ಗೋಣಿಕೊಪ್ಪಲು, ನ.18: ರಾಜ್ಯ ಸರ್ಕಾರ ಘೋಷಣೆ ಮಾಡಿರುವ ರೈತರ ಬೆಳೆ ಸಾಲ ಮನ್ನಾ ಯೋಜನೆಯ ಸಂಬಂಧ ಅರ್ಹ ಫಲಾನುಭವಿಗಳ ಆಯ್ಕೆ ಗೊಂದಲ ನಿವಾರಿಸಲು ಹಾಗೂ ರೈತರ ಖಾತೆಗೆ ಹಣ ಜಮಾ ಮಾಡಲು ಒತ್ತಾಯಿಸಿ ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕಿನ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ

(ಮೊದಲ ಪುಟದಿಂದ) ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು. ಪಟ್ಟಣದ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿದ ರೈತರು ರಸ್ತೆಯಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಕೂಡಲೇ ರೈತರಿಗಾಗಿರುವ ಸಮಸ್ಯೆಯನ್ನು ಬಗೆ ಹರಿಸಲು ಒತ್ತಾಯಿಸಿದರು.ರೈತರ ಸಮಸ್ಯೆ ಆಲಿಸಲು ಆಗಮಿಸಿದ ವೀರಾಜಪೇಟೆ ತಾಲೂಕಿನ ತಹಶೀಲ್ದಾರ್ ಮಹೇಶ್ ಹಾಗೂ ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕರಾದ ರವಿ ಕುಮಾರ್ ರೈತರ ಸಮಸ್ಯೆಗಳನ್ನು ಆಲಿಸುವ ಮೂಲಕ ರೈತರ ಬೆÉೀಡಿಕೆಯಂತೆ 15 ದಿನಗಳಲ್ಲಿ ಜಿಲ್ಲೆಯ ಜಿಲ್ಲಾಧಿಕಾರಿಗಳು, ಎಲ್ಲಾ ತಾಲೂಕಿನ ತಹಶೀಲ್ದಾರ್, ಜಿಲ್ಲೆಯ ಸಹಕಾರಿ ಸಂಘಗಳ ಉಪ ನಿಬಂಧಕರು ಸಹಕಾರಿ ಸಂಘಗಳ ಸಹಾಯಕ ನಿಬಂಧಕರು ಮತ್ತು ಜಿಲ್ಲಾ ಸಹಕಾರಿ ಬ್ಯಾಂಕಿನ ಅಧಿಕಾರಿಗಳು ಹಾಗೂ ಲೀಡ್ ಬ್ಯಾಂಕಿನ ವ್ಯವಸ್ಥಾಪಕರನ್ನು ಮತ್ತು ರೈತ ಮುಖಂಡರನ್ನೊಳಗೊಂಡಂತೆ ಮೇಲಾಧಿಕಾರಿಗಳ ಅನುಮತಿ ಪಡೆದು ಸಭೆ ನಡೆಸುವ ಭರವಸೆ ನೀಡಿದರು.

ಕರ್ನಾಟಕ ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡಿ ಯೋಜನೆ ರೂಪಿಸಿದ್ದು ಈ ಸಂಬಂಧ ಸಾಲ ಮನ್ನಾ ಅನುಕೂಲ ಪಡೆಯಲು ಜಿಲ್ಲೆಯ ರೈತರು ಸಂಬಂಧಪಟ್ಟ ಸಹಕಾರಿ ಬ್ಯಾಂಕ್‍ಗಳಿಗೆ ಮತ್ತು ವಾಣಿಜ್ಯ ಬ್ಯಾಂಕ್‍ಗಳಿಗೆ ಅವಶ್ಯವಾಗಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದರೂ ಬ್ಯಾಂಕ್‍ಗಳು ತಾಂತ್ರಿಕ ಕಾರಣ ನೀಡಿ ಜಿಲ್ಲೆಯ ಸುಮಾರು ಶೇ.50 ಭಾಗ ಸಾಲ ಪಡೆದ ರೈತರನ್ನು ಸಾಲ ಮನ್ನಾ ಯೋಜನೆಯಿಂದ ಹೊರಗಿಟ್ಟಿವೆ. ಅಧಿಕಾರಿ ಮಟ್ಟದಲ್ಲಿ ಇಂತಹ ನ್ಯೂನ್ಯತೆಗಳನ್ನು ಸರಿಪಡಿಸದಿದ್ದಲ್ಲಿ ರೈತರ ಸಮಸ್ಯೆಗೆ ಪರಿಹಾರ ಕಾಣಲು ಸಾಧ್ಯವಿಲ್ಲ. ಈಗಾಗಲೇ 14 ತಿಂಗಳಿಂದ ರೈತರಿಗೆ ಸಾಲ ಮನ್ನಾದ ಯೋಜನೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಲೇ ಇದೆ. ಈ ಸಮಸ್ಯೆ ಬಗೆಹರಿಯದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ರೂಪ ತಾಳಲಿದೆ ಎಂದು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಹೇಳಿದರು.

ಸಾಲ ಮನ್ನಾ ಯೋಜನೆಯಿಂದ ಕಿಂಚಿತ್ತು ಅನುಕೂಲವಾಗಬಹುದೆಂದು ನಿರೀಕ್ಷಿಸುತ್ತಿದ್ದ ರೈತರಿಗೆ ಬ್ಯಾಂಕ್‍ಗಳು ಹೇಳುವ ತಾಂತ್ರಿಕ ಕಾರಣದಿಂದಾಗಿ ಮತ್ತಷ್ಟು ಮಾನಸಿಕ ತೊಳಲಾಟಕ್ಕೆ ಒಳಗಾಗಿದ್ದಾರೆ. ಇದೀಗ ಹೋರಾಟ ಅನಿವಾರ್ಯವಾಗಿರುವದರಿಂದ ಬೀದಿಗೆ ಇಳಿಯುವ ಪರಿಸ್ಥಿತಿ ಎದುರಾಗಿದೆ ಎಂದು ನಲ್ಲೂರಿನ ಹಿರಿಯ ರೈತ ಮುಖಂಡರಾದ ಪುಚ್ಚಿಮಾಡ ಲಾಲಾ ಪೂಣಚ್ಚ ತಿಳಿಸಿದರು.

ಹುದಿಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಜ್ಜಿಕುಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ ಹುದಿಕೇರಿ ಬ್ಯಾಂಕಿನಲ್ಲಿ 538 ರೈತರು ಸಾಲ ಪಡೆದಿದ್ದು 407 ಮಂದಿಗೆ ಸಾಲ ಮನ್ನಾ ಪ್ರಯೋಜನ ಲಭಿಸಿದೆ. 131 ರೈತರಿಗೆ ಸಾಲ ಮನ್ನಾ ಪ್ರಯೋಜನ ಲಭಿಸಬೇಕಾಗಿದೆ. ಬ್ಯಾಂಕಿನ ನಿಯಮಾವಳಿಯಂತೆ ರೈತರ ದಾಖಲಾತಿಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಮಾಹಿತಿ ಒದಗಿಸಿದರು. ರೈತ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ಸುಜಯ್ ಬೋಪಯ್ಯ ಮಾತನಾಡಿ ರೈತ ಸಂಘದ ಹೋರಾಟದಿಂದ ಅನೇಕ ರೀತಿಯಲ್ಲಿ ರೈತರಿಗೆ ಪ್ರಯೋಜನ ಲಭಿಸಿದೆ. ರೈತರ ಹೋರಾಟ ನಿರಂತರವಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಹುದಿಕೇರಿ ಹೋಬಳಿ ಸಂಚಾಲಕ ಚಂಗುಲಂಡ ಸೂರಜ್, ಶ್ರೀಮಂಗಲ ಹೋಬಳಿ ಸಂಚಾಲಕ ಚಟ್ಟಂಗಡ ಕಂಬ ಕಾರ್ಯಪ್ಪ, ತಾಲೂಕು ಸಂಚಾಲಕ ಬಾಚಮಾಡ ಭವಿ ಕುಮಾರ್, ಪೊನ್ನಂಪೇಟೆ ಹೋಬಳಿ ಸಂಚಾಲಕ ಆಲೆಮಾಡ ಮಂಜುನಾಥ್, ರೈತ ಮುಖಂಡರುಗಳಾದ ಬಿರುನಾಣಿಯ ಕರ್ತಮಾಡ ಸುಜು ಪೊನ್ನಪ್ಪ, ಹುದಿಕೇರಿಯ ಇಟ್ಟಿರ ಪೊನ್ನಣ್ಣ, ನಲ್ಲೂರಿನ ತೀತರಮಾಡ ರಾಜ, ಮಲ್ಚೀರ ಅಶೋಕ್,ಗಿರೀಶ್, ಸೋಮೆಯಂಗಡ ಗಣೇಶ್, ಪಿ.ಬಿ.ದಿನೇಶ್, ಬ್ಯಾಂಕಿನ ನಿರ್ದೇಶಕರಾದ ಕಳ್ಳಂಗಡ ಸುರೇಶ್, ಕೋಳೇರ ರಾಜ, ಮೇಲತಂಡ ರಮೇಶ್, ಚೇಂದೀರ ರಘು ತಿಮ್ಮಯ್ಯ, ಬಲ್ಯಮಾಡ ತ್ರಸನ್ ಮಾದಯ್ಯ, ಬ್ಯಾಂಕ್ ಸಿಇಒ, ಮತ್ರಂಡ ತಮ್ಮಯ್ಯ, ಮುಂತಾದವರು ಭಾಗವಹಿಸಿದ್ದರು. ಹುದಿಕೇರಿ ಹೋಬಳಿಯ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ನೇತೃತ್ವದಲ್ಲಿ ಶ್ರೀಮಂಗಲ ಠಾಣಾಧಿಕಾರಿ ದಿನೇಶ್ ಕುಮಾರ್, ಗೋಣಿಕೊಪ್ಪ, ಶ್ರೀಮಂಗಲ, ಪೊನ್ನಂಪೇಟೆ ಪೊಲೀಸ್ ಸಿಬ್ಬಂದಿಗಳು ಬಿಗಿ ಬಂದೋಬಸ್ತ್ ಕಲ್ಪಿಸಿದರು.