ವೀರಾಜಪೇಟೆ, ನ. 20: ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆದು ಒಂದು ವರ್ಷವಾದರೂ ಇನ್ನು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯದೆ ಪಟ್ಟಣ ಪಂಚಾಯಿತಿಯ ಆಡಳಿತ ನೆನೆಗುದಿಗೆ ಬಿದ್ದಿದ್ದು ಇದರ ಕುರಿತು ಸರಕಾರಕ್ಕೂ ಕಾಳಜಿ ಇಲ್ಲದಂತಾಗಿತ್ತು. ಈಗ ಹೊಸ ಮೀಸಲಾತಿ ಪಟ್ಟಿಯನ್ನು ಸಲ್ಲಿಸಲು ಉಚ್ಚ ನ್ಯಾಯಾಲಯ ಸರಕಾರಕ್ಕೆ ಆದೇಶ ನೀಡಿದ್ದು, ಆದೇಶದ ದಿನಾಂಕದಿಂದ 30ದಿನಗಳೊಳಗೆ ಪಟ್ಟಿಯನ್ನು ಸಲ್ಲಿಸಿ ತೀರ್ಮಾನದ ನಂತರ ಚುನಾವಣೆ ನಡೆಸಲು ಅವಕಾಶ ನೀಡಿರುವದರಿಂದ ಪಟ್ಟಣ ಪಂಚಾಯಿತಿಯ ಮೀಸಲಾತಿಯ ವಿವಾದ ಇದರಿಂದ ಬಗೆ ಹರಿದಂತಾಗಿದೆ.
ಐದು ವರ್ಷದ ಅವಧಿ ಮುಗಿದಿದ್ದ ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಹದಿನೆಂಟು ಸ್ಥಾನಗಳಿಗೆ 28.10.2018 ರಂದು ಚುನಾವಣೆ ನಡೆದಿದೆ. ಚುನಾವಣೆ ನಡೆದು 30 ದಿನಗಳ ಅವಧಿಯೊಳಗೆ ಅಧ್ಯಕ್ಷ ಉಪಾಧ್ಯಕ್ಷ ಪದವಿಗಳಿಗೆ ಚುನಾವಣೆ ನಡೆಯಬೇಕಿತ್ತು. ಮೀಸಲಾತಿಯ ವಿವಾದ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ಈ ಪದವಿಗಳ ಚುನಾವಣೆ ಒಂದು ವರ್ಷದವರೆಗೆ ಮುಂದೂಡಿದ್ದರಿಂದ ಚುನಾವಣೆಯಲ್ಲಿ ಆಯ್ಕೆಯಾದ ಪ್ರತಿನಿಧಿಗಳು ಅತಂತ್ರ ಸ್ಥಿತಿಯಲ್ಲಿದ್ದರು.
ಪಟ್ಟಣ ಪಂಚಾಯಿತಿಯ ಹದಿನೆಂಟು ಕ್ಷೇತ್ರಗಳಿಂದ ವಿವಿಧ ರಾಜಕೀಯ ಪಕ್ಷಗಳಿಂದ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಹದಿನೆಂಟು ಕ್ಷೇತ್ರಗಳ ಪೈಕಿ ಕೆಲವು ಕ್ಷೇತ್ರಗಳಲ್ಲಿ ಮತದಾರರು ಇದರ ಅರಿವಿಲ್ಲದೆ ಚುನಾಯಿತ ಪ್ರತಿನಿಧಿಗಳು ಈ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿಲ್ಲವೆಂಬದಾಗಿ ದೂರುತ್ತಿರುವದಾಗಿ ಕೆಲವು ಸದಸ್ಯರು ಗಳು ತಮ್ಮ ಅಳಲನ್ನು ಮಾಧ್ಯಮದವ ರೊಂದಿಗೆ ತೋಡಿ ಕೊಂಡಿದ್ದಾರೆ.
ರಾಜ್ಯದ ಅನೇಕ ಜಿಲ್ಲೆಗಳ ಪಟ್ಟಣ ಪಂಚಾಯಿತಿಗಳು ಸರಕಾರದ 2018ರ ಮೀಸಲಾತಿಯನ್ನು ವಿರೋಧಿಸಿ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ರಾಜ್ಯದ ಬಹತೇಕ ರಿಟ್ ಅರ್ಜಿಗಳು ವಿಚಾರಣೆಯಿಂದ ಅಂತಿಮ ಸ್ವರೂಪ ಪಡೆದು ಕೊಂಡಿದ್ದರೂ, ಗುಲ್ಬರ್ಗ ಜಿಲ್ಲೆಯ ಕೆಲವು ಪಟ್ಟಣ ಪಂಚಾಯಿತಿಗಳು ಮೀಸಲಾತಿ ವಿರೋಧದ ರಿಟ್‍ನ್ನು ಮುಂದುವರೆಸಿದ್ದವು. ಈಗ ಈ ರಿಟ್ ಅರ್ಜಿಯ ವಿವಾದ ಅಂತಿಮಗೊಂಡಿ ರುವದರಿಂದ ಸರಕಾರ ನೆನೆಗುದಿಗೆ ಬಿದ್ದಿರುವ ಎಲ್ಲ ಪಟ್ಟಣ ಪಂಚಾಯಿತಿಗಳ ಎರಡು ಪದವಿಗಳ ಚುನಾವಣೆಗೆ ಅವಕಾಶ ನೀಡಲು ಸಿದ್ಧತೆ ನಡೆಸಿದೆ. ಸರಕಾರ ಹೊಸ ಮೀಸಲಾತಿ ಪಟ್ಟಿಯನ್ನು ಜಾರಿಗೊಳಿಸಿ ನ್ಯಾಯಾಲಯಕ್ಕೆ ಸಲ್ಲಿಸಲಿರುವದರಿಂದ ಮೀಸಲಾತಿಯ ವಿರೋಧಕ್ಕೆ ತೆರೆ ಬೀಳಲಿದೆ.
ಗುಲ್ಬರ್ಗ ಜಿಲ್ಲೆಯ ಪಟ್ಟಣ ಪಂಚಾಯಿತಿಗಳು ಸರಕಾರದ ಮೀಸಲಾತಿ ವಿರೋಧಿಸಿ ಸಲ್ಲಿಸಿದ್ದ ರಿಟ್ ಅರ್ಜಿಯಿಂದಾಗಿ ಸರಕಾರ ಮೀಸಲಾತಿ ಪಟ್ಟಿಯನ್ನು ಪುನರ್ ಪರಿಶೀಲಿಸಿ ಹೊಸ ಪಟ್ಟಿ ಬಿಡುಗಡೆಗೆ ಈಗ ಆಸಕ್ತಿ ತೋರಿದೆ. ಈ ಎರಡು ಪದವಿಗಳ ಚುನಾವಣೆ ವಿಳಂಬ ದಿಂದಾಗಿ ಪಟ್ಟಣ ಪಂಚಾಯಿತಿಯ ಅಭಿವೃದ್ಧಿಗೂ ಹಿನ್ನಡೆ ಉಂಟಾಗಿದೆ.
ಲಾಟರಿಗೆ ಹೆಚ್ಚು ಅವಕಾಶ
ಸರಕಾರ ಪಟ್ಟಣ ಪಂಚಾಯಿತಿಯ ಎರಡು ಪದವಿಗಳಿಗೆ ಮೀಸಲಾತಿ ಪಟ್ಟಿಯನ್ನು ಮರು ಪರಿಶೀಲಿಸಿ ರೋಟೇಶನ್ ಪದ್ಧತಿ ಯಂತೆ ಹೊಸ ಮೀಸಲಾತಿಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಪದವಿ ಯಾರಿಗೆ ದಕ್ಕಲಿದೆ ಎಂದು ರಾಜಕೀಯ ಪಕ್ಷಗಳು, ಪಕ್ಷೇತರರು ಇನ್ನು ನಿರೀಕ್ಷೆಯಲ್ಲಿದ್ದಾರೆ. ಈಗ ವೀರಾಜಪೇಟೆ ಪಟ್ಟಣ ಪಂಚಾಯಿತಿ ಯಲ್ಲಿ ಹದಿನೆಂಟು ಕ್ಷೇತ್ರದ ಜನ ಪ್ರತಿನಿಧಿಗಳಲ್ಲಿ ಬಿ.ಜೆ.ಪಿ. 8 ಸ್ಥಾನಗಳು, ಕಾಂಗ್ರೆಸ್ 6 ಸ್ಥಾನಗಳು, ಜೆ.ಡಿ.ಎಸ್. 1 ಹಾಗೂ ಪಕ್ಷೇತರರು 3 ಮಂದಿ ಇದ್ದಾರೆ. ಸರಕಾರದ ಮೊದಲ ಮೀಸಲಾತಿ ಪಟ್ಟಿಯ ಪ್ರಕಾರ ಪಕ್ಷೇತರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರೆ ಪಟ್ಟಣ ಪಂಚಾಯಿತಿ ಸಮಬಲ ಸಂಖ್ಯೆಯನ್ನು ಹೊಂದಿ ಆಯ್ಕೆಗೆ ಲಾಟರಿ ಮೂಲಕ ಆದ್ಯತೆ ಇತ್ತು. ಈಗ ಸರಕಾರದ ಹೊಸ ಮೀಸಲಾತಿಯನ್ನು ಗುಪ್ತ ಮತದಾನವೇ, ಇಲ್ಲವೇ ಲಾಟರಿ ಆಯ್ಕೆಯೇ ಎಂದು ಕಾದು ನೋಡಬೇಕಾಗಿದೆ.
ಚುನಾವಣೆಯಲ್ಲಿ ಆಯ್ಕೆಯಾದ ಪ್ರಕಾರ ವಾರ್ಡ್ ನಂ. 1ರಲ್ಲಿ ಜೆ. ಫಸಿಹ ತಂಬಸುಂ (ಕಾಂಗ್ರೆಸ್) 2ರಲ್ಲಿ ಪಿ.ಎ. ರಂಜಿ ಪೂಣಚ್ಚ (ಕಾಂಗ್ರೆಸ್) 3ರಲ್ಲಿ ಡಿ.ಪಿ. ರಾಜೇಶ್ (ಕಾಂಗ್ರೆಸ್) 4ರಲ್ಲಿ ಟಿ.ಆರ್. ಸುಶ್ಮಿತಾ (ಬಿಜೆಪಿ) 5ರಲ್ಲಿ ಎಸ್.ಎಚ್. ಮತೀನ್, (ಜೆ.ಡಿ.ಎಸ್.) 6ರಲ್ಲಿ ವಿ.ಆರ್. ರಜನಿಕಾಂತ್ (ಪಕ್ಷೇತರ) 7ರಲ್ಲಿ ಎಂ.ಕೆ.ದೇಚಮ್ಮ(ಪಕ್ಷೇತರ) 8ರಲ್ಲಿ ಸಿ.ಜಿ.ಆಗಸ್ಟೀನ್ ಬೆನ್ನಿ (ಕಾಂಗ್ರೆಸ್) 9ರಲ್ಲಿ ಕೆ.ಎಚ್.ರಫೀಕ್( ಕಾಂಗ್ರೆಸ್) 10ರಲ್ಲಿ ಅನಿತಾ(ಬಿಜೆಪಿ)11ರಲ್ಲಿ ಎಚ್.ಪಿ ಮಹದೇವ್ (ಬಿಜೆಪಿ.) 12ರಲ್ಲಿ ಅಬ್ದಲ್ ಜಲೀಲ್ (ಪಕ್ಷೇತರ) 13ರಲ್ಲಿ ಕೆ.ಬಿ. ಹರ್ಷವರ್ಧನ್ (ಬಿಜೆಪಿ) 14ರಲ್ಲಿ ಸಿ.ಕೆ. ಪೃಥ್ವಿನಾಥ್ (ಕಾಂಗ್ರೆಸ್) 15ರಲ್ಲಿ ಟಿ.ಎಂ. ಸುನೀತ ಜೂನ (ಬಿಜೆಪಿ) 16ರಲ್ಲಿ ಆಶಾ ಸುಬ್ಬಯ್ಯ, (ಬಿಜೆಪಿ) 17ರಲ್ಲಿ ಎಚ್.ಎಂ. ಪೂರ್ಣಿಮಾ (ಬಿಜೆಪಿ) 18ರಲ್ಲಿ ಟಿ.ಕೆ. ಯಶೋಧ (ಬಿಜೆಪಿ) ಪಟ್ಟಣ ಪಂಚಾಯಿತಿಯ ಜನ ಪ್ರತಿನಿಧಿಗಳಾಗಿದ್ದಾರೆ.
ಜನತೆ ಪಟ್ಟಣ ಪಂಚಾಯಿತಿಯ ಮೊದಲ ಸಭೆಗಾಗಿ (ಫಸ್ಟ್ ಸಿಟ್ಟಿಂಗ್) ಹಾಗೂ ಕ್ಷೇತ್ರದ ಜನರ ಸೇವೆಗಾಗಿ ಕಾಯುತ್ತಿದ್ದಾರೆ.
-ಡಿ.ಎಂ.ಆರ್