ಮಡಿಕೇರಿ, ನ. 20: ಇಲ್ಲಿನ ಬಾಲಕಿಯರ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದ ಮೂವರು ಸಿಬ್ಬಂದಿಗೆ ನಿನ್ನೆಯ ಘಟನೆ ಸಂಬಂಧ ಎಚ್ಚರಿಕೆ ನೀಡಿ ಬೇರೆಡೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.

ವಿದ್ಯಾರ್ಥಿನಿಯರ ನಡುವೆ ಗುಂಪುಗಾರಿಕೆಯೊಂದಿಗೆ ಹೊಡೆದಾಟಕ್ಕೆ ಕಾರಣವಾಗಿದ್ದ ಪ್ರಕರಣ ಸಂಬಂಧ, ವಾರ್ಡನ್ ಮಲ್ಲಿಗೆ ಅವರಿಗೆ ಹಿಂಬಡ್ತಿಯೊಂದಿಗೆ ಚೇರಂಬಾಣೆ ವಸತಿಯಲ್ಲಿ ಅಡುಗೆ ಕೆಲಸಕ್ಕೆ ನಿಯೋಜಿಸಲಾಗಿದೆ.

ಅಲ್ಲದೆ ನಾಲ್ಕನೇ ದರ್ಜೆ ನೌಕರರುಗಳದ ನೂರ್‍ಜಹಾನ್ ಹಾಗೂ ರಮ್ಯ ಅವರಿಬ್ಬರನ್ನು ಪ್ರತ್ಯೇಕ ವಸತಿಗಳಿಗೆ ಎತ್ತಂಗಡಿ ಮಾಡಲಾಗಿದ್ದು, ಮತ್ತೆ ದೂರುಗಳು ಬಂದರೆ ಕರ್ತವ್ಯದಿಂದ ಅಮಾನತುಗೊಳಿಸುವದಾಗಿ ಈ ಮೂವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಖಚಿತಪಡಿಸಿದ್ದಾರೆ.

ಈ ವಸತಿ ನಿಲಯಕ್ಕೆ ಇಂದು ಹಠಾತ್ ಭೇಟಿ ನೀಡಿದ್ದ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ ಹಾಗೂ ಇಲಾಖೆಯ ಅಧಿಕಾರಿಗಳು, ಪೋಷಕರು ಹಾಗೂ ಮಕ್ಕಳ ಸಭೆ ನಡೆಸಿ ಅಭಿಪ್ರಾಯ ಪಡೆಯುವದರೊಂದಿಗೆ ಈ ಮೂವರನ್ನು ಎತ್ತಂಗಡಿಗೊಳಿಸಿ ಬದಲಿ ವ್ಯವಸ್ಥೆ ಕಲ್ಪಿಸಿದ್ದಾರೆ.