ಮಡಿಕೇರಿ, ನ. 22: ಮಡಿಕೇರಿ ನಗರದ ಪ್ರವಾಸೀ ತಾಣ ನೆಹರೂ ಮಂಟಪಕ್ಕೆ ಚಿರತೆಗಳನ್ನು ಹೋಲುವ ಪ್ರಾಣಿಗಳು ನುಗ್ಗಿರುವ ಶಂಕೆ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ಅಲ್ಲಿನ ಪಹರೆ ಸಿಬ್ಬಂದಿ ಗಣೇಶ್ ಎಂಬವರು ತೆಗೆದಿರುವ ವೀಡಿಯೋದಲ್ಲಿ ಇದರ ಕುರಿತು ಅಸ್ಪಷ್ಟ ಚಿತ್ರಣವಿದೆ. ಆದರೆ, ಇದು ಚಿರತೆಯೋ, ಚಿರತೆಯನ್ನು ಹೋಲುವ ಮತ್ತೊಂದು ಜಾತಿಯ ಪ್ರಾಣಿಯೋ ಇತ್ಯಾದಿ ಈಗಲೇ ನಿರ್ಧರಿಸುವಂತಿಲ್ಲ ಏಕೆಂದರೆ ಮೊಬೈಲ್ ವೀಡಿಯೋ ಚಿತ್ರೀಕರಣದಲ್ಲಿನ ದೃಶ್ಯಗಳು ಸ್ಪಷ್ಟವಿಲ್ಲ ಎಂದು ಮಡಿಕೇರಿ ಅರಣ್ಯ ಉಪ ಸಂರಕ್ಷಣಾಧಿಕಾರಿ ಪ್ರಭಾಕರನ್ “ಶಕ್ತಿ” ಯೊಂದಿಗೆ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಸಾಮಾನ್ಯವಾಗಿ ಚಿರತೆಗಳು ಏಕಾಂಗಿಯಾಗಿರುತ್ತವೆಯೇ ಹೊರತು ಗುಂಪಿನಲ್ಲಿರುವದಿಲ್ಲ ಎಂದಿದ್ದಾರೆ. ಆದರೂ, ಮುನ್ನೆಚ್ಚರಿಕೆ ಕ್ರಮವಾಗಿ ಹಾಗೂ ಯಾವ ಪ್ರಾಣಿ ಎಂದು ಪತ್ತೆ ಹಚ್ಚುವ ಸಲುವಾಗಿ ಶುಕ್ರವಾರ ಹಗಲು ವೇಳೆ ಅರಣ್ಯ ಸಿಬ್ಬಂದಿ ತಪಾಸಣೆ ನಡೆಸಿದ್ದಾರೆ. ರಾತ್ರಿ ವೇಳೆಯೂ ನೆಹರೂ ಮಂಟಪದಲ್ಲಿದ್ದು ಗಮನಿಸುತ್ತಾರೆ. ಕ್ಯಾಮರಾಗಳನ್ನು ಅಳವಡಿಸಲಾಗುತ್ತದೆ. ಚಿರತೆಯೆಂದು ಖಚಿತಗೊಂಡರೆ ಬಳಿಕ ಬೋನನ್ನು ಇರಿಸಿ ಸೆರೆ ಹಿಡಿಯಲಾಗುತ್ತದೆ ಎಂದು ಪ್ರಭಾಕರನ್ ಖಚಿತಪಡಿಸಿದರು.

ಪಹರೆ ಸಿಬ್ಬಂದಿ ಗಣೇಶ್ ರಾಜಾಸೀಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕಳೆದ ಎರಡು ವಾರಗಳಿಂದ ನೆಹರೂ ಮಂಟಪದಲ್ಲಿ ಕೆಲಸ ನಿರ್ವಹಣೆಗೆ ನಿಯೋಜಿತರಾಗಿದ್ದಾರೆ. ಸಂಜೆ 5.30 ರಿಂದ ಬೆ. 8.30ರವರೆಗೆ

(ಮೊದಲ ಪುಟದಿಂದ) ಇವರ ಕೆಲಸದ ವೇಳೆ ನಿಗದಿಯಾಗಿದೆ. ಹಗಲು ವೇಳೆ ಬೇರೆ ಸಿಬ್ಬಂದಿಯಿರು ತ್ತಾರೆ. ಗಣೇಶ್ ಪ್ರಕಾರ ಶುಕ್ರವಾರ ಬೆಳಿಗ್ಗೆ 6.45 ರ ವೇಳೆ ದಿಢೀರಾಗಿ ಮೂರು ಚಿರತೆ ಮರಿಗಳು ಹಾಗೂ ಅವುಗಳ ಬೆನ್ನ ಹಿಂದೆಯೇ ತಾಯಿ ಚಿರತೆ ನೆಹರೂ ಮಂಟಪದ ಒಳಗೆ ಕೆಳ ಭಾಗದಲ್ಲಿ ಓಡಾಡುತ್ತಿದ್ದುದನ್ನು ನೋಡಿ ಗಾಬರಿಗೊಂಡಿದ್ದಾಗಿ ಹೇಳಿದ್ದಾರೆ. ಅಲ್ಲಿ ಪ್ರಾಣ ರಕ್ಷಣೆಗೆ ಯಾವದೇ ಕೊಠಡಿ ಲಭ್ಯವಿಲ್ಲ. ತಕ್ಷಣ ಕೆಲವು ಸಹವರ್ತಿ ಸಿಬ್ಬಂದಿಗಳಿಗೆ ಮೊಬೈಲ್ ಮೂಲಕ ಮಾಹಿತಿ ನೀಡಿದ್ದಾರೆ. ಈ ನಡುವೆ ಗಣೇಶ್ ಧೈರ್ಯದಿಂದ ಮೇಲ್ಭಾಗದಿಂದ ತಮ್ಮ ಮೊಬೈಲ್‍ನಲ್ಲಿ ಪ್ರಾಣಿಗಳ ಚಲನ-ವಲನವನ್ನು ಚಿತ್ರೀಕರಣ ಮಾಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿಯೇ ಈ ಪ್ರಾಣಿಗಳು ಆ ಸ್ಥಳದಿಂದ ದೂರ ಚಲಿಸಿವೆ. ಬಳಿಕ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. . ಕುಂದುರುಮೊಟ್ಟೆ ದೇವಾಲಯ ಬದಿಯಿಂದ ಪಟಾಕಿ ಸಿಡಿಸಿ ಪ್ರಾಣಿಗಳು ಹೊರಗಿದ್ದರೆ ನೆಹರೂ ಮಂಟಪದ ಒಳಭಾಗಕ್ಕೆ ಚಲಿಸಬಹು ದೇನೋ ಎಂದು ಪ್ರಯತ್ನ ನಡೆಸಿ ದ್ದಾರೆ. ಆದರೆ, ಇದರಿಂದ ಯಾವದೇ ಪ್ರಾಣಿ ಇರುವಿಕೆ ಪತ್ತೆಯಾಗಲಿಲ್ಲ.

ನೆಹರೂ ಮಂಟಪದಲ್ಲಿ ವಿದ್ಯುತ್ ಸೌಲಭ್ಯವಿಲ್ಲದಿರುವದರಿಂದ ರಾತ್ರಿ ವೇಳೆ ಪಹರೆ ಕಾರ್ಯ ನಿರ್ವಹಣೆಗೆ ಟಾರ್ಚ್ ಬೆಳಕೇ ಅವಲಂಬನೆ ಯಾಗಿದೆ. ಅಲ್ಲದೆ ಆತ್ಮ ರಕ್ಷಣೆಗೆ ಪಹರೆ ಸಿಬ್ಬಂದಿಗೆ ಕತ್ತಿಯೊಂದೇ ಗತಿ!

ಅರಣ್ಯ ಇಲಾಖೆ ಈ ಪ್ರಾಣಿಗಳನ್ನು ಪತ್ತೆ ಹಚ್ಚುವ ಭರವಸೆ ನೀಡಿದ್ದು ಜನರು ಆತಂಕ ಪಡಬೇಕಾಗಿಲ್ಲ. ಯಾವ ಪ್ರಾಣಿ ಎಂದು ಇನ್ನೂ ಖಾತರಿಗೊಂಡಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಡಿಕೇರಿಯ ಆಕಾಶವಾಣಿ ಕೇಂದ್ರ ಬಳಿಯಿರುವ ನೆಹರು ಮಂಟಪವನ್ನು ಇತ್ತೀಚೆಗಷ್ಟೇ ನವೀಕರಣಗೊಳಿಸಲಾಗಿತ್ತು. ತೋಟ ಗಾರಿಕಾ ಉಸ್ತುವಾರಿ ಯಲ್ಲಿರುವ ಈ ಕೇಂದ್ರದಲ್ಲಿ ಶನಿವಾರದಿಂದ ಪುಷ್ಪೋದ್ಯಾನವನ್ನು ಅಭಿವೃದ್ಧಿ ಗೊಳಿಸುವ ಬಗ್ಗೆ ಇಲಾಖೆ ನಿರ್ಧರಿಸಿದೆ. ಇದೀಗ ಪ್ರಾಣಿಗಳ ಸುದ್ದಿಯಿಂದ ಈ ಕಾರ್ಯ ವಿಳಂಬವಾಗುವ ಸಾಧ್ಯತೆಯಿದೆ.