ಮಡಿಕೇರಿ, ನ. 18: ಜಿಲ್ಲೆಯ ಹಲವೆಡೆ ಸೋಮವಾರದಂದು ಹಲವು ಬೇಡಿಕೆಗಳನ್ನು ಮುಂದಿಟ್ಟು; ವಿವಿಧ ಸಂಘಟನೆಗಳಿಂದ ಪ್ರತಿಭಟನೆಗಳು ನಡೆದವು. ಮಡಿಕೇರಿಯಲ್ಲಿ 1927ರ ಅರಣ್ಯ ಕಾಯ್ದೆ ರದ್ಧ್ದತಿಗೆ ಆಗ್ರಹಿಸಿ ಬುಡಕಟ್ಟು ಕೃಷಿಕರ ಸಂಘ ಧರಣಿ ನಡೆಸಿತು. ರೈತರ ಬೆಳೆ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಹುದಿಕೇರಿಯಲ್ಲಿ ರೈತ ಸಂಘ ಹಾಗೂ ಹಸಿರು ಸೇನೆ ಪ್ರತಿಭಟಿಸಿದರೆ; ಸಂವಿಧಾನದ ವಿಚಾರದಲ್ಲಿ ಸರ್ಕಾರದ ಸುತ್ತೋಲೆ ಖಂಡಿಸಿ ವೀರಾಜಪೇಟೆಯಲ್ಲಿ ದಲಿತ ಸಂಘರ್ಷ ಸಮಿತಿ ಹೋರಾಟ ನಡೆಸಿತು. ಹಣಕಾಸು ಸಂಸ್ಥೆಗಳಿಂದ ಮಹಿಳೆಯರಿಗೆ ಕಿರುಕುಳ ಎಂದು ಆರೋಪಿಸಿ ಮಹಿಳಾ ಸಂಘಟನೆಗಳು ಹಾಗೂ ಜೆಡಿಎಸ್ ವೀರಾಜಪೇಟೆಯಲ್ಲಿ ಧರಣಿ ನಡೆಸಿದರೆ; ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ರೈತರ ವಿದ್ಯುತ್ ಸಂಪರ್ಕ ಕಡಿತವನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಅಕ್ರಮಗಳಿಗೆ ಕಡಿವಾಣಕ್ಕೆ ಆಗ್ರಹಿಸಿ ಐಗೂರಿನಲ್ಲಿ ಸ್ತ್ರೀ ಶಕ್ತಿ ಸಂಘಗಳು, ಗ್ರಾಮಸ್ಥರು, ವಿದ್ಯಾರ್ಥಿಗಳು ಜಾಥಾ ಮೂಲಕ ಪ್ರತಿಭಟಿಸಿದರು.