ಮಡಿಕೇರಿ, ನ. 26: ಪೊನ್ನಂಪೇಟೆಯ ಕರ್ನಾಟಕ ಪಬ್ಲಿಕ್ ಶಾಲೆ(ಪ್ರೌಢಶಾಲೆ ವಿಭಾಗ)ಯಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವತಿಯಿಂದ ಆಯೋಜಿಸಲಾಗಿತ್ತು.

ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಮಕ್ಕಳ ರಕ್ಷಣೆ, ಸರ್ವಾಂಗೀಣಾಭಿವೃದ್ಧಿಗಾಗಿ ರೂಪಿಸಿರುವ ಹತ್ತು ಹಲವು ಯೋಜನೆಗಳ ಬಗ್ಗೆ ಅರಿವು ಮತ್ತು ಮಕ್ಕಳ ಆಶೋತ್ತರಗಳು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಮುಕ್ತ ವೇದಿಕೆ ಕಲ್ಪಿಸುವ ಸದುದ್ದೇಶದೊಂದಿಗೆ ಏರ್ಪಡಿಸಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸ್ಥಳೀಯ ವಕೀಲೆ ಅನಿತಾ ಬಾಲ್ಯ ವಿವಾಹ ನಿಷೇಧ ಕಾಯ್ದೆ, ಮಕ್ಕಳ ಸಾಕಾಣಿಕೆ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಷೇಧ ಕಾಯ್ದೆ ಬಾಲಕಾರ್ಮಿಕ ಪದ್ಧತಿ ನಿಷೇಧ ಕಾಯಿದೆಗಳ ಬಗ್ಗೆ ಹಾಗೂ ಮಕ್ಕಳ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.

ಪೊಲೀಸ್ ಇಲಾಖೆಯ ಹೇಮಲತಾ ರೈ ಮಕ್ಕಳೊಂದಿಗೆ ಸಮಾಲೋಚಿಸಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ರೂಪಿಸಿರುವ ವಿವಿಧ ಖಾಯಿದೆಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳ ಸಹಾಯಕ್ಕಾಗಿರುವ ಸಹಾಯವಾಣಿಯನ್ನು ಉಪಯೋಗಿಸಿ ಕೊಳ್ಳುವಂತೆ ತಿಳಿಸಿದರು.

ಆರೋಗ್ಯ ಇಲಾಖೆ ಪ್ರಶಾಂತಿ ನಾಗೇಶ್ ಮಕ್ಕಳ ಜೀವನದಲ್ಲಿ ಶುಚಿತ್ವದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು, ಮಕ್ಕಳು ಊಟ ಮತ್ತು ಶೌಚದ ನಂತರ ಕೈಯನ್ನು ಶುಚಿಗೊಳಿಸಿಕೊಳ್ಳಲು ಇರುವ ವಿಭಿನ್ನ ಮಾದರಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಮೂರ್ಚೆ ರೋಗದಂತಹ ಖಾಯಿಲೆಗಳಿಗೆ ಪ್ರಥಮ ಚಿಕಿತ್ಸೆ ನೀಡುವ ವಿಧಾನವನ್ನು ಮಕ್ಕಳಿಗೆ ಉದಾಹರಣೆಯ ಮೂಲಕ ತಿಳಿಸಿಕೊಟ್ಟರು. ಮಕ್ಕಳಿಗಾಗಿ ಕಸದಿಂದ ರಸ ವಿಷಯದಡಿಯಲ್ಲಿ ಮಾದರಿ ತಯಾರಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರೌಢ ವಿಭಾಗದ ನಿಖಿತ್ ಎಂ. ಮತ್ತು ಮರ್ಫಿಯ ಪ್ರಥಮ, ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದ ನಿಶ್ಚಿತ ಹಾಗೂ ಅನುಷ್ಮಾ ದ್ವಿತೀಯ ಹಾಗೂ ಸಂತ ಅಂತೋಣಿ ಶಾಲೆಯ ಪ್ರಜ್ಞಾ ಎಂ.ಎಸ್. ಹಾಗೂ ಡೆಲ್ಸಿನಿ ತೃತೀಯ ಬಹುಮಾನ ಪಡೆದುಕೊಂಡರೆ ನಿನಾದ ಶಾಲೆಯ ಬೆನಿಷ್ ಮತ್ತು ಸಾಂಜನ ಹಾಗೂ ಸಂತ ಅಂತೋಣಿ ಶಾಲೆಯ ಪೊನ್ನಮ್ಮ ಮತ್ತು ಟ್ರೀಸ್ಸಾ ಸಮಧಾನಕರ ಬಹುಮಾನವನ್ನು ಪಡೆದುಕೊಂಡರು.

ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್‍ಶಾಲೆಯ ವಿದ್ಯಾರ್ಥಿನಿ ಜೀವಿತ ವಹಿಸಿ ಕೊಂಡಿದ್ದರು.

ಸಭೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಜಿ. ಸುಮಿತಿ, ಸದಸ್ಯರಾದ ಜಯಲಕ್ಷ್ಮಿ, ಪಿಡಿಓ ಪುಟ್ಟರಾಜು ಆರ್.ಜಿ., ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಜರಿದ್ದರು. ಪಲ್ಲವಿ ನಿರೂಪಿಸಿದರೆ, ಸಾಂಜನ ವಂದಿಸಿದರು.