ವೀರಾಜಪೇಟೆ, ನ. 26: ಭಾರತದ ಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿ ಬದುಕುತ್ತಿರುವ ನಾವುಗಳು ಕಾನೂನು ತಿಳಿದುಕೊಂಡು ಇತರರಿಗೂ ಕಾನೂನಿನ ಬಗ್ಗೆ ಅರಿವು ಮೂಡಿಸುವಂತಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಹೇಳಿದರು
ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವೆಗಳ ಸಮಿತಿ, ವೀರಾಜಪೇಟೆ ವಕೀಲರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಸಮುಚ್ಚಯ ನ್ಯಾಯಾಲಯಗಳ ಆವರಣದಲ್ಲಿ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ್ಯಾಯ ಎಂಬದು ಸಂವಿಧಾನದಿಂದ ಹೊರಗೆ ಉಳಿಯಬಾರದು. ಇಂದು ನ್ಯಾಯಾಂಗದಲ್ಲಿ ಕಾನೂನು ಸೇವೆಗಳ ಮೂಲಕ ಅನೇಕ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲಾಗುತ್ತಿದೆ. ಇದರ ಅರಿವನ್ನು ಸಮಾಜಕ್ಕೆ ಮುಟ್ಟಿಸುವಂತಹ ಕಾರ್ಯವಾಗಬೇಕು ಎಂದು ಹೇಳಿದರು. ಸಮುಚ್ಚಯ ನ್ಯಾಯಾಲಯಗಳ ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ವಿ. ಕೋನಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಾನೂನು ಎಂಬದು ಪ್ರತಿಯೊಬ್ಬರಿಗೂ ಅಗತ್ಯವಾಗಿರುವದರಿಂದ ಎಲ್ಲರೂ ಕಾನೂನು ಅರಿವನ್ನು ಪಡೆದುಕೊಳ್ಳುವಂತಾಗಬೇಕು ಎಂದರು.
ವಕೀಲರ ಸಂಘದ ಉಪಾಧ್ಯಕ್ಷ ಎಂ.ಎಸ್. ವೆಂಕಟೇಶ್ ಮಾತನಾಡಿ, ಕಾನೂನು ಸೇವೆಗಳ ಸಮಿತಿ ಹಮ್ಮಿಕೊಳ್ಳುತ್ತಿರುವ ಕಾನೂನು ಅರಿವು ಕಾರ್ಯಕ್ರಮಗಳಿಂದ ಮಹಿಳಾ ಸಂಘಗಳ ಸದಸ್ಯರು ಹಾಗೂ ಸಾಮಾನ್ಯ ಪ್ರಜೆಗಳು ಕಾನೂನಿನ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ-ಕಿರಿಯ ವಕೀಲರುಗಳು, ವಕೀಲೆಯರು, ಸಾರ್ವಜನಿಕರು ಭಾಗವಹಿಸಿದ್ದರು. ನ್ಯಾಯಾಲಯದ ಸಿಬ್ಬಂದಿ ಮಂಜುನಾಥ್ ಸ್ವಾಗತಿಸಿದರೆ, ಪ್ರದೀಪ್ ವಂದಿಸಿದರು.