ವೀರಾಜಪೇಟೆ, ನ. 25: ವೀರಾಜಪೇಟೆಯ ಖಾಸಗಿ ಬಸ್ಸು ನಿಲ್ದಾಣದ ಬಳಿಯ ಮಾರುಕಟ್ಟೆಯ ಶಿಥಿಲಗೊಂಡಿರುವ ಭಾಗವನ್ನು ಕೆಡವಿ ರೂ . 33 ಕೋಟಿ ವೆಚ್ಚದಲ್ಲಿ ಆಧುನಿಕ ಮಾರುಕಟ್ಟೆಯನ್ನು ನಿರ್ಮಿಸಲು ಕ್ರಿಯಾಯೋಜನೆಯೊಂದನ್ನು (ಡಿ.ಪಿ.ಆರ್) ತಯಾರಿಸಲು ಶಾಸಕರು ಸಹಮತ ವ್ಯಕ್ತಪಡಿಸಿದ್ದು ಜನಪ್ರತಿನಿಧಿಗಳು ಇದರ ಬಗ್ಗೆ ಅಭಿಪ್ರಾಯ, ಸಲಹೆ, ಸೂಚನೆ ನೀಡಲು ಅವಕಾಶವಿದೆ. ಹೊಸ ಮಾರುಕಟ್ಟೆಯ ನಿರ್ಮಾಣದಿಂದ ಅಭಿವೃದ್ಧಿಗೆ ಒತ್ತು ನೀಡಿದಂತಾಗುತ್ತದೆ ಎಂದು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ ಮಹೇಶ್ ತಿಳಿಸಿದರು.

ಮೂವತ್ತಮೂರು ಕೋಟಿ ಅಂದಾಜು ವೆಚ್ಚದ ಆಧುನಿಕ ಮಾರುಕಟ್ಟೆ ನಿರ್ಮಿಸುವ ಸಲುವಾಗಿ ಕ್ರಿಯಾಯೋಜನೆ ರೂಪಿಸಲು ಆಯೋಜಿಸಿದ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಪಂಚಾಯಿತಿ ಜನಪ್ರತಿನಿಧಿಗಳ ಸಭೆಯನ್ನುದ್ದೇಶಿಸಿ ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ ಆಧುನಿಕ ಮಾರುಕಟ್ಟೆಗೆ ಒತ್ತು ನೀಡಿರುವ ಶಾಸಕರ ಕಾಳಜಿ ಉತ್ತಮವಾದುದ್ದಾಗಿದೆ, ಆದರೆ ಪಟ್ಟಣ ಪಂಚಾಯಿತಿಯಲ್ಲಿ ಕಟ್ಟಡ ಕಾಮಗಾರಿ ಮುಗಿಯಲು ಹತ್ತಾರು ವರ್ಷ ಬೇಕು. ಹತ್ತು ಮಳಿಗೆ ನಿರ್ಮಾಣವಾಗಿ ಎರಡು ವರ್ಷವಾದರೂ ಹರಾಜು ನಡೆಸದರಿಂದ ಪಟ್ಟಣ ಪಂಚಾಯಿತಿಗೆ ಅಂದಾಜು 20 ಲಕ್ಷ ರೂಗೂ ಅಧಿಕ ನಷ್ಟವಾಗಿದೆ. ಈಗಿನ ಮಾರುಕಟ್ಟೆ ಸಂಕೀರ್ಣದಲ್ಲಿ ಕೆಲವು ಮಳಿಗೆಗಳನ್ನು ಹರಾಜು ನಡೆಸಿ 12 ವರ್ಷಗಳ ಕಾಲದವರೆಗೆ ಒಪ್ಪಂದದ ಆಧಾರದಲ್ಲಿ ಬಾಡಿಗೆಗೆ ನೀಡಲಾಗಿದೆ. ರಸ್ತೆ ವಿಸ್ತರಣೆ ಹಾಗೂ ಇದರಿಂದ ಆ ವರ್ತಕರಿಗೆ ತೊಂದರೆಯಾಗಬಾರದು. ಜೊತೆಗೆ ಪಟ್ಟಣದ ವಿವಿಧ ಅಭಿವೃದ್ಧಿಗೂ ಒತ್ತು ನೀಡಿ ಎಂದರು.

ಸದಸ್ಯ ಮಹಮ್ಮದ್ ರಾಫಿ ಮಾತನಾಡಿ ಪಟ್ಟಣ ಪಂಚಾಯಿತಿಯ ಕೆಲವು ವಿಭಾಗದ ಪೌರಕಾರ್ಮಿಕರಿಗೆ ವೇತನ ನೀಡುತ್ತಿಲ್ಲ ಅದನ್ನು ನೀಡಲು ಕ್ರಮವಹಿಸಿ. ಶಿಥಿಲಗೊಂಡ ಮಳಿಗೆಯನ್ನು ತೆರವುಗೊಳಿಸಿ, ಆದರೆ 12 ವರ್ಷದ ಬಾಡಿಗೆ ನೀಡಿರುವ ಮಳಿಗೆಯನ್ನು ಯಾವದೇ ಕಾರಣಕ್ಕೂ ತೆರವು ಮಾಡಬೇಡಿ ಜನಪರ ಕಾಮಗಾರಿ ಅಭಿವೃದ್ಧಿಗೆ ಬೆಂಬಲ ಇದೆ ಎಂದರು.

ಸದಸ್ಯ ಸಿ.ಕೆ. ಪ್ರಥ್ವಿನಾಥ್ ಮಾತನಾಡಿ , ಈಗಿರುವ 20 ವರ್ಷದ ಹಿಂದೆ ಕಟ್ಟಿದ ಮಳಿಗೆಯನ್ನು ಒಡೆಯುವದು ಸಮಂಜಸವಲ್ಲ . ಹೊಸ ಮಳಿಗೆ ನಿರ್ಮಾಣವಾಗಲು ಹತ್ತಾರು ವರ್ಷಬೇಕು. ಅಲ್ಲಿಯವರೆಗೆ ವ್ಯಾಪಾರಿಗಳನ್ನು ಬರಿಗೈಯಲ್ಲಿ ಇರಿಸಲು ಸಾಧ್ಯವಿಲ್ಲ. ಹಸಿ ಮೀನು ಮಾರುಕಟ್ಟೆ ನಿರ್ಮಾಣಕ್ಕೆ 7 ವರ್ಷದಿಂದಲೂ ಕಾಮಗಾರಿ ನಡೆದು ಇನ್ನೂ ಅಪೂರ್ಣ ಸ್ಥಿತಿಯಲ್ಲಿದೆ. ಕಳೆದ ಬಾರಿ ಮುಖ್ಯಮಂತ್ರಿಗಳ ಅನುದಾನದಲ್ಲಿ ಖಾಸಗಿ ಬಸ್ಸು ನಿಲ್ದಾಣದ ಒತ್ತಿನಲ್ಲಿರುವ ವಾಣಿಜ್ಯ ಸಂಕೀರ್ಣಕ್ಕೆ 11 ವರ್ಷ ಬೇಕಾಯಿತು ಈಗಿನ ಮಾರುಕಟ್ಟೆಯಲ್ಲಿ ಇರುವ ಕಟ್ಟಡ ಒಡೆದು ಬಯಲು ಮಾಡಿ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ತೀವ್ರ ವಿರೋಧ ಇದೆ. ಪಟ್ಟಣ ಪಂಚಾಯಿತಿಯೇ ರಸ್ತೆ ಅಗಲೀಕರಣದ ಪ್ರಸ್ತಾಪ ಮಾಡಿ ಅಂಗಡಿ ಮಳಿಗೆ ನೀಡುವಾಗ ವರ್ತಕರಿಂದ 12 ವರ್ಷದ ಕರಾರು ಮಾಡಿಕೊಂಡು ಅಗಲೀಕರಣ ಬಂದಾಗ ಕಟ್ಟಡ ಕೆಡುವದು ವರ್ತಕರಿಗೆ ವಂಚಿಸಿದಂತೆ ಆಗುತ್ತದೆ. ಇದಕ್ಕೆ ನ್ಯಾಯಾಲಯವು ಸಮ್ಮತಿಸುವದಿಲ್ಲ, ಹೊಸದಾಗಿ ಒಣ ಮೀನು ಮಾರುಕಟ್ಟೆಯನ್ನು ನಿರ್ಮಿಸಿ ಕಾಮಗಾರಿ ಪೂರ್ಣಗೊಂಡರೂ ಇನ್ನೂ ಒಣ ಮೀನು ವ್ಯಾಪಾರಸ್ಥರ ಸ್ಥಳಾಂತರಕ್ಕೆ ಕಾಲ ಕೂಡಿ ಬಂದಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಬೇಜವಾಬ್ದಾರಿತನ, ನಿರ್ಲಕ್ಷ್ಯ ಮುಂದುವರೆದಿದೆ ಎಂದು ದೂರಿದರು.

ಸದಸ್ಯೆ ಅನಿತಾ ಮಾತನಾಡಿ ಖಾಸಗಿ ಬಸ್ಸು ನಿಲ್ದಾಣದ ಬಳಿಯಲ್ಲಿ ಶಿಥಿಲಗೊಂಡಿರುವ ಕಟ್ಟಡವನ್ನು ನೆಲಸಮಗೊಳಿಸಿ ಆಧುನಿಕ ಮಾರುಕಟ್ಟೆಯ ನಿರ್ಮಾಣ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಹೇಳಿದರು. ಇದಕ್ಕೆ ಸದಸ್ಯೆ ಸುನೀತಾ ಧ್ವನಿಗೂಡಿಸಿದರು.

ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ಆಧುನಿಕ ಮಾರುಕಟ್ಟೆ ನಿರ್ಮಾಣ ಉತ್ತಮ ನಿರ್ಧಾರ, ಆದರೆ ಯಾವದಕ್ಕೂ ಶಾಸಕರ ಸಮ್ಮುಖದಲ್ಲಿ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಬೇಕು. ಕಟ್ಟಡಗಳನ್ನು ಒಡೆದು ಹಾಕುವದರಿಂದ ಅಭಿವೃದ್ಧಿ ಎನಿಸುವದಿಲ್ಲ. ಪಟ್ಟಣ ಪಂಚಾಯಿತಿಯಲ್ಲಿ ಜನಪರ, ಮೂಲಭೂತ ಸೌಲಭ್ಯಗಳನ್ನು ಒದಗಿಸಿ ನಂತರ ಅಭಿವೃದ್ಧಿಗೆ ಸಹಮತ ವ್ಯಕ್ತಪಡಿಸಬೇಕು. ಆಧುನಿಕ ಮಾರುಕಟ್ಟೆಯ ನಿರ್ಮಾಣದ ಮೊದಲು ಅಲ್ಲಿ ವರ್ತಕರಾಗಿರುವರೊಂದಿಗೂ ಚರ್ಚಿಸಿ ಸಲಹೆ ಅಭಿಪ್ರಾಯ ಪಡೆಯಬೇಕು. ಇದಕ್ಕೆ ಕಟ್ಟಡ ಒಡೆಯುವದೊಂದೇ ದಾರಿಯಾಗಬಾರದು. ಅಂಗಡಿ ಮಳಿಗೆಗಾಗಿ ವರ್ತಕರು ನೀಡುವ ಠೇವಣಿ ಕಾನೂನು ಬದ್ಧವಾಗಿ ಠೇವಣಿಯಾಗಿಯೇ ಇರಬೇಕು. ಇದರ ಉಲ್ಲಂಘನೆ ಕೂಡದು. ವೀರಾಜಪೇಟೆಯ ಜನತೆ, ನಿವಾಸಿಗಳಿಗೆ ತೊಂದರೆಯಾಗದಂತೆ ಅಗತ್ಯ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಪಟ್ಟಣ ಪಂಚಾಯಿತಿಗೆ ಹಿಂದಿನಿಂದಲೂ ಹಿರಿಯರು ಹಾಗೂ ಅಧಿಕಾರಿಗಳು ಉತ್ತಮ ಅಭಿವೃದ್ದಿ ಜನಪರ ಕೆಲಸ ಮಾಡಿದ್ದಾರೆ. ಅದೇ ರೀತಿ ಅಭಿವೃದ್ಧಿ ಕೆಲಸ ಮುಂದುವರೆಯಬೇಕು. ಕಟ್ಟಡ ಒಡೆಯುವದು ಅಭಿವೃದ್ದಿಯಲ್ಲ , ಅಭಿವೃದ್ದಿಯಲ್ಲಿ ಆರ್ಥಿಕತೆ ಹಾಗೂ ಸಾಧಕ ಭಾದಕಗಳ ಚರ್ಚೆ ಆಗಬೇಕು. ಇದಕ್ಕಾಗಿ ಅಧ್ಯಕ್ಷರ ಉಪಾಧ್ಯಕ್ಷರ ಚುನಾವಣೆಯಾದ ನಂತರ ಅಭಿವೃದ್ಧಿಯ ಎಲ್ಲ ಯೋಜನೆಗಳು ಜಾರಿಯಾಗಲಿ ಎಂದರು.

ಸದಸ್ಯ ಡಿ.ಪಿ. ರಾಜೇಶ್ ಮಾತನಾಡಿ ಪಟ್ಟಣ ಪಂಚಾಯಿತಿಯಿಂದ ಅಭಿವೃದ್ಧಿಗೆ ಪೂರಕವಾದ ಕೆಲಸಗಳಿಗೆ ನಮ್ಮ ಬೆಂಬಲವಿದೆ. ಪಟ್ಟಣ ಪಂಚಾಯಿತಿ ವೀರಾಜಪೇಟೆ ಜನತೆಗೆ ಅಗತ್ಯಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಮುಂದಾಗಲಿ ಎಂದು ಹೇಳಿದರು.

ಸದಸ್ಯ ಮಹದೇವ್ ಮಾತನಾಡಿ ಪಟ್ಟಣ ಪಂಚಾಯಿತಿ ಜನಪರ ಅಭಿವೃದ್ಧಿ ಕೆಲಸಗಳನ್ನು ಹಿಂದಿನಂತೆಯೇ ಮುಂದುವರೆಸಬೇಕು ಎಂದು ಹೇಳಿದರು.

ಮುಖ್ಯಾಧಿಕಾರಿ ಶ್ರೀಧರ್ ಮಾತನಾಡಿ, ಕೆಲವು ಪೌರ ಕಾರ್ಮಿಕರಿಗೆ ಸರಕಾರದ ನಿಯಮದಂತೆ ಕೆಲಸ ನೀಡುವಂತಿಲ್ಲ. ಆದರೂ ಅವರು ಸ್ವಯಂ ಪ್ರೇರಿತರಾಗಿ ಕೆಲಸ ಮಾಡುತ್ತಿದ್ದಾರೆ ಅಷ್ಟೆ, ನಾವು ಸಂಬಳ ನೀಡುವಂತಿಲ್ಲ. ಸರಕಾರದ ಮುಂದೆ ಪೌರ ಕಾರ್ಮಿಕರ ವೇತನ ಹೆಚ್ಚಳ ಪ್ರಸ್ತಾವನೆ ಇರುವ ಕಾರಣ ನಾಳೆ ಅವರಿಗೆ ಅನುಕೂಲವಾಗಲಿ ಎಂದು ಮುಂದುವರಿಸಿದ್ದೇವೆ. ಪಟ್ಟಣ ಪಂಚಾಯಿತಿಯ 10 ಮಳಿಗೆಗಳ ಬಾಡಿಗೆ ನಿಗದಿ ವಿಚಾರ ವಿಳಂಬವಾಗಿದೆ, ಅಭಿಯಂತರರು ಬಾಡಿಗೆ ನಿಗದಿಯ ವರದಿ ನೀಡಿದ್ದು, ಲೋಕೊಪಯೋಗಿ ಇಲಾಖೆಗೆ ಕಳಿಸಿ ಅದನ್ನು ಅಂತಿಮಗೊಳಿಸಿ ಹರಾಜಿಗೆ ಕ್ರಮ ವಹಿಸುತ್ತೇವೆ. ಮಾರುಕಟ್ಟೆಯಲ್ಲಿ ಯಾವ ಕಟ್ಟಡ ಕೆಡವಬೇಕು ಉಳಿಸಬೇಕು ಎಂದು ತಾಂತ್ರಿಕ ಸಮಿತಿ ನಿರ್ಧಾರ ಮಾಡುತ್ತದೆ. ಇದು ಈಗ ಕ್ರಿಯಾಯೋಜನೆಯ ಕಾಲಘಟ್ಟವಷ್ಟೆ. ಪಟ್ಟಣದ ಅಭಿವೃದ್ಧಿಗೆ ಮಳೆ ಹಾನಿಯಲ್ಲಿ ಅನುದಾನ ದೊರೆತಿದೆ. ಇದಕ್ಕಾಗಿ ಟೆಂಡರ್ ಕರೆಯಲಾಗಿದ್ದು, ಪಟ್ಟಣದ ಎಲ್ಲಾ ವಾರ್ಡ್‍ಗಳಲ್ಲಿ ಅಗತ್ಯ ಕೆಲಸ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಇಂದಿರಾ ಕ್ಯಾಂಟೀನ್ ಡಿಸೆಂಬರ್ 10ರೊಳಗೆ ಪ್ರಾರಂಭಿಸಲು ಎಲ್ಲ ಸಿದ್ಧತೆ ನಡೆದಿದೆ ಎಂದು ಹೇಳಿದರು.

ಅಭಿಯಂತರ ಹೇಮಕುಮಾರ್ ಮಾತನಾಡಿ ಆಧುನಿಕ ಮಾರುಕಟ್ಟೆಯ ಕ್ರಿಯಾ ಯೋಜನೆಯ ತಯಾರಿಕೆ, ಮುಂದೆ ಕೈಗೊಳ್ಳಬೇಕಾಗಿರುವ ಅಭಿವೃದ್ಧಿ ಕಾಮಗಾರಿ ಕುರಿತು ಸಭೆಗೆ ಮಾಹಿತಿ ನೀಡಿದರು.

ಸದಸ್ಯ ಜಲೀಲ್. ರಜನಿಕಾಂತ್, ಸುನೀತಾ ಕೆ.ಬಿ ಹರ್ಷವರ್ಧನ್, ಸುಷ್ಮಿತಾ, ಪೂರ್ಣಿಮಾ ಚರ್ಚೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಸಭೆಯಲ್ಲಿ ಮಹಿಳಾ ಸದಸ್ಯರುಗಳು ಸೇರಿದಂತೆ ಒಟ್ಟು ಹದಿನಾರು ಮಂದಿ ಸದಸ್ಯರುಗಳು, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್, ಹಿರಿಯ ಗುಮಾಸ್ತೆ ಸುಲೇಖಾ ಹಾಜರಿದ್ದರು.