ಮಡಿಕೇರಿ, ನ. 25: ಉತ್ತಮ ಕ್ರೀಡಾಪಟುಗಳು ಜೀವನದ ಎಲ್ಲ ಸ್ತರಗಳಲ್ಲೂ ಯಶಸ್ವೀ ವ್ಯಕ್ತಿಗಳಾಗಿ ಹೊರಹೊಮ್ಮುತ್ತಾರೆ ಎಂದು ರಾಷ್ಟ್ರೀಯ ಕ್ರಿಕೆಟಿಗ-ಕೋಚ್ ಕಾರ್ತಿಕ್ ಜಸ್ವಂತ್ ಹೇಳಿದರು.

ಅವರು ಇಂದು ಆರನೇ ವರ್ಷದ ಡಾ. ಅಖಿಲ್ ಕುಟ್ಟಪ್ಪ-ಅಶ್ಚಥ್ ಐಯ್ಯಪ್ಪ ಕ್ರಿಕೆಟ್ ಪಂದ್ಯಾವಳಿ ಉದ್ದೇಶಿಸಿ ಮಾತನಾಡಿದರು. ದೇಶವು ಇಲ್ಲಿಯವರೆಗೆ 296 ಟೆಸ್ಟ್ ಕ್ರಿಕೆಟಿಗರನ್ನು ಕೊಡುಗೆ ನೀಡಿದ್ದು, ಶಿಸ್ತಿಗೆ ಹೆಸರಾದ ಕೊಡಗಿನಿಂದ ಇನ್ನಷ್ಟು ಹೆಚ್ಚು ಕ್ರಿಕೆಟಿಗರು ಹೊರಬರಬೇಕೆಂದರು. ಕ್ರೀಡೆಯಿಂದ ಕಲಿಯುವ ಶಿಸ್ತು, ಸಂಯಮ, ಸೋಲು-ಗೆಲುವಿನ ಸಮತೋಲನ, ತ್ಯಾಗ ಬುದ್ಧಿ ಜೀವನದ ಸಮಸ್ಯೆಗಳನ್ನೂ ಎದುರಿಸಲು ಸಹಕಾರಿ ಎಂದರು.

ಅಶ್ವಥ್ ಐಯ್ಯಪ್ಪ ತನ್ನ ಇಪ್ಪತ್ತನೇ ವಯಸ್ಸಿನಲ್ಲೇ ಕ್ರಿಕೆಟ್ ಕುರಿತು ಪುಸ್ತಕ ಹೊರತಂದುದು ಅಸಾಮಾನ್ಯವಾಗಿದ್ದು, ಕ್ರಿಕೆಟ್ ಲೋಕದಲ್ಲಿ ವಿಸ್ಮಯ ಮೂಡಿಸಿದೆ ಎಂದರು.

ಮುಖ್ಯ ಅತಿಥಿಗಳಾದ ಬೋಸ್ ಮಂದಣ್ಣ, ಕೊಡಗು ವಿದ್ಯಾಲಯದ ಉಪ ಪ್ರಾಂಶುಪಾಲೆ ವನಿತಾ ಮತ್ತು ಮುನೀರ್ ಅಹ್ಮದ್ ಮಾತನಾಡಿ, ಶಿಸ್ತು-ಸಂಯಮದಿಂದ ಯಶಸ್ಸು ಸಾಧ್ಯ ಎಂದರು. ಅಖಿಲ್ ಹಾಗೂ ಅಶ್ವಥ್, ಧ್ಯಾನಯೋಗ ಮಾರ್ಗದರ್ಶಕ ಬಿ.ಕೆ. ಸುಬ್ಬಯ್ಯ, ಕ್ರಿಕೆಟಿಗ ಕುಮಾರ್ ಅಪ್ಪಚ್ಚು ಅವರ ಬಾಳನ್ನು ಮಾದರಿಯಾಗಿ ತೆಗೆದುಕೊಳ್ಳಬೇಕೆಂದರು.

ವೇದಿಕೆಯಲ್ಲಿ ಕೆ.ಎಸ್. ದೇವಯ್ಯ, ಬಿ.ಜಿ. ಅನಂತಶಯನ, ಕ್ರೀಡೆಯಲ್ಲಿ ಹೆಸರು ಮಾಡಿದ ಮೊಣ್ಣಪ್ಪ, ಬಾನು ಅಪ್ಪಣ್ಣ, ರಾಜನ್ ಅಪ್ಪಣ್ಣ, ಪಾರ್ಥ ಚೆಂಗಪ್ಪ, ರಘು ಮಾದಪ್ಪ ಹಾಗೂ ಇತರರು ಹಾಜರಿದ್ದರು.

ಕೆ.ವಿ. ಮುನ್ನಡೆ: ಸೀಮಿತ 20 ಓವರ್‍ಗಳ ಲೆದರ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಇದಾಗಿದ್ದು, ಒಟ್ಟು 14 ಶಾಲಾ ತಂಡಗಳು ಭಾಗವಹಿಸಿವೆ. ಇಂದು ನಡೆದ ಪ್ರೌಢಶಾಲಾ ಬಾಲಕರ ವಿಭಾಗದ ಪಂದ್ಯಾವಳಿಯಲ್ಲಿ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯ (ಬಿ) ತಂಡ ರಾಜೇಶ್ವರಿ ವಿದ್ಯಾಲಯ ತಂಡದೆದುರು 7 ವಿಕೆಟ್‍ಗೆ 100 ರನ್ ಗಳಿಸಿತು. ರಾಜೇಶ್ವರಿ ತಂಡ 54 ರನ್‍ಗೆ ತನ್ನಲ್ಲೆ ವಿಕೆಟ್ ಕಳೆದುಕೊಂಡು ಸೋಲನಪ್ಪಿತು. ಮತ್ತೊಂದು ಪಂದ್ಯದಲ್ಲಿ ಕೊಡಗು ವಿದ್ಯಾಲಯ (ಎ) ತಂಢ ಕ್ರೆಸೆಂಟ್ ಶಾಲಾ ತಂಡದೆದುರು 5 ವಿಕೆಟ್‍ಗೆ 146 ರನ್ ಗಳಿಸಿದರೆ, ಕ್ರಸೆಂಟ್ ಶಾಲಾ ತಂಡ 67 ರನ್‍ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ತಾ. 1ರ ವರೆಗೆ ಪ್ರೌಢಶಾಲಾ ವಿಭಾಗದ ಪಂದ್ಯಾವಳಿ ನಡೆಯಲಿದ್ದು, 2 ರಿಂದ ಪ.ಪೂ. ಕಾಲೇಜು ಮಟ್ಟದ ಪಂದ್ಯಾವಳಿ ನಡೆಯಲಿದೆ.