ಗುಡ್ಡೆಹೊಸೂರು, ನ. 24: ಇಲ್ಲಿನ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ಪಂಚಾಯ್ತಿ ಅಧ್ಯಕ್ಷೆ ಕೆ.ಎಸ್.ಭಾರತಿ ಆಧ್ಯಕ್ಷತೆಯಲ್ಲಿ ನಡೆಯಿತು.
ಈ ಸಭೆಯಲ್ಲಿ ಉಪಾಧ್ಯಕ್ಷೆ ಲೀಲಾವತಿ ಮತ್ತು ಸರ್ವ ಸದಸ್ಯರು ಹಾಜರಿದ್ದರು. ಈ ಸಂದರ್ಭ ಗ್ರಾ.ಪಂ. ವ್ಯಾಪ್ತಿಯ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಮುಖ್ಯವಾಗಿ ಇಲ್ಲಿನ ಸಿದ್ದಾಪುರ ಮಾರ್ಗದ ದೊಡ್ಡಬೆಟಗೇರಿಯಲ್ಲಿ ಪ್ರಯಾಣಿಕರಿಗೆ ಬಸ್ಸು ತಂಗುದಾಣವಿಲ್ಲದೆ ಆ ಗ್ರಾಮದ ನಾಗರಿಕರು ಪರದಾಡುತ್ತಿದ್ದಾರೆ. ಸಾಮಾನ್ಯ ಸಭೆಯಲ್ಲಿ ಗ್ರಾಮದಲ್ಲಿ ಪ್ರಯಾಣಿಕರಿಗೆ ಅದರಲ್ಲು ವಯಸ್ಕರು ಮತ್ತು ಶಾಲಾ ಮಕ್ಕಳು ತಂಗುದಾಣವಿಲ್ಲದೆ ಪರದಾಡುತ್ತಿದ್ದ ವಿಷಯದ ಬಗ್ಗೆ ಚರ್ಚಿಸಿ ಅಲ್ಲಿ ತಂಗುದಾಣ ನಿರ್ಮಿಸಲು ನಿರ್ಣಯಿಸಲಾಯಿತು.
ಅಲ್ಲದೆ ಈ ವಿಭಾಗದಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಕ್ರಮ ಕೈಗೊಳ್ಳಲಾಯಿತು. ಅಲ್ಲದೆ ಬಸವನಹಳ್ಳಿಯ ನವಗ್ರಾಮದ ಸರ್ವೆ ನಂ.1/1 ರಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ತೊಂದರೆಯಾಗುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಗಂಭೀರ ಚರ್ಚೆಯಾಯಿತು. ಹಕ್ಕು ಪಡೆದವರು ಈ ಜಾಗದಲ್ಲಿ ಮನೆ ನಿರ್ಮಿಸಲು ಅರಣ್ಯ ಇಲಾಖೆಯಿಂದ ಮರಗಳನ್ನು ತೆರವುಗೊಳಿಸದಿರುವ ಬಗ್ಗೆ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಪಿ.ಡಿ.ಒ. ಶ್ಯಾಂ ಮತ್ತು ಕಾರ್ಯದರ್ಶಿ ನಂಜುಂಡೇಸ್ವಾಮಿ ಹಾಜರಿದ್ದರು.