ ಕನಿಷ್ಟ ರೂ. 7 ರಿಂದ 11ರ ತನಕ ಮನೆಯೊಂದಕ್ಕೆ ಕಮಿಷನ್ ಹೊಡೆಯುತ್ತಿದ್ದಾರೆ. ಆದರೆ ಗ್ರಾಹಕರ ಬಳಿ ಮಾತ್ರ ತೆರಳುವದೇ ಇಲ್ಲ.!

ಮಳೆಗಾಲ ಸುಳಿದಿಲ್ಲ!: ಕೊಡಗಿನಲ್ಲಿ ಕಳೆದೆರಡು ವರ್ಷಗಳಲ್ಲಿ ಸಂಭವಿಸಿರುವ ವಿಪರೀತ ಮಳೆಯ ನಡುವೆ; ಎಲ್ಲೋ ಬೆಂಗಳೂರು ಅಥವಾ ಮೈಸೂರಿನಲ್ಲಿ ಕುಳಿತು ಹಣ ಪಡೆಯುವ ಈ ಮಂದಿ; ಬಹುತೇಕ ಕೊಡಗಿನ ಗ್ರಾಮೀಣ ಭಾಗಗಳಿಗೆ ಸುಳಿದೇ ಇಲ್ಲವೆಂದು ಗೊತ್ತಾಗಿದೆ. ಪರಿಣಾಮವಾಗಿ ಇಂದು ದಕ್ಷಿಣ ಕೊಡಗಿನಲ್ಲಿ ರೂ. 12 ಕೋಟಿಯಷ್ಟು ವಿದ್ಯುತ್ ಬಿಲ್ ವಸೂಲಿಯಾಗದೆ ಉಳಿದುಕೊಂಡಿದೆ.

ಇನ್ನೊಂದೆಡೆ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ; ಇಂತಹ ಏಜೆನ್ಸಿಯ ನಿರ್ಲಕ್ಷ್ಯದಿಂದ ಆರೆಂಟು ಕೋಟಿ ರೂ. ಬಾಕಿ ಇದೆ ಎಂದು ಗೊತ್ತಾಗಿದೆ. ಒಂದೊಮ್ಮೆ ಕೊಡಗು ಚೆಸ್ಕಾಂ ಇಲಾಖೆ ರಾಜ್ಯದಲ್ಲೇ ಉತ್ತಮ ಸೇವೆಯೊಂದಿಗೆ; ಇಲ್ಲಿಯ ಗ್ರಾಹಕರು ಶೇ. 100ರಷ್ಟು ಬಿಲ್ ಹಣ ಪಾವತಿಸುತ್ತಿದ್ದ ಇತಿಹಾಸವಿದೆ. ಆದರೆ ಪ್ರಸಕ್ತ ಏಜೆನ್ಸಿ ಮಂದಿಯಿಂದ ಜಿಲ್ಲೆಯ ಗ್ರಾಹಕರು ಮತ್ತು ಚೆಸ್ಕಾಂ ಅಧಿಕಾರಿಗಳೊಂದಿಗೆ ಲೈನ್‍ಮನ್‍ಗಳು ಮುಜುಗರ ಪಡುವಂತಾಗಿದೆ.