ಗೋಣಿಕೊಪ್ಪಲು, ನ. 26: ತಾವು ಯಾವದೇ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡರೂ ತಾವುಗಳು ಮೂಲತಃ ರೈತರು ಎನ್ನುವದನ್ನು ಮರೆಯದಿರಿ. ಹೋರಾಟ ನಡೆಯದಿದ್ದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ಜಿಲ್ಲೆಯ ಆನೆ-ಮಾನವ ಸಂಘರ್ಷ, ಹುಲಿ ದಾಳಿ ವಿಚಾರದಲ್ಲಿ ಹಾಗೂ ಪರಿಹಾರ ನೀಡುವಲ್ಲಿ ಅರಣ್ಯ ಇಲಾಖೆಯ ತಾರತಮ್ಯದ ವಿರುದ್ಧ ಜನವರಿ ತಿಂಗಳಿನಲ್ಲಿ ಬೆಂಗಳೂರಿನ ಅರಣ್ಯ ಭವನಕ್ಕೆ ರೈತರು ಮುತ್ತಿಗೆ ಹಾಕುವ ಮೂಲಕ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ತಿಳಿಸಿದರು.

ದಕ್ಷಿಣ ಕೊಡಗಿನ ಬಾಳೆಲೆ ಕೊಡವ ಸಮಾಜದಲ್ಲಿ ರೈತ ಸಂಘದಿಂದ ಆಯೋಜನೆಗೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ ಮಾತನಾಡಿದ ಅವರು, ಈ ಮಣ್ಣಿನ ಸಂಬಂಧವಿರುವವನು ರೈತ ನಾಗಿದ್ದಾನೆ. ರೈತ ಸಂಘ ನ್ಯಾಯ ಪರ ಹೋರಾಟಕ್ಕೆ ಸದಾ ಸಿದ್ದವಿದ್ದು ಜಿಲ್ಲೆಯಲ್ಲಿ ರೈತರ ಸಾಲ ಮನ್ನಾ ವಿಚಾರದಲ್ಲಿ ಅಧಿಕಾರಿಗಳು ನಡೆದುಕೊಳ್ಳುತ್ತಿರುವ ನೀತಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆಯಲ್ಲಿ ಮಾತ್ರ ರೈತರಿಗೆ ಸಾಲ ಮನ್ನಾ ವಿಚಾರದಲ್ಲಿ ತೊಂದರೆ ಯಾಗುತ್ತಿದೆ. ಕಳೆದ ಒಂದು ವರ್ಷ ಗಳಿಂದ ಒಂದಲ್ಲ ಒಂದು ದಾಖಲಾತಿ ಗಾಗಿ ರೈತರನ್ನು ಅಲೆದಾಡಿಸುತ್ತಿದ್ದಾರೆ. ಇಲ್ಲಿಯ ತನಕ ರೈತರ ಸಾಲ ಮನ್ನಾ ಸರಿಯಾದ ರೀತಿಯಲ್ಲಿ ಸಿಗಲಿಲ್ಲ. ಒಟ್ಟಾಗಿ ಹೋರಾಡುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಮುಂದೊಂದು ದಿನ ಅರಣ್ಯ ಅಧಿಕಾರಿಗಳ ಉಪಟಳದಿಂದ ಆದಿವಾಸಿಗಳಂತೆ ಈ ಭಾಗದ ರೈತರು ಬೆಳೆಗಾರರು ಗುಳೆ ಹೋಗುವದರಲ್ಲಿ ಸಂಶಯವಿಲ್ಲ. ಆದ್ದರಿಂದ ಒಗ್ಗಟ್ಟು ಕಾಪಾಡುವ ಮೂಲಕ ಇಲ್ಲಿಯ ಸಮಸ್ಯೆಗಳಿಗೆ ನಾವುಗಳೇ ಪರಿಹಾರ ಕಂಡುಕೊಳ್ಳುವ ಪರಿಸ್ಥಿತಿ ಇದೀಗ ನಮ್ಮ ಮುಂದಿದೆ. ಜನಪ್ರತಿನಿಧಿ ಗಳಿಂದ ನಿರೀಕ್ಷಿತ ಮಟ್ಟದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಗದಿರುವದು ಬೇಸರ ತಂದಿದೆ ಎಂದರು.

ಸಂವಾದ ಕಾರ್ಯಕ್ರಮದಲ್ಲಿ ವಿಎಸ್‍ಎಸ್‍ಎನ್ ಬ್ಯಾಂಕ್‍ನ ಅಧ್ಯಕ್ಷ ಚಿಮ್ಮಣಮಾಡ ಕೃಷ್ಣ ಗಣಪತಿ, ಪೋಡಮಾಡ ಸುಬ್ರಮಣ್ಯ, ಆಳಮೇಯಂಗಡ ಬೋಸ್, ಕಾಳಪಂಡ ಟಿಪ್ಪು ಬಿದ್ದಪ್ಪ, ಕಾಡ್ಯಮಾಡ ಉದಯ ಉತ್ತಪ್ಪ, ಕಳ್ಳಿಚಂಡ ಸುಬ್ಬಯ್ಯ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು. ಈ ಭಾಗದಲ್ಲಿ ಹುಲಿ, ಕಾಡಾನೆ ಹಾವಳಿಯಿಂದ ರೈತರು ಜೀವನ ಸಾಗಿಸುವದು ಕಷ್ಟವಾಗಿದೆ. ವಿಎಸ್ ಎಸ್‍ಎನ್ ಬ್ಯಾಂಕ್ ವತಿಯಿಂದ ರೈತರ ಸಾಲ ಮನ್ನಾ ಯೋಜನೆಯಲ್ಲಿ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಅರ್ಥ ಮಾಡಿಸಿದ್ದೇವೆ. ಕಾಳು ಮೆಣಸಿಗೆ ಬೆಂಬಲ ಬೆಲೆ ದೊರೆಯಲು ಹೋರಾಟ ರೂಪಿಸಬೇಕು ಹಾಗೂ ಭತ್ತದ ಬೆಳೆಗೆ 2500 ಬೆಂಬಲ ಬೆಲೆ ಸಿಗಬೇಕು ಹಾಗದಲ್ಲಿ ಗದ್ದೆಗಳು ಪಾಳು ಬೀಳುವದಿಲ್ಲ. ವನ್ಯ ಜೀವಿಗಳಿಂದ ಬೆಳೆದ ಬೆಳೆಗೆ ರಕ್ಷಣೆ ಸಿಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳ ಸಭೆಯಲ್ಲಿ ಅಂತಿಮ ರೂಪು ರೇಷೆ ಕಂಡು ಹಿಡಿಯುವ ಕೆಲಸ ರೈತ ಸಂಘದಿಂದ ಆಗಬೇಕು. ಆದಾಯ ಕಚೇರಿಯಲ್ಲಿ ಕಿರುಕುಳ ಹೆಚ್ಚಾಗಿದೆ. ನಮ್ಮ ಅಸ್ತಿತ್ವವೇ ಅಲುಗಾಡುವ ಪರಿಸ್ಥಿತಿಗೆ ಬಂದೊ ದಗಿದೆ. ಆದಾಯ ಕಚೇರಿಗಳಲ್ಲಿ ಹೋರಾಟ ನಡೆಯಬೇಕೆಂದು ಸಂವಾದದಲ್ಲಿ ವ್ಯಾಪಕ ಚರ್ಚೆ ನಡೆಯಿತು. ಆದಷ್ಟು ಬೇಗನೇ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗುವದು. ಆದಾಯ ಕಚೇರಿಯಲ್ಲಿ ನಡೆಯುವ ಕಿರುಕುಳದ ಬಗ್ಗೆ ಹೋರಾಟ ರೂಪಿಸ ಲಾಗುವದು. ಜಿಲ್ಲಾಧಿಕಾರಿ ಸಮ್ಮುಖ ದಲ್ಲಿ ರೈತರ ಸಭೆ ಆಯೋಜಿಸಲು ಮತ್ತೊಮ್ಮೆ ಒತ್ತಾಯಿಸಲಾಗುವದೆಂಬ ನಿರ್ಣಯಕ್ಕೆ ಬರಲಾಯಿತು.

ಜಿಲ್ಲಾ ಸಂಚಾಲಕ ಕಾಡ್ಯಮಾಡ ಸುಭಾಶ್ ಸುಬ್ಬಯ್ಯ ಮಾತನಾಡಿ, ಹಸಿರು ಸಾಲಿನ ಗೌರವ ಕಾಪಾಡಿ. ಅನಾವಶ್ಯಕವಾಗಿ ದುರುಪ ಯೋಗವಾಗದಂತೆ ಎಚ್ಚರವಹಿಸಿ. ಜಿಲ್ಲೆಯಲ್ಲಿ ರೈತ ಸಂಘಕ್ಕೆ ವಿಶೇಷ ಗೌರವವಿದೆ. ಜಿಲ್ಲೆಯ ಹಿರಿಯ ಅಧಿಕಾರಿಗಳು ರೈತ ಸಂಘದ ಹೋರಾಟಕ್ಕೆ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಮುಂದೆಯೂ ನ್ಯಾಯಯುತ ಹೋರಾಟಕ್ಕೆ ರೈತರು ಹೆಚ್ಚಾಗಿ ಭಾಗವಹಿಸುವಂತೆ ಕರೆ ನೀಡಿದರು.

ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ರೈತ ಸಂಘ ಅಸ್ತಿತ್ವಕ್ಕೆ ಬಂದು 5 ವರ್ಷ ಸಮೀಪಿಸುತ್ತಿದೆ. ಅನೇಕ ನ್ಯಾಯಪರ ಹೋರಾಟಗಳು ನಡೆದ ಹಿನ್ನೆಲೆ ರೈತರಿಗೆ ಪರಿಹಾರ ಲಭ್ಯವಾಗಿದೆ. ನ್ಯಾಯವು ದೊರಕಿದೆ. ಈ ನಿಟ್ಟಿನಲ್ಲಿ ರೈತ ಸಂಘದೊಂದಿಗೆ ಕೈ ಜೋಡಿಸಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಬಾಳೆಲೆ ಕೊಡವ ಸಮಾಜದ ಕಾರ್ಯದರ್ಶಿ ಆದೇಂಗಡ ಚಂದ್ರಶೇಖರ್,ಕಳ್ಳಿಚಂಡ ಸುಬ್ಬಯ್ಯ, ತಾಲೂಕು ಸಂಚಾಲಕ ಬಾಚಮಾಡ ಭವಿಕುಮಾರ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ಬಾಳೆಲೆ ಹೋಬಳಿ ಸಂಚಾಲಕ ಮೇಚಂಡ ಕಿಶ ಮಾಚಯ್ಯ, ತಾಣಚ್ಚೀರ ಲೆಹರ್ ಬಿದ್ದಪ್ಪ, ಮೇಚಂಡ ಸಾಬು ಮಂದಣ್ಣ, ಕಳ್ಳಿಚಂಡ ಸುಬ್ಬಯ್ಯ, ಸೇರಿದಂತೆ ಆರ್ ಎಂಸಿ ಮಾಜಿ ಅಧ್ಯಕ್ಷ ಆದೇಂಗಡ ವಿನು ಚಂಗಪ್ಪ, ರೈತ ಮುಖಂಡರಾದ ಅಡ್ಡೆಂಗಡ ಬೋಪಯ್ಯ, ಅಡ್ಡೆಂಗಡ ಅರುಣ್, ಅಡ್ಡೆಂಗಡ ನವೀನ್, ಅರಮಣಮಾಡ ಚಂಗಪ್ಪ, ಅಡ್ಡೆಂಗಡ ರಾಕಿ, ಆದೇಂಗಡ ವಿನು ಉತ್ತಪ್ಪ, ಪುಳ್ಳಂಗಡ ದಿನೇಶ್, ಬೊಟ್ಟಂಗಡ ಅಶೋಕ್, ಪುಚ್ಚಿಮಾಡ ರಾಯ್, ಚೋನಿರ ಸತ್ಯ, ಕಾಂಡೇರ ಕಿರಣ್, ಕಾಂಡೇರ ಶೇಖರ್, ಪೋರಂಗಡ ವಿಠಲ, ತೀತರಮಾಡ ರಾಜ ಮುಂತಾದವರು ಹಾಜರಿದ್ದರು.