ಸಿದ್ದಾಪುರ, ನ. 25: ಬಿ.ಜೆ.ಎಸ್ ಸಂಸ್ಥೆಗಳ ರಾಜ್ಯಮಟ್ಟದ ಕ್ರೀಡಾಕೂಟ ಸಿದ್ದಾಪುರದ ಬಿ.ಜಿ.ಎಸ್ ಶಾಲೆಯ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ, ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ಬಿ.ಜಿ.ಎಸ್. ಸಂಸ್ಥೆ ಕ್ರೀಡೆಗೂ ಕೂಡ ಹೆಚ್ಚು ಮಹತ್ವ ನೀಡುತ್ತಿದೆ. ಯುವ ಜನತೆಗೆ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳುವ ಮೂಲಕ ವೇದಿಕೆಯನ್ನು ಕಲ್ಪಿಸಿಕೊಡಬೇಕು. ಕ್ರೀಡಾಕೂಟವು ಯುವ ಪ್ರತಿಭೆಗಳಿಗೆ ಸಹಕಾರಿಯಾಗಲಿದೆ ಎಂದರು.
ಆಶೀರ್ವಚನ ನೀಡಿದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಸೋಮೇಶ್ವರನಾಥ ಸ್ವಾಮೀಜಿ, ವಿದ್ಯಾರ್ಥಿಗಳು ಸೋಲು, ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವ ಮೆರೆಯಬೇಕು ಎಂದರು.
ಇದೇ ಸಂದರ್ಭ ರಾಷ್ಟ್ರಮಟ್ಟದ ಉದ್ದಜಿಗಿತ ಸ್ಪರ್ಧೆಯಲ್ಲಿ ಬಾಗವಹಿಸಿದ ಸಿದ್ದಾಪುರದ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಬೋಪಣ್ಣ, ರಾಜ್ಯಮಟ್ಟದ ನಡಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ ಸಿದ್ದಾಪುರ ಪ್ರೌಢಶಾಲೆಯ ವಿದ್ಯಾರ್ಥಿನಿ ಐಶ್ವರ್ಯ ಅವರನ್ನು ಸನ್ಮಾನಿಸಲಾಯಿತು.
ಚುಂಚನಕಟ್ಟೆಯ ಶಿವಾನಂದ ಸ್ವಾಮೀಜಿ, ಸಿದ್ದಾಪುರ ಬಿ.ಜಿ.ಎಸ್. ಶಾಲೆಯ ಟ್ರಸ್ಟಿಗಳಾದ ಪಟ್ಟಡ ಕುಶಾಲಪ್ಪ, ಕುಕ್ಕುನೂರು ನಾಣಯ್ಯ, ಮಡಿಕೇರಿ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಪೊನ್ನಚನ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಇದ್ದರು.