ಸೋಮವಾರಪೇಟೆ, ನ. 20: ಸಮೀಪದ ತೋಳೂರು ಶೆಟ್ಟಳ್ಳಿ ಗ್ರಾಮ ದೇವತೆ ಶ್ರೀ ಸಬ್ಬಮ್ಮ ದೇವಿಯ ದೇವಾಲಯದ ಗರ್ಭಗುಡಿಯ ಪುನರ್ ನಿರ್ಮಾಣ ಕಾರ್ಯ ಸಾಗುತ್ತಿದ್ದು, ಉದ್ಯಮಿ ಹರಪಳ್ಳಿ ರವೀಂದ್ರ ಅವರು ಗರ್ಭಗುಡಿ ನಿರ್ಮಾಣಕ್ಕೆ ರೂ. 5 ಲಕ್ಷ ದೇಣಿಗೆ ನೀಡಿದ್ದಾರೆ.
ದೇವಾಲಯ ಸಮಿತಿ ಅಧ್ಯಕ್ಷ ರಾಜಗೋಪಾಲ್ ಅವರಿಗೆ ಚೆಕ್ ಹಸ್ತಾಂತರಿಸಲಾಯಿತು. ಬಳಿಕ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ತೆಗೆಯುವ ಕಾರ್ಯದಲ್ಲಿ ಹರಪಳ್ಳಿ ರವೀಂದ್ರ ಅವರು ತೊಡಗಿಸಿಕೊಂಡರು. ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಸುಗ್ಗಿ ಉತ್ಸವ ನಡೆಯಲಿದ್ದು, ಅಷ್ಟರೊಳಗೆ ಗರ್ಭಗುಡಿಯ ಪುನರ್ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ರವೀಂದ್ರ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ದೇವಾಲಯ ಸಮಿತಿಯ ಕಾರ್ಯದರ್ಶಿ ಡಿ.ಎಲ್. ಜಗದೀಶ್, ಖಜಾಂಚಿ ಮನೋಹರ್ ಹಾಗೂ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.