ಮಡಿಕೇರಿ, ನ. 18: ಭಾರತದ 1927ನೇ ಅರಣ್ಯ ಕಾಯ್ದೆಯನ್ನು ರದ್ದುಗೊಳಿಸುವ ಮೂಲಕ; ಪ್ರಮುಖ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಿರುವ ಬುಡಕಟ್ಟು ಕೃಷಿಕರ ಸಂಘ; ಜಿಲ್ಲಾಧಿಕಾರಿ ಮುಖಾಂತರ ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರಿಗೆ ಮನವಿ ಸಲ್ಲಿಸಿದೆ. ಈ ಸಂಬಂಧ ನಗರದಲ್ಲಿ ಪ್ರತಿಭಟನಾ ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ 1927ರ ಕಾಯ್ದೆ ರದ್ಧತಿಯೊಂದಿಗೆ;

(ಮೊದಲ ಪುಟದಿಂದ) ಆದಿವಾಸಿಗಳ ಅರಣ್ಯ ಹಕ್ಕು ಮತ್ತು ಬದುಕಿಗೆ ಭದ್ರತೆ ಕಲ್ಪಿಸುವಂತೆ ಕಾನೂನಿನಲ್ಲಿ ತಿದ್ದುಪಡಿ ತರುವಂತೆ ಆಗ್ರಹಿಸಲಾಗಿದೆ.ಅಲ್ಲದೆ ಹುಲಿ ಯೋಜನೆ ಹೆಸರಿನಲ್ಲಿ ಆದಿವಾಸಿಗಳ ಬದುಕಿಗೆ ಅನ್ಯಾಯ ಎಸಗಲಾಗುತ್ತಿದೆ ಎಂದು ಟೀಕಿಸಿದ್ದಾರೆ. ಶತಮಾನಗಳಿಂದ ಕಾಡಿನಲ್ಲಿ ವಾಸಿಸುತ್ತಾ; ಸಾಂಪ್ರದಾಯಿಕ ಬದುಕು ರೂಪಿಸಿಕೊಂಡಿರುವ ಆದಿವಾಸಿಗಳ ಸಹಿತ ಎಲ್ಲಾ ನಿವಾಸಿಗಳಿಗೆ; ಒಕ್ಕಲೆಬ್ಬಿಸದೆ ಸೂಕ್ತ ಬದುಕಿಗಾಗಿ ಜಮೀನು ಹಕ್ಕು ಪತ್ರದೊಂದಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸಂಘ ಒತ್ತಾಯಿಸಿದೆ. ಬ್ರಿಟಿಷ್ ಆಳ್ವಿಕೆಯ ಕಾನೂನು ರದ್ದುಗೊಳಿಸುವ ಮೂಲಕ ಕೇಂದ್ರ ಸರಕಾರವು; ಕೊಡಗು ಹಾಗೂ ಇತರೆಡೆಗಳಲ್ಲಿ ನೆಲೆಸಿರುವ ಬೆಟ್ಟಕುರುಬ ಸಮುದಾಯ ಸಹಿತ ಎಲ್ಲಾ ಆದಿವಾಸಿಗಳಿಗೆ ಜಾತಿ ಪ್ರಮಾಣ ಪತ್ರ ಮತ್ತು ಭೂದಾಖಲೆ ಹಕ್ಕುಗಳನ್ನು ಕಲ್ಪಿಸಲು ಪ್ರತಿಭಟನಾಕಾರರು ಗಮನ ಸೆಳೆದರು.

ಗಂಭೀರ ಆರೋಪ : ಅರಣ್ಯಾಧಿಕಾರಿಗಳು ಕಾಡು ಅಭಿವೃದ್ಧಿಯ ನೆಪದಲ್ಲಿ ಬಹುರಾಷ್ಟ್ರೀಯ ಕಂಪನಿಗಳೊಂದಿಗೆ ಶಾಮಿಲಾಗಿ; ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕುತಂತ್ರದೊಂದಿಗೆ; ಅರಣ್ಯ ಉತ್ಪನ್ನಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವದಾಗಿ ಪ್ರತಿಭಟನೆ ನಿರತರು ಗಂಭೀರ ಆರೋಪ ಮಾಡಿದರು.

ಅಲ್ಲದೆ ಶತ ಶತಮಾನಗಳಿಂದ ಕೊಡಗಿನಲ್ಲಿ ನೆಲೆಸಿದ್ದ ಆದಿವಾಸಿಗಳಿಗೆ ಆಮಿಷವೊಡ್ಡಿ ಒಕ್ಕಲೆಬ್ಬಿಸಿ ವಂಚಿಸಲಾಗಿದೆ ಎಂದು ದೂರಿರುವ ಅವರುಗಳು; ಜನಾಂಗದ ವಿದ್ಯಾವಂತರಿಗೆ ಉದ್ಯೋಗ ಕಲ್ಪಿಸುವಂತೆಯೂ ಗಮನ ಸೆಳೆದರು. ಈ ವೇಳೆ ಸಂಘಟನೆ ಪ್ರಮುಖರಾದ ಆರ್.ಕೆ. ಚಂದ್ರ, ಜೆ.ಕೆ. ತಿಮ್ಮ, ಇಂದಿರಾ, ರಾಜು, ದಾಸಪ್ಪ, ಮುತ್ತ, ಕಾಳ, ಮಾದಾ, ಮಲ್ಲ ಮೊದಲಾದವರು ನೇತೃತ್ವ ವಹಿಸಿದ್ದರು.