ಸೋಮವಾರಪೇಟೆ, ನ. 24: ಇಲ್ಲಿನ ಕಾಫಿ ಮಂಡಳಿ ಆಶ್ರಯದಲ್ಲಿ ಕಾಫಿ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ಕುರಿತ ಕಾರ್ಯಾಗಾರ ಸ್ಥಳೀಯ ಮಾನಸ ಸಭಾಂಗಣದಲ್ಲಿ ನಡೆಯಿತು.
ನಬಾರ್ಡ್ ಬ್ಯಾಂಕ್‍ನ ನಿವೃತ್ತ ಜಿಲ್ಲಾ ಪ್ರಧಾನ ವ್ಯವಸ್ಥಾಪಕ ಎಂ.ಸಿ. ನಾಣಯ್ಯ ಕಾರ್ಯಾಗಾರವನ್ನು ಉದ್ಘಾಟಿಸಿದರು.
ಕಾಫಿ ಮಂಡಳಿ ಉಪನಿರ್ದೇಶಕ ಶಿವಕುಮಾರ ಸ್ವಾಮಿ ಮಾತನಾಡಿ, ಅರೇಬಿಕಾ ಹಾಗು ರೋಬಸ್ಟಾ ಕಾಫಿ ಬೆಳೆಗಾರರು ಕಾಫಿ ಮಂಡಳಿಯಿಂದ ಸಹಾಯಧನ ನೀಡುವ ಮೂಲಕ ಹೆಚ್ಚಿನ ಉತ್ಪಾದನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮರುನಾಟಿಗೆ ಶೇ.40ರಷ್ಟು ಸಹಾಯಧನ ನೀಡಲಾಗುತ್ತದೆ. ಸಣ್ಣ ಕಾಫಿ ಬೆಳೆಗಾರರಿಂದ ಹಿಡಿದು 25 ಎಕರೆ ವರೆಗಿನ ಆಸ್ತಿ ಹೊಂದಿರುವ ಬೆಳೆಗಾರರು ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ನೀರಿನ ಸಂಪನ್ಮೂಲ ಹೆಚ್ಚಿಸಲು ಹಾಗು ನೀರಿನ ಬಳಕೆಗೆ ಕೆರೆ, ತೆರೆದ ಬಾವಿ ಹಾಗು ಸ್ಪ್ರಿಂಕ್ಲರ್ ಆಳವಡಿಸಲು ಸಹಾಯಧನ ನೀಡಲಾಗುತ್ತಿದೆ ಎಂದು ಹೇಳಿದರು. ಕಾಫಿ ಬೆಳೆಗಾರರಿಗೆ ಸೂಕ್ತ ಮಾಹಿತಿ ನೀಡಲು ‘ಕಾಫಿ ಕೃಷಿ ತರಂಗ’ ಹೆಸರಿನಲ್ಲಿ ಸಹಾಯವಾಣಿ ಇದ್ದು, 08037685000 ಸಂಖ್ಯೆಗೆ ಬೆಳೆಗಾರರು ಕರೆ ಮಾಡಿದರೆ, ಕಾಫಿ ಮಾರಾಟ, ತಳಿಗಳು, ಮಣ್ಣಿನ ಅರೈಕೆ, ಮಾರುಕಟ್ಟೆ, ಕಾಫಿ ಗುಣಮಟ್ಟ ಕಾಯ್ದುಕೊಳ್ಳುವ ಬಗೆ, ರೋಗಬಾಧೆ, ಸೇರಿದಂತೆ ಎಲ್ಲಾ ಮಾಹಿತಿಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರದ ಉಪ ನಿರ್ದೇಶಕರಾದ ಡಾ. ಶಿವಪ್ರಸಾದ್, ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ಹೆಚ್.ಆರ್. ಮುರುಳೀಧರ್, ಕೊಪ್ಪ ರೈತ ಫೌಂಡೇಶನ್‍ನ ಪ್ರಸನ್ನ ಕುಮಾರ್, ಪುಷ್ಪಗಿರಿ ಎಫ್.ಪಿ.ಒ. ನ ಎಂ.ಬಿ. ದೇವಯ್ಯ ಅವರುಗಳು ಮಾಹಿತಿ ನೀಡಿದರು.