ಶಾಂತಿ ಅಚ್ಚಪ್ಪ ವಿಷಾದ

*ಗೋಣಿಕೊಪ್ಪಲು, ನ. 20: ಸಾತಂತ್ರ್ಯ ಬಂದು ಎಪ್ಪತ್ತೆರಡು ವರ್ಷಗಳು ಸರಿದರೂ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಬದುಕು ಸುದಾರಿಸಿಲ್ಲ ಎಂದು ರಾಜ್ಯ ಮಾನವ ಹಕ್ಕು ಸಮಿತಿಯ ಉಪಾಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ವಿಷಾದಿಸಿದರು. ಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಹೈಸೊಡ್ಲೂರು ಗ್ರಾಮದ ಪೈಸಾರಿ ಜಾಗದಲ್ಲಿ ನೆಲೆ ನಿಂತಿರುವ ನಿರಾಶ್ರಿತರ ಗುಡಿಸಲುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅವರು ಮಾತನಾಡಿದರು. ಪ್ರತಿಯೊಬ್ಬನಿಗೂ ಭಾರತದಲ್ಲಿ ತನ್ನದೇ ಆದ ಮೂಲ ಭೂತ ಸೌಕರ್ಯಗಳನ್ನು ಹೊಂದುವ ಹಕ್ಕು ಇದೆ. ಸರ್ಕಾರ ಈ ವ್ಯವಸ್ಥೆ ಯನ್ನು ಸಮರ್ಪಕವಾಗಿ ಪೂರೈಸಲು ಎಡವುತ್ತಿದೆ. ಹೀಗಾಗಿ ಇಂದಿಗೂ ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ದಿ ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು. ಹೈಸೊಡ್ಲೂರು ಗ್ರಾಮದಲ್ಲಿ ನೆಲೆನಿಂತಿರುವ 72ಕ್ಕೂ ಅಧಿಕ ಕುಟುಂಬಗಳಿಗೆ ಮೂಲ ಸೌಕರ್ಯ ಗಳನ್ನು ಒದಗಿಸಿಕೊಡಲು ಹೋರಾಟ ನಡೆಸುವ ಭರವಸೆಯನ್ನು ನೀಡಿದ ಅವರು, ಇಲ್ಲಿನ 72 ಕುಟುಂಬ ಗಳಿಗೂ ಹಕ್ಕು ಪತ್ರ ನೀಡುವ ಮೂಲಕ ಸರ್ಕಾರದ ಎಲ್ಲಾ ಸೌಲಭ್ಯ ಗಳನ್ನು ಕೂಡಲೇ ಒದಗಿಸಿಕೊಡುವ ಕಾರ್ಯಕ್ಕೆ ಅಧಿಕಾರಿಗಳು ಮುಂದಾಗ ಬೇಕೆಂದು ಒತ್ತಾಯಿಸಿದ ಅವರು ಶೀಘ್ರದಲ್ಲೇ ಈ ವ್ಯವಸ್ಥೆಗಳು ಕಾರ್ಯ ರೂಪಕ್ಕೆ ಬಾರದಿದ್ದರೆ ಮುಂದಿನ ದಿನಗಳಲ್ಲಿ ಸಂಘಟನೆಗಳ ಮೂಲಕ ಬೃಹತ್ ಹೋರಾಟ ನಡೆಸಲಾಗು ವದು ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾ ಮಾನವ ಹಕ್ಕು ಸಮಿತಿಯ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಮಾತನಾಡಿ, ಹಿಂದುಳಿದ ವರ್ಗದವರ ಶಿಕ್ಷಣ ವ್ಯವಸ್ಥೆ ಸುದಾರಣೆ ಆಗುವವರೆಗೂ ಅವರು ಸಮಾಜದಲ್ಲಿ ಶೋಷಿತ ರಾಗಿಯೇ ಉಳಿಯುತ್ತಾರೆ. ಇಂತಹ ಸಮುದಾಯದವರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸ್ಥಾನ ಒದಗಿಸಿಕೊಡಬೇಕು ಎಂದು ಹೇಳಿದರು.

ಜೆಡಿಎಸ್ ಜಿಲ್ಲಾ ಕಾರ್ಮಿಕರ ಸಂಘದ ಅಧ್ಯಕ್ಷ ಪರ್ಮಾಲೆ ಗಣೇಶ್ ಮಾತನಾಡಿ, ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಸ್ಸಾಂ ಕಾರ್ಮಿಕರಿಂದ ಆತಂಕ ಎದುರಾಗುತ್ತಿದೆ. ಇಂತವರಿಗೆ ಜಿಲ್ಲೆಯಲ್ಲಿರುವ ತೋಟ ಮಾಲೀಕರು ಕೆಲಸ ನೀಡದೇ ಸ್ಥಳೀಯ ಕಾರ್ಮಿಕರಿಗೆ ಕೆಲಸ ನೀಡಬೇಕೆಂದು ಹೇಳಿದರು. ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗದ ಸಂಚಾಲಕ ಕೃಷ್ಣಪ್ಪ ಸೇರಿದಂತೆ ಹಾಡಿಯ ನಿವಾಸಿಗಳು ಹಾಜರಿದ್ದರು.