ಸಿದ್ದಾಪುರ, ನ. 20: ಸಿದ್ದಾಪುರ ವ್ಯಾಪ್ತಿಯ ಮಹಿಳಾ ಗ್ರಾಮ ಸಭೆ ಗ್ರಾ.ಪಂ. ಅಧ್ಯಕ್ಷೆ ದೇವಜಾನುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಅವರು ಮಾತನಾಡಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮಹಿಳೆಯರು ಮುಂದೆ ಬರಬೇಕೆಂದರು.
ಕರಡಿಗೋಡು, ಗುಹ್ಯ, ಸಿದ್ದಾಪುರ ಗ್ರಾಮದ ಮಹಿಳೆಯರು ಹಾಜರಾಗಿ ಚರಂಡಿ, ರಸ್ತೆ, ಪಡಿತರ ಚೀಟಿ, ಮನೆ, ಬೀದಿ ದೀಪ, ಕಸದ ಸಮಸ್ಯೆಗಳ ಬಗೆ ಸಭೆಯ ಗಮನ ಸೆಳೆದರು.
ಕಸವನ್ನು ಎಲ್ಲೆಂದರಲ್ಲಿ ಸುರಿಯುವದನ್ನು ಬಿಟ್ಟು ಮಹಿಳೆಯರು ಹಸಿಕಸ ಮತ್ತು ಘನಕಸವನ್ನು ವಿಂಗಡಿಸಿ ಪಂಚಾಯಿತಿ ಪೌರಕಾರ್ಮಿಕರಿಗೆ ಒಪ್ಪಿಸಿ ಗ್ರಾಮದ ಶುಚಿತ್ವ ಕಾಪಾಡಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ರಸ್ತೆ ಬದಿಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಸಹಾಕಿದರೆ ಅಂತಹವರ ಮನೆಗೆ ಅದರ ಎರಡರಷ್ಟು ಕಸವನ್ನು ಕಳುಹಿಸುವಂತಹ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಗ್ರಾಮಸ್ಥರನ್ನು ಎಚ್ಚರಿಸಿದರಲ್ಲದೆ, ಕಸದ ಸಮಸ್ಯೆ ಬಗೆಹರಿಸಲು ಗ್ರಾಮ ಪಂಚಾಯಿತಿ ಎಲ್ಲಾ ರೀತಿಯಲ್ಲೂ ಸಜ್ಜಾಗಿದ್ದು, ಸಾರ್ವಜನಿಕರ ಸಹಕಾರ ಅಗತ್ಯ ಎಂದರು.
ಸಭೆಯಲ್ಲಿ ಗ್ರಾಮದ ಮಹಿಳೆಯೊಬ್ಬರು ಲಯನ್ಸ್ ಕ್ಲಬ್ನವರು ಮಕ್ಕಳ ಪ್ಯಾಂಪರ್ಸ್ ಬಳಕೆಯಿಂದ ಪರಿಸರ ಮಾಲಿನ್ಯ ತಡೆಯಲು ನೂತನ ಬಳಕೆಯ ಪ್ಯಾಂಪರ್ಸನ್ನು ಪರಿಚಯಿಸಿದ್ದು, ಇದನ್ನು ನೀರಿನಿಂದ ತೊಳೆದು ಮೂರು ವರ್ಷದವರೆಗೆ ಬಳಕೆ ಮಾಡಬಹುದಾಗಿದೆ ಎಂದು ಆಶಾ ಕಾರ್ಯಕರ್ತೆಯೊಬ್ಬರು ಸಭೆಗೆ ತಿಳಿಸಿದರು.
ಗ್ರಾಮಸ್ಥರಾದ ಫಾಸಿಲ, ಸುಮಿತ್ರಾ, ವನಜಾ, ಆಶಾ ಕಾರ್ಯಕರ್ತರಾದ ಸವಿತಾ, ಮಷಿಲಾ, ಪುಷ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಸುಮ, ಸುಜಾತ, ಆಶಾ, ವಾಯಿದಾ ಖಾನ್, ಸಹನಾ, ಸರಸು, ಜೋಸೆಫಿನ, ಆಶಾ, ಆರೋಗ್ಯ ಸಹಾಯಕಿ ರಶ್ಮಿ, ಗ್ರಾಮ ಪಂಚಾಯಿತಿ ಸದಸ್ಯರಾದ ಪೂವಮ್ಮ, ಶೀಲಾ, ಜಾಫರಾಲಿ, ಸೌಕತ್ತಾಲಿ, ಶುಕೂರ್ ಹಾಜರಿದ್ದರು.