ಕಣಿವೆ, ನ. 23: ದುಬಾರೆ ಸಾಕಾನೆ ಶಿಬಿರದಿಂದ ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿರುವ ಸಾಕಾನೆ ‘ಕುಶ’ ದುಬಾರೆಯ ಅರಣ್ಯದಲ್ಲಿನ ಕಾಡಾನೆಗಳ ಹಿಂಡು ಸೇರಿರುವ ಬಗ್ಗೆ ಮಡಿಕೇರಿ ಅರಣ್ಯ ಉಪಸಂರಕ್ಷÀಣಾಧಿಕಾರಿ ಪ್ರಭಾಕರನ್ ‘ಶಕ್ತಿ’ಗೆ ದೃಢಪಡಿಸಿದ್ದಾರೆ.18ರ ಪ್ರಾಯದ ಗಂಡಾನೆಯನ್ನು ಮಾವುತ ಮಣಿ ಕಾಡಿಗಟ್ಟಿ ಮೇಯಲೆಂದು ಕಟ್ಟಿಬಂದ ಸಂದರ್ಭದಲ್ಲಿ ಕಾಡಾನೆಗಳ ಹಿಂಡಿನೊಂದಿಗೆ ಸೇರಿಕೊಂಡು ಶಿಬಿರಕ್ಕೆ ಮರಳಿರಲಿಲ್ಲ. ನಮ್ಮ ಸಿಬ್ಬಂದಿಗಳು ಮತ್ತು ಮಾವುತರನ್ನು ಮೂರು ತಂಡಗಳಾಗಿ ರಚಿಸಿದ್ದು, ಅರಣ್ಯದ ಬೇರೆ ಬೇರೆ ದಿಕ್ಕುಗಳಲ್ಲಿ ಶೋಧ ನಡೆಸಿದಾಗ ದುಬಾರೆ ಅರಣ್ಯದ ದೊಡ್ಡವರ್ತಿ ಎಂಬ ಸ್ಥಳದಲ್ಲಿ ಕಾಡಾನೆಗಳ ಜೊತೆ ಸೇರಿರುವದು ಖಚಿತವಾಗಿದೆ.ನಮ್ಮ ಸಾಕಾನೆಯ ಚಲನವಲನದ ಮೇಲೆ ನಿಗಾವಹಿಸಿದ್ದು ಒಂದೆರಡು ದಿನಗಳಲ್ಲಿ ಶಿಬಿರಕ್ಕೆ ಮರಳಿ ತರಲಾಗುವದು ಎಂದು ಅವರು ತಿಳಿಸಿದರು. ಸಾಕಾನೆ ಕುಶ ಕಾಡಾನೆಗಳ ಹಿಂಡಿನೊಳಗೆ ಒಂದು
(ಮೊದಲ ಪುಟದಿಂದ) ಸಣ್ಣ ಪ್ರಾಯದ ಹೆಣ್ಣಾನೆಯ ಜೊತೆ ತಿರುಗುತ್ತಿದ್ದಾನೆ. ನಾವುಗಳು ಕಳೆದ ಎರಡು ದಿನಗಳಿಂದಲೂ ಹನ್ನೆರಡು ಮಂದಿ ಒಂದು ತಂಡವಾಗಿ ಹುಡುಕುತ್ತಿದ್ದೇವೆ. ಹೀಗೆ ಹುಡುಕುವಾಗ ನಮ್ಮ ಕುಶ ಹೆಣ್ಣಾನೆಯ ಜೊತೆಯೇ ಓಡಾಡಿಕೊಂಡಿದ್ದಾನೆ ಎಂದು ಅರಣ್ಯಾಧಿಕಾರಿಯೊಬ್ಬರು ಹೇಳಿದರು.
ಈ ಹಿಂದೆಯೂ ಶಿಬಿರದಲ್ಲಿನ ಕಾವೇರಿ ಹಾಗೂ ಮನು ಎಂಬ ಆನೆಗಳು ಕಾಡಾನೆಗಳ ಜೊತೆ ಸೇರಿ ಹೋಗಿದ್ದವು. ನಾವುಗಳು ಅನೇಕ ದಿನಗಳ ನಂತರ ಮರಳಿ ಶಿಬಿರಕ್ಕೆ ಕರೆತಂದ ಉದಾಹರಣೆಗಳು ಇವೆ ಎಂದು ಅವರು ಹೇಳುತ್ತಾರೆ.
ದುಬಾರೆ ಆನೆ ಶಿಬಿರದಲ್ಲಿ ಈ ಹಿಂದೆ ಇದ್ದ ಕಾರ್ತಿಕ ಎಂಬ ಸಾಕಾನೆ ಅಲ್ಲಿನ ಮಾವುತರನ್ನು ಬಲಿ ಪಡೆದು ಕಂಟಕನಾಗಿದ್ದ ಅವಧಿಯಲ್ಲಿ ಕಾಕತಾಳೀಯ ಎಂಬಂತೆ ಅರಣ್ಯದೊಳಗೆ ಮೇಯುವ ಸಂದರ್ಭ ಹೆಜ್ಜೇನು ಧಾಳಿ ನಡೆಸಿ ಮಾರಕವಾಗಿ ನೋವುಂಡಿತ್ತು. ಕೊನೆಗೆ ಆ ನೋವಿನಿಂದ ಹೊರಬಾರದೇ ಕಾರ್ತಿಕ ಕೊನೆಗೆ ಸಾವನ್ನಪ್ಪಿತ್ತು. ಈಗ ಶಿಬಿರದಲ್ಲಿ 29 ಸಾಕಾನೆಗಳಿವೆ. ದುಬಾರೆ ಅರಣ್ಯಕ್ಕೆ ಹೊಂದಿಕೊಡಂತೆ ಖಾಸಗಿಯಾಗಿ ವ್ಯಕ್ತಿಯೊಬ್ಬರು ದುಬಾರೆ ವ್ಯಾಪ್ತಿಯಲ್ಲಿ ಕೆಲವು ಆನೆಗಳನ್ನು ಸಾಕಿದ್ದು ಒಂದು ಮಕನಾ ಆನೆ ಹೆರೂರು ಭಾಗದತ್ತ ತೆರಳಿದ್ದು ಶನಿವಾರ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟು ಮಾಡಿದ ಘಟನೆಯೂ ಜರುಗಿದೆ. -ಕೆ.ಎಸ್. ಮೂರ್ತಿ