ಕೂಡಿಗೆ, ನ. 24: ರಾಜರ ಆಳ್ವಿಕೆ ಕಾಲದಲ್ಲಿ ಇಲ್ಲಿನ ಜನರ ಶೌರ್ಯ, ಸಾಹಸ, ದೇಶಪ್ರೆಮ ಕುರಿತು ಸಾಕಷ್ಟು ಉಲ್ಲೆಖಗಳಿವೆ. ಇದರ ಕುರಿತು ಶಾಲಾ ಮಕ್ಕಳಿಗೆ ಪ್ರಾರಂಭಿಕ ಹಂತದಲ್ಲಿ ತಿಳಿಯಬೇಕಾದ ಅಗತ್ಯ ಇದೆ ಎಂದು ಸೋಮವಾರಪೇಟೆಯ ಪತ್ರಕರ್ತ ಎಸ್.ಎ. ಮುರಳೀಧರ್ ಹೇಳಿದರು.

ಕೊಡಗು ಜಿಲ್ಲೆ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಶನಿವಾರಸಂತೆ ಕಸಾಪ ಹೋಬಳಿ ಘಟಕದ ವತಿಯಿಂದ ಶನಿವಾರಸಂತೆ ಸಮೀಪದ ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ದಿ.ಶಾಂತಮಲ್ಲಸ್ವಾಮಿಗಳ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕೊಡಗಿನ ವೀರಶೈವ ಅರಸರ ಕುರಿತಾದ ವಿಷಯದ ಬಗ್ಗೆ ಮಾತನಾಡಿದ ಅವರು 1600 ರಿಂದ 1834 ರವರೆಗೆ ಹಾಲೇರಿ ವಂಶಸ್ಥರು ಆಳ್ವಿಕೆ ನಡೆಸಿದ್ದರೂ 1789 ರಿಂದ 1809 ರವರೆಗೆ ರಾಜ್ಯಭಾರ ನಡೆಸಿದ್ದ ದೊಡ್ಡವಿರರಾಜೇಂದ್ರ ಅಗ್ರಗಣ್ಯರಾಗಿ ಮೆರೆದಿದ್ದರು. ಇಡೀ ಕೊಡಗು ಅತ್ಯಂತ ಬಲಶಾಲಿ ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಇದ್ದ ಸಂದರ್ಭ ಮತ್ತೆ ಕೊಡಗನ್ನು ಅರಸರ ಆಳ್ವಿಕೆಯಲ್ಲಿ ತಂದ ಶ್ರೆಯಸ್ಸು ದೊಡ್ಡವಿರರಾಜೇಂದ್ರ ಒಡೆಯರಿಗೆ ಸಲ್ಲುತ್ತದೆ. ರಾಜರ ಆಳ್ವಿಕೆಯ ಕಾಲದಲ್ಲಿ ವೀರಶೈವ ರಾಜರ ಕೊಡುಗೆ ಅಪಾರವಾದದ್ದು ಎಂದರು.

ಕಾರ್ಯಕ್ರಮವನ್ನು ಕುಶಾಲನಗರ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎಸ್.ವಿ. ಶಿವಪ್ಪ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಅವರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕ ಕೆ.ಕೆ. ನಾಗರಾಜಶೆಟ್ಟಿ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಮಹಾದೇವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಶಾಂಭವಮೂರ್ತಿ, ಶನಿವಾರಸಂತೆ ಹೋಬಳಿ ಕಸಾಪ ಅಧ್ಯಕ್ಷ ನಾಗರಾಜು, ಹೋಬಳಿ ಕಸಾಪ ನಿರ್ದೇಶಕಿ ಶಶಿಕಲಾ, ಅಂಕನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ವಿಜಯಕುಮಾರ್, ಕಾಮತ್ ಇದ್ದರು.