q ಆದರೂ ಫಲಿತಾಂಶದಲ್ಲಿ ಮೇಲುಗೈ q ಜಿಲ್ಲಾಡಳಿತದ ಗಮನ ಅಗತ್ಯ

ಕಣಿವೆ, ನ. 25: ಕೂಡಿಗೆಯ ಸರ್ಕಾರಿ ಕೃಷಿ ಫಾರಂ ಪ್ರಾಂಗಣದಲ್ಲಿ 2007 ರಲ್ಲಿ ನೂತನವಾಗಿ ಆರಂಭವಾದ ಸರ್ಕಾರಿ ಪಿ.ಯು. ಕಾಲೇಜು ಈಗ ಹೆಸರಿಗಷ್ಟೇ ಸ್ವಂತ ಕಟ್ಟಡ ಹೊಂದಿದ್ದರೂ ಕೂಡ ಒಂದು ಕಾಲೇಜಿಗೆ ಅಗತ್ಯವಿರುವ ಸೌಲಭ್ಯಗಳನ್ನು ಹೊಂದದಿರುವದು ವಿಷಾದನೀಯ.

ಕೊಡಗು ಜಿಲ್ಲೆಯಲ್ಲಿರುವ ಸರ್ಕಾರಿ ಪಿ.ಯು. ಕಾಲೇಜುಗಳ ಪೈಕಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಕೊಡುವ ಮೂಲಕ ಕಳೆದ ಹಲವಾರು ವರ್ಷಗಳಿಂದ ಶೇ. 100 ಫಲಿತಾಂಶ ನೀಡುತ್ತಿದ್ದರೂ ಕೂಡ ಸರ್ಕಾರ ಅಥವಾ ಜನಪ್ರತಿನಿಧಿಗಳು ಈ ಕಾಲೇಜಿನತ್ತ ತಮ್ಮ ಚಿತ್ತ ಹರಿಸಿಲ್ಲ ಎಂಬದು ಬೇಸರದ ಸಂಗತಿ.

ಈ ಕಾಲೇಜಿಗೆ ಆರಂಭದ ಕೆಲವು ವರ್ಷಗಳಲ್ಲಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಬಡ ಮಕ್ಕಳೇ ಸೇರುತ್ತಿದ್ದರು. ಆದರೆ ಸೌಲಭ್ಯಗಳನ್ನು ಲೆಕ್ಕಿಸದೇ ಅಗತ್ಯಕ್ಕಿಂತ ಹೆಚ್ಚು ಶ್ರಮ ಹಾಕಿದ ಕಾಲೇಜಿನ ಬೋಧಕ ಬಳಗದ ಇಚ್ಚಾಶಕ್ತಿಯಿಂದಾಗಿ ಪರಿಣಾಮಕಾರಿಯಾದ ಶಿಕ್ಷಣ ಮಕ್ಕಳಿಗೆ ದೊರಕುತ್ತಿರುವದರಿಂದ ಖಾಸಗಿ ಕಾಲೇಜುಗಳಿಗೂ ಮೀರಿದ ಶೈಕ್ಷಣಿಕ, ಕ್ರೀಡೆ ಹಾಗೂ ಸಾಂಸ್ಕೃತಿಕ ಸಾಧನೆಗಳಿಂದಾಗಿ ಈಗ ಶ್ರೀಮಂತರ ಮಕ್ಕಳು ಕೂಡ ಈ ಕಾಲೇಜಿನಲ್ಲಿ ಕಲಿಯಲು ಹಂಬಲಿಸುತ್ತಿದ್ದಾರೆ. ಇದರಿಂದಾಗಿ ಕಾಲೇಜಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮೂರು ವಿಭಾಗಗಳಿದ್ದು, ಪ್ರಸಕ್ತ ಸಾಲಿನಲ್ಲಿ ಒಟ್ಟು 283 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪ್ರಥಮ ಪಿ.ಯು.ಸಿ.ಯಲ್ಲಿ 140 ವಿದ್ಯಾರ್ಥಿಗಳಿದ್ದಾರೆ. ದ್ವಿತೀಯ ಪಿ.ಯು.ಸಿ.ಯಲ್ಲಿ 143 ವಿದ್ಯಾರ್ಥಿಗಳು ಇದ್ದಾರೆ. ಒಟ್ಟು 283 ವಿದ್ಯಾರ್ಥಿಗಳ ಪೈಕಿ 200 ಹೆಣ್ಣು ಮಕ್ಕಳೇ ಇದ್ದಾರೆ. ಕಾಲೇಜು ಆರಂಭದಲ್ಲಿ ಮೂರು ವರ್ಷಗಳು ಸರ್ಕಾರಿ ಶಾಲೆಯ ಕೊಠಡಿಯಲ್ಲಿ ನಡೆಯುತ್ತಿತ್ತು. ನಂತರ 2010 ರಲ್ಲಿ ಆರು ಕೊಠಡಿಗಳ ನಿರ್ಮಾಣದ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ. ಆದರೆ ಈಗ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾದ ಕೊಠಡಿಗಳಿಲ್ಲದೇ ಕಾಲೇಜು ಬೋಧಕ ವೃಂದ ಪರಿತಪಿಸುತ್ತಿದ್ದು ಕ್ಲಿಷ್ಟಕರ ಸನ್ನಿವೇಶದಲ್ಲಿ ಮಕ್ಕಳಿಗೆ ಪಾಠ ಪ್ರವಚನ ನೀಡುತ್ತಿದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಕುಡಿವ ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲಿ ಇಲ್ಲ. 200 ವಿದ್ಯಾರ್ಥಿನಿಯರು ಇರುವ ಈ ಕಾಲೇಜಿನಲ್ಲಿ ಕೇವಲ 3 ಶೌಚಾಲಯಗಳಿದ್ದು ಹೆಚ್ಚುವರಿಯಾಗಿ ಮತ್ತೆ ಕನಿಷ್ಟ ಐದು ಶೌಚಾಲಯ ಅಗತ್ಯವಿದೆ. ಇನ್ನು ಗಂಡು ಮಕ್ಕಳಿಗೆ 3 ಮೂತ್ರ ವಿಸರ್ಜನಾಲಯವಿದ್ದು ಅವರಿಗೂ ಕೂಡ ಮತ್ತಷ್ಟು ಅಗತ್ಯ ಇದೆ. ಇನ್ನು ವಿಜ್ಞಾನ ವಿದ್ಯಾರ್ಥಿಗಳಿಗೆ ಅತೀ ಅಗತ್ಯವಿರುವ ಸಮರ್ಪಕವಾದ ಪ್ರಯೋಗಾಲಯವಿಲ್ಲ. ಗ್ರಂಥಾಲಯದ ಸ್ಥಿತಿಯೂ ಅದೇ ಆಗಿದೆ. ಕಾಲೇಜಿನ ಆರು ಕೊಠಡಿಗಳ ಪೈಕಿ ಒಂದು ಕೊಠಡಿ ಕಾಲೇಜಿನ ಕಚೇರಿಯ ಬಳಕೆಯಾಗಿದೆ. ಇನ್ನೊಂದು ಪ್ರಯೋಗಾಲಯವಾಗಿದೆ. ಉಳಿದ ನಾಲ್ಕೇ ಕೊಠಡಿಗಳಲ್ಲಿ 283 ವಿದ್ಯಾರ್ಥಿಗಳು ಕುಳಿತುಕೊಳ್ಳೋದು ಹೇಗೆ ಮತ್ತು ಎಲ್ಲಿ....? ಅಷ್ಟಕ್ಕೂ ಪಾಠ ಕೇಳೋದು ಹೇಗೆ....? ಎಂಬ ಸಂಕಟದಲ್ಲಿ ವಿದ್ಯಾರ್ಥಿಗಳು ದಿನಗಳೆಯುತ್ತಿದ್ದಾರೆ.

ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಆರಂಭದಿಂದ ಇದುವರೆಗೂ ಉಪನ್ಯಾಸಕರೇ ನೇಮಕವಾಗಿಲ್ಲ. ಜೊತೆಗೆ ಕನ್ನಡ ಹಾಗೂ ಸಮಾಜಶಾಸ್ತ್ರ ಉಪನ್ಯಾಸಕರೂ ಇಲ್ಲದೆ ಸ್ಥಳೀಯವಾಗಿ ಲಭ್ಯವಿರುವ ಮೂರು ಮಂದಿ ಅತಿಥಿ ಉಪನ್ಯಾಸಕರನ್ನು ಮಾಸಿಕ ಕೇವಲ ರೂ. 7 ಸಾವಿರ ಸಂಬಳಕ್ಕೆ ನೇಮಕ ಮಾಡಿಕೊಳ್ಳಲಾಗಿದೆ. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಉತ್ತಮ ಫಲಿತಾಂಶ ಬರುತ್ತಿದ್ದು, ಈ ವರ್ಷದ ದ್ವಿತೀಯ ಪಿ.ಯು. ತರಗತಿಯ ವಿಜ್ಞಾನ ವಿಭಾಗದಲ್ಲಿ ಪ್ರಸಕ್ತ 28 ಹೆಣ್ಣು ಮಕ್ಕಳು ಇದ್ದರೆ ಕೇವಲ 7 ಗಂಡು ಮಕ್ಕಳಿದ್ದಾರೆ. ಅಂದರೆ ಸುತ್ತಲಿನ ಗ್ರಾಮಾಂತರ ಪ್ರದೇಶಗಳ ಕಾಮಧೇನುವಿನಂತೆ ಇರುವ ಈ ಕಾಲೇಜಿಗೆ ಕೂಡಲೇ ಸರ್ಕಾರ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ಒದಗಿಸಬೇಕಿದೆ. ಕಾಲೇಜು ಸುತ್ತ ತಡೆಗೋಡೆಯನ್ನು ನಿರ್ಮಿಸಬೇಕಿದೆ. ಸ್ಥಳೀಯವಾಗಿ ಇರುವ ದಾನಿಗಳು ಅಥವಾ ಸಮಾಜ ಸೇವಾ ಸಂಸ್ಥೆಗಳು ಈ ಕಾಲೇಜಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಒದಗಿಸಲು ಮುಂದಾಗಬೇಕಿದೆ. ಸಮಸ್ಯೆಗಳ ನಡುವೆಯೂ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಾಂಶುಪಾಲ ಮಹಾಲಿಂಗಯ್ಯ ನೇತೃತ್ವದ ಬೋಧಕ ತಂಡ ಜನ ಮೆಚ್ಚುಗೆ ಗಳಿಸಿರುವದು ಇಲ್ಲಿನ ವಿಶೇಷ ಸಂಗತಿ. ಈ ಕಾಲೇಜಿನ ವಿದ್ಯಾರ್ಥಿಗಳಲ್ಲಿನ ಶಿಸ್ತು, ಸಂಯಮ, ನಡವಳಿಕೆಗಳು ನೋಡುಗರಿಗೆ ಇದೇನು ಖಾಸಗಿ ವಿದ್ಯಾಸಂಸ್ಥೆಯೇ ಎನ್ನುವಷ್ಟರ ಮಟ್ಟಿಗೆ ಹೆಸರುಗಳಿಸಿದೆ. ಕೂಡಲೇ ಶಾಸಕರು ಹಾಗೂ ಪಿ.ಯು. ಶಿಕ್ಷಣ ಅಧಿಕಾರಿಗಳ ತಂಡ ಕಾಲೇಜಿಗೆ ಭೇಟಿ ನೀಡಿ ಕಾಲೇಜಿನ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕಿದೆ. ಇಷ್ಟೆಲ್ಲಾ ಸಮಸ್ಯೆಗಳನ್ನೇ ಹೊತ್ತಿರುವ ಈ ಕಾಲೇಜಿನಲ್ಲಿ ಕಳೆದ ಮೂರು ವರ್ಷಗಳಿಂದ ಕಾಲೇಜಿನ ಫಲಿತಾಂಶ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ. 100. ವಿಜ್ಞಾನ ವಿಭಾಗದಲ್ಲಿ ಶೇ. 80. ಇಂತಹ ಸಾಧನೆ ಮಾಡಿರುವ ವಿದ್ಯಾರ್ಥಿಗಳ ಮತ್ತು ಬೋಧಕರ ಸ್ಫೂರ್ತಿಯನ್ನು ಮತ್ತಷ್ಟು ಹೆಚ್ಚಿಸುವ ಕೆಲಸ ಕಾಲೇಜಿನ ಅಭಿವೃದ್ಧಿಯಿಂದ ಆಗಬೇಕಿದೆ. ಆ ಕೆಲಸವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮಾಡಬೇಕಿದೆ. ವಿಶೇಷ ವರದಿ : ಕೆ.ಎಸ್. ಮೂರ್ತಿ