ಮಡಿಕೇರಿ, ನ. 22: ದ್ವಿ ಶತಮಾನೋತ್ಸವದ ಹೊಸ್ತಿಲಿನಲ್ಲಿರುವ ಇಲ್ಲಿನ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ; ಕಳೆದ 25 ವರ್ಷಗಳ ಬಳಿಕ ನಡೆಸುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಂಬಂಧ; ಇಂದು ಸನ್ನಿಧಿಯಲ್ಲಿ ಅಷ್ಟಮಂಗಲ ಪ್ರಶ್ನೆಗೆ ಚಾಲನೆ ನೀಡಲಾಯಿತು. ಕೊಡಗು ಸೀಮೆಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಮುಳ್ಳೇರಿಯಾದ ಚೇಕೋಡು ಸುಬ್ರಮಣ್ಯ ಭಟ್ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸಲಾಯಿತು.ಈ ಸಂದರ್ಭ ಕೊಡಗಿನ ರಾಜಪರಂಪರೆಯ ಆಳ್ವಿಕೆ ಕಾಲಘಟ್ಟದಲ್ಲಿ ಶ್ರೀ ಒಂಕಾರೇಶ್ವರ ದೇವಾಲಯ ನಿರ್ಮಾಣಕ್ಕೆ ಕಾರಣವಾಗಿರುವ ಅಂಶಗಳು, ಸನ್ನಿಧಿಯ ಪೂಜಾಕ್ರಮಗಳು, ಪರ್ವಕಾಲದ ಉತ್ಸವಾದಿಗಳ ಸಂಬಂಧ ಪ್ರಥಮ ದಿನದಂದು ಗೋಚರ ಫಲ ಲಕ್ಷಣಗಳ ವಿಮರ್ಶೆ ನಡೆಯಿತು.ರಾಶಿಫಲದಂತೆ ಸನ್ನಿಧಿಯಲ್ಲಿ ಉಂಟಾಗಿರುವ ದೋಷಫಲಗಳನ್ನು ಪರಿಹಾರ ಮಾಡಿಕೊಂಡರೆ; ಪ್ರಸ್ತುತ ಸನ್ನಿವೇಶದೊಂದಿಗೆ ಭವಿಷ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಎಲ್ಲಾ ಅನುಕೂಲಗಳಿದ್ದು; ಶ್ರೀ ಓಂಕಾರೇಶ್ವರ ಸನ್ನಿಧಿ ಇನ್ನಷ್ಟು ಪ್ರವರ್ಧಮಾನ ಬೆಳಕಿನತ್ತ ಸಾಗಲಿದೆ ಎಂದು ದೈವಜ್ಞರು ಭವಿಷ್ಯ ನುಡಿದರು.

ಸ್ವರ್ಣಫಲ : ದ್ವಾದಶ ರಾಶಿಗಳ ಗೋಚರ ಫಲ; ದೂತಫಲ ಲಕ್ಷಣ, ಸ್ವರ್ಣಫಲ ಇತ್ಯಾದಿ ಕುರಿತು ವಿಮರ್ಶಿಸಿದ ದೈವಜ್ಞರು; ಶ್ರೀ ಓಂಕಾರೇಶ್ವರ ದೇವಾಲಯವು ಕೇವಲ ಶಿವನಿಗೆ ಸೀಮಿತಗೊಳ್ಳದೆ ಬಹು ಸಾನಿಧ್ಯಗಳ ಪೂಜಾ ಮಂದಿರವಾಗಿದೆ ಎಂದು ವಿಮರ್ಶಿಸಿದರು.

ಬಹು ಸಾನಿಧ್ಯ : ಅಲ್ಲದೆ; ಬ್ರಹ್ಮರಾಕ್ಷಸ, ಶ್ರೀ ಗಣಪತಿ, ದೇವಿ, ಸುಬ್ರಹ್ಮಣ್ಯ, ಆಂಜನೇಯ, ನಾಗಸ್ಥಾನ, ವಿಷ್ಣುವಿನ ಅಂಶ ಸಾಲಿ ಗ್ರಾಮ ಸಹಿತ ಶ್ರೀ ಓಂಕಾರೇಶ್ವರ ದೇವಾಲಯವು ಬಹು ಸಾನಿಧ್ಯಗಳ ಸಂಬಂಧ ಹೊಂದಿದ್ದು; ಈ ಎಲ್ಲಾ ಅಂಶಗಳ ವಿಮರ್ಶೆ ನಡೆಯಬೇಕೆಂದು ಅಭಿಪ್ರಾಯಪಟ್ಟರು.

(ಮೊದಲ ಪುಟದಿಂದ) ತಾ. 25 ಮುಂದುವರಿಕೆ : ಇಂದಿನ ಪ್ರಾರಂಭಿಕ ಅಷ್ಟಮಂಗಲ ಪ್ರಶ್ನೆಯನ್ನು ತಾ. 25ಕ್ಕೆ ಮುಂದೂಡಿದ್ದು; ಮತ್ತೆ ಸಮಗ್ರ ಚಿಂತನೆ ನಡೆಸಲಾಗುವದು ಎಂದು ದೈವಜ್ಞರು ಹಾಗೂ ಕ್ಷೇತ್ರ ತಂತ್ರಿಗಳು ಪ್ರಕಟಿಸಿದರು. ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಲಿಯಂಡ ಜಗದೀಶ್, ಭಾಗಮಂಡಲ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಕಾ.ನಿ. ಅಧಿಕಾರಿ ಜಗದೀಶ್‍ಕುಮಾರ್, ಪ್ರಮುಖರಾದ ಜಿ. ರಾಜೇಂದ್ರ, ಬೊಳ್ಳಿಯಂಡ ಹರೀಶ್, ಪ್ರಕಾಶ್ ಆಚಾರ್ಯ, ಸುನಿಲ್‍ಕುಮಾರ್, ಟಿ.ಹೆಚ್. ಉದಯಕುಮಾರ್, ದಮಯಂತಿ, ದೇವಾಲಯ ಅರ್ಚಕ ವೃಂದ, ಸದ್ಭಕ್ತರು ಪಾಲ್ಗೊಂಡಿದ್ದರು.