ಕುಶಾಲನಗರ/ಕಣಿವೆ, ನ. 26: ಕುಶಾಲನಗರದಲ್ಲಿ ವಾಸವಿದ್ದ ವಿದೇಶಿಗನೊಬ್ಬ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಮೂಲತ ಸ್ಪೇನ್ ದೇಶದವರಾದ ಕಾರ್ಲೋಸ್ (65) ಮೃತ ವ್ಯಕ್ತಿ. ಮೃತ ಕಾರ್ಲೋಸ್ ಸ್ಪೇನ್ ದೇಶದ ನೌಕಾಪಡೆಯ ನಿವೃತ್ತ ಯೋಧನಾಗಿ ಕರ್ತವ್ಯ ನಿರ್ವಹಿಸಿದ್ದ ಎಂದು ತಿಳಿದುಬಂದಿದೆ.

ಕಾರ್ಲೋಸ್ ದಶಕಗಳ ಹಿಂದೆ ಭಾರತಕ್ಕೆ ಆಗಮಿಸಿದ್ದರು. ಹಲವು ವರ್ಷಗಳ ಕಾಲ ಕೇರಳದಲ್ಲಿ ನೆಲೆಸಿದ್ದ ಇವರು ಇತ್ತೀಚೆಗೆ ಕುಶಾಲನಗರದಲ್ಲಿ ನೆಲೆ ಕಂಡುಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಸೋಮೇಶ್ವರ ಬಡಾವಣೆಯಲ್ಲಿ 1 ವರ್ಷಗಳಿಂದ ಏಕಾಂಗಿಯಾಗಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಕಾರ್ಲೋಸ್ ಮಂಗಳವಾರ ಮನೆಯೊಳಗೆ ಶವವಾಗಿ ಪತ್ತೆಯಾಗಿದ್ದಾರೆ. ಮಲಗಿದ್ದ ಸ್ಥಿತಿಯಲ್ಲೇ ಮೃತಪಟ್ಟು ನಾಲ್ಕೈದು ದಿನಗಳು ಕಳೆದಿದ್ದು ಮನೆಯಿಂದ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತೆರಳಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮನೆಯ ಅಡುಗೆ ಕೋಣೆಯ ನೆಲದ ಮೇಲೆ ಹಾಸಿಗೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಕಾರ್ಲೋಸ್ ಶವ ಕಂಡುಬಂದಿದೆ. ಅತಿಯಾಗಿ ಮದ್ಯಪಾನ ಮಾಡುತ್ತಿದ್ದ ಮೃತ ವ್ಯಕ್ತಿ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮೃತದೇಹವನ್ನು ಮಡಿಕೇರಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಸ್ಪೇನ್ ದೇಶದಲ್ಲಿರುವ ಮೃತನ ಸಂಬಂಧಿಕರಿಗೆ ಮಾಹಿತಿ ರವಾನಿಸಿ ಮುಂದಿನ ಕ್ರಮಕೈಗೊಳ್ಳಲಾಗುವದು ಎಂದು ಕುಶಾಲನಗರ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ತಿಳಿಸಿದ್ದಾರೆ.