ಶನಿವಾರಸಂತೆ, ನ. 24: ಕೊಡಗು ಜಿಲ್ಲಾ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಜಿಲ್ಲಾ ಚೈಲ್ಡ್ ಹೆಲ್ಪ್ಲೈನ್ ಸಂಸ್ಥೆ, ಆಲೂರು-ಸಿದ್ದಾಪುರ ವಿಜಯ ಯುವಕ ಸಂಘ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಅಭಿಯಾನ, ಚೈಲ್ಡ್ಲೈನ್ ಸೇ ದೋಸ್ತಿ ಕಾರ್ಯಕ್ರಮ, ಆರೋಗ್ಯ ಮಾಹಿತಿ ಮತ್ತು ವಿಜಯ ಯುವಕ ಸಂಘದ ವತಿಯಿಂದ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ವಸತಿ ಶಾಲೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಕೃಷ್ಣ ನಾಯಕ್ ಉದ್ಘಾಟಿಸಿದರು. ಪೋಷಕರು ಮಕ್ಕಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಮಕ್ಕಳಿಗೆ ಸಂಸ್ಕಾರವಂತರಾಗಿ ಬೆಳೆಸಬೇಕು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಮುಂತಾದ ಶೋಷಣೆಗಳಿಗೆ ಕಡಿವಾಣ ಹಾಕಲು 2012 ರಲ್ಲಿ ಫೋಕ್ಸೋ ಕಾಯಿದೆಯನ್ನು ಜಾರಿಗೊಳಿಸಿದೆ. ಈ ದಿಸೆಯಲ್ಲಿ ಸಾರ್ವಜನಿಕರು, ಪೋಷಕರು ಮಕ್ಕಳ ಸುರಕ್ಷತೆಗಾಗಿರುವ ಕಾನೂನು ಕಾಯಿದೆಗಳ ಬಗ್ಗೆ ತಿಳಿದುಕೊಂಡು ಮಕ್ಕಳ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸುವಂತೆ ಅವರು ಮನವಿ ಮಾಡಿದರು.
ಚೈಲ್ಡ್ಲೈನ್ ಸಂಸ್ಥೆಯ ಜಿಲ್ಲಾ ಸಂಯೋಜನಾಧಿಕಾರಿ ನವೀನ್ ಪ್ರಾಸ್ತಾವಿಕವಾರಿ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಹಕ್ಕು, ಮಕ್ಕಳ ರಕ್ಷಣೆ ಮುಂತಾದ ಮಕ್ಕಳ ಸಮಸ್ಯೆಗಳನ್ನು ಸಾರ್ವಜನಿಕರು, ಪೋಷಕರು, ಸರಕಾರ, ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಚರ್ಚೆ ಮಾಡುವ ಮೂಲಕ ಮಕ್ಕಳು ಹತ್ತಿರವಾಗುವ ಉದ್ದೇಶದಿಂದ ಚೈಲ್ಡ್ಲೈನ್ ಸಂಸ್ಥೆ ಚೈಲ್ಡ್ಲೈನ್ ಸೇ ದೋಸ್ತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಮೂಲಕ ಮಕ್ಕಳು ತಮ್ಮ ಸಮಸ್ಯೆ ಸೇರಿದಂತೆ ಸ್ವಚ್ಛ ಭಾರತ, ಆರೋಗ್ಯ, ನೈರ್ಮಲ್ಯ, ಪರಿಸರ ಮುಂತಾದ ಮಹತ್ವದ ಬಗ್ಗೆ ತಿಳಿದುಕೊಂಡು ಸಮಾಜದಲ್ಲಿ ಜಾಗೃತಿ ಮೂಡಿಸಬಹುದಾಗಿದೆ ಎಂದರು.
ಬಾಲ್ಯ ವಿವಾಹ ಮತ್ತು ಸ್ವಚ್ಛತೆ ಕುರಿತು ಆಲೂರು-ಸಿದ್ದಾಪುರ ಪಿ.ಡಿ.ಒ. ಪೂರ್ಣಿಮಾ ಮಾತನಾಡಿ, ಪೋಷಕರು ಹೆಣ್ಣು ಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷ ತುಂಬಿದ ಮೇಲೆ ವಿವಾಹ ಮಾಡಿಕೊಡಬೇಕು.
ಬಾಲ್ಯ ವಿವಾಹ ಮಾಡುವದು ಕಾನೂನು ಬಾಹಿರವಾಗಿದೆ ಎಂದರು. ಸ್ವಚ್ಛತೆಗೆ ಪ್ರತಿಯೊಬ್ಬ ವ್ಯಕ್ತಿ ಸೇರಿದಂತೆ ಸಾರ್ವಜನಿಕರು ಸಹಕರಿಸಬೇಕು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡಲು ಘನ, ಹಸಿ ತ್ಯಾಜ್ಯ ವಿಂಗಡಿಸಿ ತ್ಯಾಜ್ಯ ವಿಲೇವಾರಿ ಮಾಡಲು ಪ್ರತಿಯೊಂದು ಗ್ರಾ.ಪಂ.ಗಳಿಗೆ ಆದೇಶ ನೀಡಿರುವ ಹಿನ್ನೆಲೆ ನಮ್ಮ ಗ್ರಾ.ಪಂ.ಯಿಂದ ಈ ಕಾರ್ಯವನ್ನು ಮಾಡಲಾಗುತ್ತದೆ ಎಂದರು.
ಮಕ್ಕಳ ಹಕ್ಕು ಕುರಿತು ಶನಿವಾರಸಂತೆ ಎ.ಎಸ್.ಐ. ಗೋವಿಂದರಾಜ್, ಸ್ವಚ್ಛತೆ ಮತ್ತು ಆರೋಗ್ಯ ಕುರಿತು ಆರೋಗ್ಯ ಸಹಾಯಕಿ ಸ್ವಾತಿ ಮಾಹಿತಿ ನೀಡಿದರು.
ವಿಜಯ ಯುವಕ ಸಂಘದ ಕುಯುಮುಡಿ ಜಯಕುಮಾರ್, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೊರಾರ್ಜಿ ದೇವಾಯಿ ವಸತಿ ಶಾಲೆ ಪ್ರಾಂಶುಪಾಲೆ ಕೆ.ಎನ್. ಭಾರತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಜಯ ಯುವಕ ಸಂಘದ ಅಧ್ಯಕ್ಷ ಪ್ರದೀಪ್, ಪದಾಧಿಕಾರಿಗಳಾದ ಕಡ್ಯದ ಕುಮಾರ್, ಚೈಲ್ಡ್ಲೈನ್ ಸಂಸ್ಥೆಯ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ, ಸಂಸ್ಥೆಯ ಪ್ರಮುಖರಾದ ಯೋಗೇಶ್, ಶೋಭಲಕ್ಷ್ಮಿ, ಪ್ರವೀಣ್, ಮಂಜುಳ, ಅನೀಸ್, ವಸತಿ ಶಾಲೆ ಶಿಕ್ಷಕ ಸತೀಶ್, ಪೊಲೀಸ್ ಸಿಬ್ಬಂದಿ ಪೂರ್ಣಿಮ, ಪೋಷಕ ಸಮಿತಿಯ ಲೀಲಾ ದೇವದಾಸ್, ಅಂಗನವಾಡಿ ಕಾರ್ಯಕರ್ತೆ ಜ್ಯೋತಿ, ಪೂರ್ಣಿಮಾ ಯುವಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಂದ ಪರಿಸರ ಗೀತೆ, ಸ್ವಚ್ಛ ಭಾರತ ಕುರಿತು ಭಾಷಣವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭ ವಸತಿ ಶಾಲೆ ಆವರಣದ ಜಾಗದಲ್ಲಿ ವಿಜಯ ಯುವಕ ಸಂಘದ ವತಿಯಿಂದ ಹಣ್ಣು ಹಂಪಲು ಮತ್ತು ಉಪಯುಕ್ತ ಗಿಡಗಳನ್ನು ನೆಡಲಾಯಿತು.