ಸಿದ್ದಾಪುರ, ನ. 25: ಕಳೆದ ಎರಡು ದಿನಗಳಿಂದ ಮಾಲ್ದಾರೆ ಗ್ರಾಮದ ಅಸ್ತಾನ ಹಾಡಿಯಲ್ಲಿ ಹುಲಿಯೊಂದು ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದ್ದ ಘಟನೆಯಿಂದಾಗಿ ಹುಲಿಯ ಚಲನ ವಲನ ಕಂಡು ಹಿಡಿಯಲು ಅರಣ್ಯ ಇಲಾಖೆ ವತಿಯಿಂದ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಮಾಲ್ದಾರೆಯ ಅಸ್ತಾನದ ನಿವಾಸಿ ಮಾಲಾ ಎಂಬವರು ತಮ್ಮ ಗಬ್ಬದ ಹಸುವನ್ನು ಅಸ್ತಾನದಲ್ಲಿ ಮೇಯಿಸುತ್ತಿದ್ದಾಗ ಏಕಾಏಕಿ ಹುಲಿಯೊಂದು ದಾಳಿ ನಡೆಸಿ ಹಸುವಿನ ಮಾಲೀಕರ ಎದುರಲ್ಲೆ ಹಸುವನ್ನು ಕಚ್ಚಿ ಗಂಭೀರವಾಗಿ ಗಾಯಗೊಳಿಸಿತು. ಈ ಸಂದರ್ಭ ಮಾಲಾ ಅವರು ಗಾಬರಿಗೊಂಡು ಕಿರುಚಿಕೊಂಡರು. ಹುಲಿಯು ಹಸುವನ್ನು ಬಿಟ್ಟು ಕಾಡಿನೊಳಗೆ ಪರಾರಿಯಾಯಿತು.
ಈ ಹಿನ್ನೆಲೆಯಲ್ಲಿ ಗಬ್ಬದ ಹಸುವಿನ ಮೇಲೆ ದಾಳಿ ನಡೆಸಿ ಸಾಯಿಸಿದ ಹುಲಿಯ ಚಲನವಲನವನ್ನು ಕಂಡು ಹಿಡಿಯುವ ನಿಟ್ಟಿನಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಅವರ ಮಾರ್ಗದರ್ಶನದಂತೆÀ ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಘೂಲಿ ಹಾಗೂ ಸಿಬ್ಬಂದಿ ಸೋಮವಾರದಂದು ಅಸ್ತಾನದ ಹಾಡಿಯ ಸಮೀಪ ಎರಡು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಇನ್ನೆರಡು ಕ್ಯಾಮೆರಾಗಳನ್ನು ಮುಂದಿನ ಎರಡು ದಿನಗಳಲ್ಲಿ ಅಳವಡಿಸಲಾಗುವದು. ಅಗತ್ಯವಿದ್ದಲ್ಲಿ ಮೇಲಾಧಿಕಾರಿಗಳು ಚರ್ಚೆ ನಡೆಸಿ ಹುಲಿ ಸೆರೆ ಹಿಡಿಯಲು ಕ್ರಮ ಕೈಗೊಳ್ಳುತ್ತಾರೆ ಎಂದು ಉಪವಲಯ ಅರಣ್ಯಾಧಿಕಾರಿ ಮಂಜುನಾಥ್ ಘೂಲಿ ತಿಳಿಸಿದ್ದಾರೆ.
-ವಾಸು
 
						