ಮಡಿಕೇರಿ, ನ. 23: ಮಡಿಕೇರಿಯ ಐತಿಹಾಸಿಕ ಕೋಟೆ ಹಾಗೂ ಒಳಾಂಗಣದ ಅರಮನೆಯ ದುರಸ್ತಿಗಾಗಿ; ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ನಡೆಯುತ್ತಿದೆ. ಈಗಾಗಲೇ ಕರ್ನಾಟಕ ಸರಕಾರಕ್ಕೆ ರಾಜ್ಯ ಉಚ್ಚನ್ಯಾಯಾಲಯ ನೀಡಿರುವ ನಿರ್ದೇಶನದಂತೆ; ಈ ಅರಮನೆಯ ನವೀಕರಣಕ್ಕಾಗಿ ರೂ. 8,20,45,674 ಮೊತ್ತವನ್ನು ಬಿಡುಗಡೆಗೊಳಿಸಲಾಗಿದ್ದು; ಪುರಾತತ್ವ ಇಲಾಖೆಯ ತಾಂತ್ರಿಕ ಸಲಹೆಯಂತೆ ಕಾಮಗಾರಿಗೆ ಸೂಚಿಸಲಾಗಿದೆ.
ಆ ಮೇರೆಗೆ ರಾಜ್ಯ ಸರಕಾರವು ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯಿಂದ ಕಾಮಗಾರಿ ನಿರ್ವಹಿಸಬೇಕಿದ್ದು; ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸೂಕ್ತ ನಿರ್ದೇಶನದೊಂದಿಗೆ ತಾಂತ್ರಿಕ ಸಲಹೆ ನೀಡಬೇಕಿದೆ. ಆ ದಿಸೆಯಲ್ಲಿ ಪುರಾತತ್ವ ಇಲಾಖೆಯ ತಾಂತ್ರಿಕ ವಿಭಾಗದ ಅಧಿಕಾರಿಗಳು ಅರಮನೆಯ ಗೋಡೆಗಳ ದುರಸ್ತಿ ಹಾಗೂ ಮೇಲ್ಛಾವಣಿಯಲ್ಲಿ ಹಾನಿಗೊಂಡಿರುವ ಮರಮುಟ್ಟುಗಳು ಹಾಗೂ ಹೆಂಚು ಇತ್ಯಾದಿ ಮರು ನಿರ್ಮಿಸಲು ಇಂದು ಸರ್ವೆ ನಡೆಸಿದೆ.
ಅಲ್ಲದೆ ಪ್ರಸಕ್ತ ಸರಕಾರ ಬಿಡುಗಡೆಗೊಳಿಸಿರುವ ರೂ. 8.20 ಕೋಟಿ ಮೊತ್ತದ ಕ್ರಿಯಾಯೋಜನೆ ರೂಪಿಸಿ; ಕೋಟೆಯ ಮೂಲ ಸ್ವರೂಪವನ್ನು ಯಥಾ ಸ್ಥಿತಿಯಲ್ಲಿ ಉಳಿಸಿಕೊಂಡು ನವೀಕರಿಸಲು
(ಮೊದಲ ಪುಟದಿಂದ) ನೀಲ ನಕಾಶೆ ಸಿದ್ಧಗೊಳಿಸಿ; ಸರ್ವೆ ಕೆಲಸ ಕೈಗೊಳ್ಳಲಾಗಿದೆ ಎಂದು ತಾಂತ್ರಿಕ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಮೂಲಗಳ ಪ್ರಕಾರ ಬರುವ ಡಿ. 3 ರಂದು ಈ ಸಂಬಂಧ ಇಲಾಖೆ ಅಧಿಕಾರಿಗಳು; ಸರಕಾರದೊಂದಿಗೆ ಉಚ್ಚ ನ್ಯಾಯಾಲಯಕ್ಕೆ ಜಂಟಿಯಾಗಿ ಮುಂದಿನ ಯೋಜನೆಯ ರೂಪರೇಷಗಳ ವರದಿಯನ್ನು ಸಲ್ಲಿಸಬೇಕಿದೆ. ಆ ದಿಸೆಯಲ್ಲಿ ಈ ಸರ್ವೆ ಕಾರ್ಯ ನಡೆಯುತ್ತಿದೆ.