ಮಡಿಕೇರಿ, ನ. 23: ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ ಅಭಿಯಾನ, ಕರ್ನಾಟಕ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ (ಬಿಜಿವಿಎಸ್) ಸಂಯುಕ್ತ ಆಶ್ರಯದಲ್ಲಿ ‘ರಾಷ್ಟ್ರೀಯ ಆವಿಷ್ಕಾರ ಯೋಜನೆ’ ಯಡಿಯಲ್ಲಿ ಜಿಲ್ಲೆಯ ಆಯ್ದ 10 ಕ್ಲಸ್ಟರ್‍ಗಳಲ್ಲಿ ನಡೆಯಲಿರುವ ಮಕ್ಕಳ ವಿಜ್ಞಾನ ಹಬ್ಬದ ಸಂಘಟನೆ ಕುರಿತು ನಗರದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಂಪನ್ಮೂಲ ತರಬೇತಿ ಕಾರ್ಯಾಗಾರ ಬುಧವಾರ ಸಮಾಪನಗೊಂಡಿತು.

ಕ್ಲಸ್ಟರ್ ಹಂತದಲ್ಲಿ ನಡೆಯಲಿರುವ ಮಕ್ಕಳ ವಿಜ್ಞಾನ ಹಬ್ಬದ ಸಂಘಟನೆ ಮತ್ತು ರೂಪುರೇಷೆ ಕುರಿತು ಮಾಹಿತಿ ನೀಡಿದ ಕಾರ್ಯಕ್ರಮದ ಜಿಲ್ಲಾ ನೋಡಲ್ ಅಧಿಕಾರಿಯೂ ಆದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿಯ ಶಿಕ್ಷಣಾಧಿಕಾರಿ ಕಾಶೀನಾಥ್, ಮಕ್ಕಳ ವಿಜ್ಞಾನ ಹಬ್ಬವನ್ನು ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಮಕ್ಕಳ ಕಲಿಕೆಯನ್ನು ಪ್ರೇರೇಪಿಸುವ ರೀತಿಯಲ್ಲಿ ಯಶಸ್ವಿ ಯಾಗಿ ಅನುಷ್ಠಾನ ಗೊಳಿಸಬೇಕು ಎಂದರು.

ಜಿಲ್ಲೆಯ 10 ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಶಾಲೆಗಳ 6 ರಿಂದ 8ನೇ ತರಗತಿಯ 150 ಮಕ್ಕಳಿಗೆ ಡಿಸೆಂಬರ್ ಮೊದಲ ವಾರದೊಳಗೆ ಈ ಹಬ್ಬವನ್ನು ಎರಡು ದಿನಗಳ ಕಾಲ ಆಯೋಜಿಸಲಾಗುವದು. ನಂತರ ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಹಬ್ಬವು ಮೂರು ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದರು.

ಶಿಕ್ಷಣದ ಗುರಿ ಕೇವಲ ಕಲಿಕೆಯಲ್ಲಿ. ವಿನೂತನ ಮಾದರಿಯ ಈ ಹಬ್ಬದ ಮೂಲಕ ಪ್ರತಿ ಮಗು ಕೂಡ ಶಾಲೆಯಲ್ಲಿ ಖುಷಿಯಾಗಿ, ಜೊತೆಜೊತೆಯಾಗಿ ಆಡುತ್ತಾ, ಹಾಡುತ್ತಾ ವಿಜ್ಞಾನ ಪ್ರಯೋಗ, ಮಾದರಿ, ಆಟಿಕೆಗಳ ಮೂಲಕ ಕಲಿಯಲು ಅವಕಾಶ ಒದಗಿಸುತ್ತದೆ ಎಂದು ಶಿಕ್ಷಣಾಧಿಕಾರಿ ಕಾಶೀನಾಥ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದ ಸಂಯೋಜಕರೂ ಆದ ವಿಜ್ಞಾನ ವಿಷಯ ಪರಿವೀಕ್ಷಕಿ ಎಂ.ಜೆ. ಗಂಗಮ್ಮ, ಈ ಹಬ್ಬದ ಕುರಿತು ತರಬೇತಿ ಪಡೆದ ಶಿಕ್ಷಕರು ತಮ್ಮ ಕ್ಲಸ್ಟರ್ ವ್ಯಾಪ್ತಿಯಲ್ಲಿ ನಡೆಯುವ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಮಕ್ಕಳಿಗೆ ದಿನನಿತ್ಯದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಮಕ್ಕಳ ಮನಸ್ಸುಗಳಲ್ಲಿ ಆತ್ಮೀಯತೆ, ಪರಸ್ಪರ ಕಾಳಜಿ ಹಾಗೂ ಮಾನವೀಯ ಮೌಲ್ಯ ಬೆಳೆಸಲು ಪ್ರಯತ್ನಿಸಬೇಕು ಎಂದರು.

ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ಟಿ.ಜಿ. ಪ್ರೇಮಕುಮಾರ್ ಮಾತನಾಡಿ, ವಿದ್ಯಾರ್ಥಿಯು ತನ್ನ ಬದುಕಿನ ಅನುಭವಗಳನ್ನು ವಿಜ್ಞಾನದ ದೃಷ್ಠಿಯಲ್ಲಿ ನೋಡುವ, ಮೆಚ್ಚುವ ಹಾಗೂ ತನಗೆ ಎದುರಾಗುವ ಸಮಸ್ಯೆಗಳಿಗೆ ತಾನೇ ಪರಿಹಾರ ಕಂಡುಕೊಳ್ಳುವ ಕ್ರಿಯಾಶೀಲ ವ್ಯಕ್ತಿತ್ವ ಬೆಳೆಸಿಕೊಳ್ಳಲು ಈ ಹಬ್ಬವು ಸಹಕಾರಿಯಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಿ.ಚಂದನ ಮಾತನಾಡಿ, ಈ ಹಬ್ಬವು ಮಕ್ಕಳ ಸಂಭ್ರಮದ ಕಲಿಕೆಗೆ ಪ್ರೇರೇಪಿಸುತ್ತದೆ ಎಂದರು.

ಬಿ.ಜಿ.ವಿ.ಎಸ್.ನ ಸಂಪನ್ಮೂಲ ವ್ಯಕ್ತಿ ಪಿ.ಕೆ.ಲತೀಫ್, ಈ ಹಬ್ಬವು ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಹಾಗೂ ಪ್ರಶ್ನಿಸುವ ಮನೋಭಾವನೆ ಬೆಳೆಸಲು ಸಹಕಾರಿಯಾಗಿದೆ ಎಂದರು.

ಸಂಪನ್ಮೂಲ ಶಿಕ್ಷಕರಾದ ಡಿ. ಚಂದನ, ಬಿ.ಕೆ. ಲಲಿತ, ಆರ್. ದಿವಾಕರ್, ಆರ್. ಸಮತ ಕಲಿಕಾ ಚಟುವಟಿಕೆಗಳ ಕುರಿತು ತಿಳಿಸಿದರು. ಶಿಕ್ಷಕರಾದ ಶ್ರೀನಿವಾಸರಾವ್, ಜಯಶ್ರೀ ಹಾಡು ಹೇಳಿದರು.

ವಿಷಯ ಪರಿವೀಕ್ಷಕರಾದ ವೀರಪ್ಪ ಮಡಿವಾಳ, ಕೆ.ಆರ್. ಬಿಂದು, ಚಿತ್ರಕಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಶಿಕ್ಷಕ ಬಿ.ಆರ್. ಸತೀಶ್, ಬಿಜಿವಿಸ್ ಕಾರ್ಯಕರ್ತ ಎನ್. ಮಹೇಶ್ ಇದ್ದರು.

ತರಬೇತಿಯಲ್ಲಿ ಮಕ್ಕಳ ವಿಜ್ಞಾನ ಹಬ್ಬ ನಡೆಯುವ ಕ್ಲಸ್ಟರ್ ವ್ಯಾಪ್ತಿಯ ಸಿ.ಆರ್.ಪಿ.ಗಳು, ಸಂಪನ್ಮೂಲ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರು ಭಾಗವಹಿಸಿದ್ದರು.

ಕ್ಲಸ್ಟರ್ ಹಂತದಲ್ಲಿ ಈ ಹಬ್ಬವನ್ನು ಸಮುದಾಯದ ಸಹಭಾಗಿತ್ವದೊಂದಿಗೆ ಹೇಗೆ ಸಂಘಟಿಸಬೇಕು ಎಂಬ ಕುರಿತು ಸಮಾಲೋಚನೆ ನಡೆಸಲಾಯಿತು.