ಕುಶಾಲನಗರ, ನ. 25: ನಾಗಸಾಧುಗಳ ವೇಷದಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕುಶಾಲನಗರದ ಉದ್ಯಮಿ ಒಬ್ಬರನ್ನು ವಶೀಕರಣ ಮಾಡುವದ ರೊಂದಿಗೆ ಮೊಬೈಲ್ ಮತ್ತು ಕಚೇರಿಯಲ್ಲಿದ್ದ ನಗದು ದೋಚಿ ಪರಾರಿಯಾದ ಘಟನೆ ಕುಶಾಲನಗರದ ಹೃದಯ ಭಾಗದಲ್ಲಿ ಭಾನುವಾರ ನಡೆದಿದೆ. ಕುಶಾಲನಗರದ ಪ್ರವಾಸಿ ಮಂದಿರ ರಸ್ತೆಯಲ್ಲಿರುವ ಜನಶ್ರೀ ಹಣಕಾಸು ಸಂಸ್ಥೆಯ ಮಾಲೀಕ ನಾಗೇಗೌಡ ಎಂಬವರು ಕಚೇರಿಯಲ್ಲಿ ಇದ್ದ ಸಂದರ್ಭ ಏಕಾಏಕಿ ನುಗ್ಗಿದ ಇಬ್ಬರು ಸಾಧು ವೇಷಧಾರಿಗಳು ಕುಡಿಯಲು ನೀರು ಬೇಕೆಂದು ಕೇಳಿ ನಂತರ ಬಣ್ಣದ ಪುಡಿಯೊಂದನ್ನು ಕೈಗೆ ನೀಡಿ ಅದನ್ನು ಮೂಗಿಗೆ ಹಿಡಿಯುವಂತೆ ಸೂಚಿಸಿದ್ದಾರೆ. ನಂತರ ಸಾಧುಗಳು ಹೇಳಿದ ರೀತಿಯಲ್ಲೇ ಕೆಲವು ಕಾಲ ನಾಗೇಗೌಡರು ವರ್ತಿಸಿರುವದು. ಕಚೇರಿಯಲ್ಲಿ ಅಳವಡಿಸಿರುವ ಸಿಸಿ ಕ್ಯಾಮರದ ದೃಶ್ಯಗಳ ಪರಿಶೀಲನೆ ಸಂದರ್ಭ ಗೋಚರಿಸಿದೆ.

ಸಧ್ಯದಲ್ಲಿಯೇ ತಮಗೆ ಉನ್ನತ ಮಟ್ಟದ ಯೋಗವೊಂದು ದೊರೆಯಲಿದೆ. ಆ ಅವಕಾಶಕ್ಕಾಗಿ ಕಾಯಬೇಕು ಎಂಬಿತ್ಯಾದಿ ಬಣ್ಣದ ಮಾತುಗಳಾಡಿ ಮರಳು ಮಾಡಿದ ಬೆನ್ನಲ್ಲೇ ಮೈಮರೆತ ನಾಗೇಗೌಡ ಸಾಧುಗಳ ಹೇಳಿದ ರೀತಿಯಲ್ಲೇ ವಿಚಿತ್ರ ರೀತಿಯಲ್ಲಿ ವರ್ತಿಸಲು ಪ್ರಾರಂಭಿಸಿದ್ದಾರೆ. ತನ್ನ ಸಾವಿರಾರು ಬೆಲೆಬಾಳುವ ಮೊಬೈಲ್ ಸಿಮ್ ತೆಗೆದು ಮೊಬೈಲ್ ಅನ್ನು ಸಾಧುಗಳಿಗೆ ನೀಡಿದ್ದಾರೆ. ಈ ನಡುವೆ ಸಾಧುಗಳು ತಮ್ಮ ಚೀಲದಲ್ಲಿದ್ದ ಎರಡು ಅಡಿ ಉದ್ದದ ಚಾಕು ತೆಗೆದು ಅದನ್ನು ನಾಗೇಗೌಡರ ತಲೆಗೆ ಮತ್ತು ಕಚೇರಿಯ ಕೆಲವು ಉಪಕರಣಗಳಿಗೆ ಮುಟ್ಟಿಸಿ ನುಂಗಿ ಆಶೀರ್ವಾದ ನೀಡುವ ನಟನೆ ಮಾಡಿದ್ದಾರೆ.

(ಮೊದಲ ಪುಟದಿಂದ) ಓರ್ವ ಸಾಧು ತನ್ನ ಬಟ್ಟೆಯನ್ನು ಬಿಚ್ಚಿ ನಾಗೇಗೌಡರಿಗೆ ತಾನು ನಾಗಸಾಧು ಎಂಬದನ್ನು ಖಚಿತಗೊಳಿಸಿರುವ ಬಗ್ಗೆಯೂ ಸಿಸಿ ಕ್ಯಾಮೆರಾದಲ್ಲಿ ದೃಶ್ಯಗಳು ದಾಖಲಾಗಿವೆ.

ಕ್ಯಾಶ್ ಕೌಂಟರ್‍ನಲ್ಲಿದ್ದ ಅಲ್ಪಸ್ವಲ್ಪ ಮೊತ್ತ ಸೇರಿ ಸುಮಾರು ಸಾವಿರ ರೂಗಳನ್ನು ಕೂಡ ದೋಚಿರುವ ವಿಷಯ Pಚೇರಿಯಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದ ಸಂದರ್ಭ ದಾಖಲೆಗಳು ಕಂಡುಬಂದಿವೆ. ಈ ಎಲ್ಲಾ ಚಟುವಟಿಕೆ ನಡುವೆ ನಾಗೇಗೌಡ ಸ್ನೇಹಿತರಾದ ನಾಗೇಶ್ ಎಂಬವರು ಕೂಡ ಕಚೇರಿಗೆ ಬಂದಿದ್ದರೂ ಅವರನ್ನೂ ಕೂಡ ವಶೀಕರಣ ಮಾಡಿ ಹೊರಕಳುಹಿಸುವಲ್ಲಿ ಯಶಸ್ವಿಯಾಗಿರುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಈ ಸಂದರ್ಭ ನಾಗೇಗೌಡರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲು ಯತ್ನಿಸಿದ ಸಂದರ್ಭ ಸ್ವಲ್ಪ ಆತಂಕಗೊಂಡ ನಾಗೇಗೌಡ ಇದು ಚಿನ್ನದ ಸರ ಅಲ್ಲ ಎಂದಿದ್ದಾರೆ. ಇದೇ ವೇಳೆಯಲ್ಲಿ ಸ್ನೇಹಿತರೊಬ್ಬರು ಕಚೇರಿಗೆ ಬಂದ ಕಾರಣ ಚಿನ್ನವನ್ನು ಕಸಿಯಲು ಸಾಧುಗಳು ಹಿಂದೇಟು ಹಾಕಿದ್ದಾರೆ. ಭಾನುವಾರ ಬೆಳಗ್ಗೆ 10.54 ರಿಂದ ಸುಮಾರು ಮುಕ್ಕಾಲು ಗಂಟೆಗಳ ಕಾಲ ಈ ವಂಚಕರು ನಾಗೇಗೌಡರ ಕಚೇರಿಯಲ್ಲೇ ಠಿಕಾಣಿ ಹೂಡಿದ ಚಟುವಟಿಕೆಗಳು ಕ್ಯಾಮೆರಾದಲ್ಲಿ ದಾಖಲಾಗಿವೆ.

ಇಷ್ಟೆಲ್ಲಾ ಘಟನೆಗಳು ನಡೆದರೂ ನಾಗೇಗೌಡ ಅವರಿಗೆ ಇಡೀ ದಿನ ವಾಸ್ತವದ ಅರಿವು ಇಲ್ಲದಂತೆ ವರ್ತನೆ ಉಂಟಾಗಿದ್ದು ಸೋಮವಾರ ಬೆಳಗ್ಗೆ ತನ್ನ ಕಚೇರಿಯಲ್ಲಿ ಕೆಲವು ವಸ್ತುಗಳು ಇಲ್ಲದನ್ನು ಗಮನಿಸಿದಾಗ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ತಾವು ಮೋಸಹೋದ ಪ್ರಕರಣದ ಬಗ್ಗೆ ಅರಿವಾಗಿದೆ. ಸೋಮವಾರ ಬೆಳಿಗ್ಗೆ ಘಟನೆಯ ಬಗ್ಗೆ ತಮ್ಮ ಇನ್ನೊಬ್ಬ ಸ್ನೇಹಿತ ಕುಶಾಲನಗರದ ಎಂ.ಡಿ.ರಂಗಸ್ವಾಮಿ ಅವರಿಗೆ ಸಂಪೂರ್ಣ ಮಾಹಿತಿ ನೀಡಿದ್ದು, ಪ್ರಕರಣದ ಮಾಹಿತಿ ಜನರಿಗೆ ತಿಳಿಯುವಂತಾಯಿತು.

ಹಿಮಾಚಲ ಪ್ರದೇಶದ ನಾಗಸಾಧುಗಳೆಂದು ಪರಿಚಯಿಸಿಕೊಂಡಿದ್ದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನೆಲೆಸಿರುವದಾಗಿ ಪ್ರಾರಂಭದಲ್ಲಿ ಪರಿಚಯ ಮಾಡಿಕೊಂಡಿರುವದಷ್ಟೆ ತನಗೆ ನೆನಪಿರುವದಾಗಿ ನಾಗೇಗೌಡ ‘ಶಕ್ತಿ’ಗೆ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಒಂದು ಹಂತದಲ್ಲಿ ಚೀಲದಿಂದ ಚಾಕು ತೆಗೆದ ಸಂದರ್ಭ ತನ್ನ ಮನಸ್ಸಿಗೆ ಭಯವೂ ಉಂಟಾಗಿತ್ತು ಎಂದು ನಾಗೇಗೌಡ ನೆನೆಪಿಸಿಕೊಳ್ಳುತ್ತಾರೆ. ಈ ಘಟನೆಯಿಂದ ಕಾವಿಧಾರಿಗಳನ್ನು ಸಂಶಯಾಸ್ಪದ ರೀತಿಯಲ್ಲಿ ನೋಡುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ ಎನ್ನುತ್ತಾರೆ ನಾಗೇಗೌಡರ ಸ್ನೇಹಿತ ಉದ್ಯಮಿ ಎಂ.ಡಿ.ರಂಗಸ್ವಾಮಿ ಅವರು. ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅವರು ಶಕ್ತಿಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು ಸಾಮಾಜಿಕ ಜಾಲತಾಣಗಳಲ್ಲಿಯೂ ಈ ಬಗ್ಗೆ ಮಾಹಿತಿ ನೀಡಿರುವದಾಗಿ ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಕುಶಾಲನಗರದಲ್ಲಿ ಉತ್ತರ ಭಾರತದ ನೋಂದಣಿ ಸಂಖ್ಯೆ ಹೊಂದಿರುವ ವಾಹನವೊಂದು ಕುಶಾಲನಗರದಲ್ಲಿ ಬೀಡುಬಿಟ್ಟಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಸ್ಥಳೀಯರು ಬಿಳಿ ಬಣ್ಣದ ಬೊಲೆರೊ ವಾಹನವೊಂದರಲ್ಲಿ ಕೆಲವು ಸಾಧುಗಳ ವೇಷದಲ್ಲಿ ಕುಶಾಲನಗರ ಕಾವೇರಿ ಸೇತುವೆ ಬಳಿ ನಿಂತಿದ್ದ ಬಗ್ಗೆ ಸುಳಿವು ನೀಡಿದ್ದಾರೆ. ಈ ತಂಡದ ಸದಸ್ಯರು ಆಯಕಟ್ಟಿನ ಪ್ರದೇಶದಲ್ಲಿ ಇಂತಹ ಕೃತ್ಯಗಳಲ್ಲಿ ತೊಡಗಿರುವ ಬಗ್ಗೆ ಶಂಕೆಗಳು ಕೇಳಿಬರತೊಡಗಿವೆ.

-ವರದಿ : ಚಂದ್ರಮೋಹನ್