ವೀರಾಜಪೇಟೆ, ನ. 23: ವೀರಾಜಪೇಟೆ ಲಯನ್ಸ್ ಕ್ಲಬ್ ವತಿಯಿಂದ ಇಲ್ಲಿನ ಶಿವರಾಮೇಗೌಡ ಬಣದ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ತಾ. 27 ರಂದು ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಪೌಲ್ ಕ್ಷೇವಿಯರ್ ತಿಳಿಸಿದ್ದಾರೆ.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಎಲ್ಲ ಆಸ್ಪತ್ರೆಗಳಲ್ಲಿ ರಕ್ತದ ಅಭಾವ ಹೆಚ್ಚಾಗಿದ್ದು, ಇದರಿಂದ ರೋಗಿಗಳು ಸಾವಿಗೀಡಾಗಿರುವದು ಕಂಡು ಬಂದಿದೆ. ನಾವು ಪ್ರತ್ಯಕ್ಷವಾಗಿ ಕಂಡಂತೆ ಡೆಂಗ್ಯೂ ಜ್ವರದಿಂದ ಬಿಳಿ ರಕ್ತ ಕಣಗಳು ಸಿಗದೇ ಮೃತ ಪಟ್ಟವರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರುತ್ತಿದೆ. ಇದನ್ನು ತಡೆಯಲು ಸಂಘಟನೆಗಳು ರಕ್ತದಾನ ಶಿಬಿರದ ಮೂಲಕ ರಕ್ತವನ್ನು ಸಂಗ್ರಹಿಸಿ ಅಗತ್ಯ ರೋಗಿಗಳಿಗೆ ರಕ್ತವನ್ನು ನೀಡಲು ಯೋಜನೆ ರೂಪಿಸಲಾಗಿದೆ. ಆಸಕ್ತರು ಇದೇ ಶಿಬಿರದಲ್ಲಿ ರಕ್ತದಾನ ಮಾಡಲು ಅವಕಾಶವಿದೆ ಎಂದರು.

ರಕ್ಷಣಾ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷ ಅನಿಲ್ ಕುಮಾರ್ ಮಾತನಾಡಿ, ತಾ. 27 ರಂದು ರಕ್ತದಾನ ಶಿಬಿರ ಗಾಂಧಿನಗರದ ಲಯನ್ಸ್ ಬಿಲ್ಡಿಂಗ್‍ನಲ್ಲಿ ನಡೆಯಲಿದ್ದು, ಬೆಳಗ್ಗಿನಿಂದ ರಕ್ತದಾನ ಶಿಬಿರ ನಡೆಯಲಿದ್ದು; ಮೈಸೂರಿನ ಜೀವಧಾರ ರಕ್ತನಿಧಿ ಕೇಂದ್ರ ಪ್ರಾಯೋಜಕತ್ವ ವಹಿಸಲಿದೆ. ಶಿಬಿರದಲ್ಲಿ ಸಂಗ್ರಹಿಸುವ ರಕ್ತವನ್ನು ಜೀವಧಾರ ರಕ್ತನಿಧಿ ಕೇಂದ್ರದ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಬಡವರಿಗೆ ತುರ್ತು ಸಂದರ್ಭಗಳಲ್ಲಿ ವಿತರಿಸಲಾಗುವದು. ಹೆಚ್ಚಿನ ಮಾಹಿತಿಗೆ ಮೊ.9448060651, 8277260098 ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ಲಯನ್ಸ್ ಮಾಜಿ ಅಧ್ಯಕ್ಷ ತ್ರಿಶೂ ಗಣಪತಿ, ನಿರ್ದೇಶಕ ಪಿ. ಪ್ರತಾಪ್ ಚಿಣ್ಣಪ್ಪ, ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಟಿ.ವಿ. ಸಂತೋಷ್, ಖಜಾಂಚಿ ತಬರೀಸ್, ಕಾರ್ಯದರ್ಶಿ ಅವಿನಾಶ್ ಮತ್ತಿತರರು ಹಾಜಿರಿದ್ದರು.

c