ಶ್ರೀಮಂಗಲ, ನ. 18: ಕೊಡಗಿನಲ್ಲಿ ಸಹಕಾರಿ ಕ್ಷೇತ್ರ ಗಟ್ಟಿಯಾಗಿ ನಿಂತಿದೆ. ಸಹಕಾರಿ ಕ್ಷೇತ್ರ ಗಟ್ಟಿಯಾಗಿದ್ದರೆ ಸಹಕಾರಿ ಸಂಘದ ಸದಸ್ಯರು ಸಹ ಸ್ವಾವಲಂಬಿಗಳಾಗಿ ತಮ್ಮ ಕಾಲಿನ ಮೇಲೆ ನಿಂತುಕೊಳ್ಳಲು ಸಾಧ್ಯವಾಗುತ್ತದೆ.ಈ ಕ್ಷೇತ್ರವನ್ನು ಗಟ್ಟಿ ಮಾಡಿದಾಗ ಮಾತ್ರ ಆರ್ಥಿಕವಾಗಿ ಬಲಾಢ್ಯರಾಗಲು ಸಾಧ್ಯ.ಸಹಕಾರಿ ಕ್ಷೇತ್ರಕ್ಕೆ ಸ್ವಾಯತ್ತತೆ ಇರಬೇಕು ಎಂದು ವೀರಾಜಪೇಟೆ ಕ್ಷೇತ್ರ ಶಾಸಕ ಕೆ.ಜಿ. ಬೋಪಯ್ಯ ಆಭಿಪ್ರಾಯ ಪಟ್ಟರು.

ಬಿರುನಾಣಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಮತ್ತು ಬಿರುನಾಣಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಆಶ್ರಯಲ್ಲಿ ನಡೆದ 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂತಹ ಸಪ್ತಾಹ ಸಹಕಾರಿ ಕ್ಷೇತ್ರದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವಾಗಿದೆ. ಸಹಕಾರಿ ಸಂಸ್ಥೆಗಳು ಸ್ವ್ವಾಯತ್ತತೆ ಮತ್ತು ಸ್ವಾತಂತ್ರ್ಯದಿಂದ ಕಾರ್ಯ ನಿರ್ವಹಿ¸ಬೇಕಾದರೆ ಸರಕಾರ ಮತ್ತು ಅಧಿಕಾರಿಗಳು ಹಸ್ತಕ್ಷೇಪ ಮಾಡಬಾರದು. ಡಾ ವೈದ್ಯನಾಥನ್ ಆಯೋಗದ ವರದಿಯನ್ನು ರಾಜ್ಯಸರಕಾರ ಅಂಗೀಕರಿಸಿದೆ. ಆದರೆ ಇದರ ವರದಿ ಎಷ್ಟರಮಟ್ಟಿಗೆ ಅನುಷ್ಠಾನವಾಗಿದೆ ಎಂಬದನ್ನು ಪರಮಾರ್ಶೆ ನಡೆಸಬೇಕಾಗಿದೆ ಎಂದು ಹೇಳಿದ ರು.

ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಿ ಮಾತನಾಡಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಅವರು; 113 ವರ್ಷಗಳ ಇತಿಹಾಸ ಇರುವ ಸಹಕಾರ ಸಂಘವನ್ನು ಹಿರಿಯರು ಕಟ್ಟಿ ಸುಭದ್ರಗೊಳಿಸಿದ್ದಾರೆ. ಇದರ ಸಾಧಕ ಬಾಧಕಗಳ ಬಗ್ಗೆ ಹಿರಿಯರು ಚರ್ಚಿಸುತ್ತಾರೆ.ಆದರೆ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಯುವಕರು ಹಿಂದೇಟು ಹಾಕುತ್ತಿದ್ದಾರೆ. ಹಿರಿಯರ ಮಾರ್ಗದರ್ಶನ, ಅನುಭವದೊಂದಿಗೆ ಕಿರಿಯರು ಉತ್ಸಾಹದಿಂದ ಸಹಕಾರಿ ಕ್ಷೇತ್ರವನ್ನು ಮುನ್ನಡೆಸಲು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕೊಡಗು ಜಿಲ್ಲೆಯಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ 4 ಶಾಖೆಗಳನ್ನು ಜಿಲ್ಲೆಯ ಟಿ-ಶೆಟ್ಟಿಗೇರಿ, ಬಾಳೆಲೆ, ಕೊಡ್ಲಿಪೇಟೆ, ಹೆಬ್ಬಾಲೆಗಳಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ 1 ಎಕರೆ ಕೃಷಿ ಭೂಮಿಗೆ 2 ಲಕ್ಷದವರೆಗೆ ಬೆಳೆ ಸಾಲ ನೀಡಲು ನಿರ್ಧರಿಸಿದ್ದು, ಈ ಪ್ರಮಾಣವು ಗರಿಷ್ಠ 60 ಲಕ್ಷದವರೆಗೆ ಶೇ. 11 ಬಡ್ಡಿದರದಲ್ಲಿ 10 ವರ್ಷ ಅವಧಿಗೆ ಆಗಿರುತ್ತದೆ. ಕಳೆದ 2 ವರ್ಷಗಳಿಂದ ಜಿಲ್ಲೆ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ಹಿನ್ನೆಲೆ ಬ್ಯಾಂಕ್‍ನ ಸಾಲವನ್ನು ಬಲತ್ಕಾರವಾಗಿ ವಸೂಲಾತಿ ಮಾಡದಂತೆ ಜಿಲ್ಲಾಧಿಕಾರಿಗಳು ಮತ್ತು ರಾಜ್ಯಸರಕಾರ ಆದೇಶಿಸಿರುವ ಹಿನ್ನಲೆಯಲ್ಲಿ ಸಾಲ ವಸೂಲಾತಿ ಪ್ರಕ್ರಿಯೆಗೆ ಹಿನ್ನಡೆಯಾಗಿದೆ. ಕಳೆದ 2 ವರ್ಷದ ಹಿಂದೆ ಎನ್.ಪಿ.ಎ. ಸಾಲ ಪ್ರಮಾಣ ಶೇ. 0.5 ರಷ್ಟು ಇದ್ದದ್ದು ಈಗ ಅದು ಶೇ. 6 ಕ್ಕೆ ಏರಿದೆ ಎಂದು ಹೇಳಿದರು.

ಸಭೆಯ ಅಧ್ಯಕ್ಷತೆಯನ್ನು ಬಿರುನಾಣಿ ಪ್ಯಾಕ್ಸ್‍ನ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯೆ ಅಪ್ಪಂಡೇರಂಡ ಭವ್ಯ, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್, ತಾ.ಪಂ. ಅಧ್ಯಕ್ಷ ಬುಟ್ಟಿಯಂಡ ನಾಣಯ್ಯ, ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಪಟ್ರಪಂಡ ರಘುನಾಣಯ್ಯ, ಕುಂಞಂಗಡ ಅರುಣ್‍ಭೀಮಯ್ಯ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಪಟ್ಟಡ ರಾಮಚಂದ್ರ, ಚಿಮ್ಮಣಮಾಡ ಗಣಪತಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರನಾಯಕ್, ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಹೆಚ್.ಡಿ. ರವಿಕುಮಾರ್, ಮಡಿಕೇರಿ ಕೆ.ಐ.ಸಿ.ಎಂ ಪ್ರಾಂಶುಪಾಲ ಡಾ.ಆರ್.ಎಸ್. ರೇಣುಕ, ಬಿರುನಾಣಿ ಪ್ಯಾಕ್ಸ್‍ನ ನಿರ್ದೇಶಕರು, ಸಿ.ಇ.ಓ ಭಾರತಿ ಹಾಜರಿದ್ದರು.

ಸನ್ಮಾನ: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸೇವೆ ಸಲ್ಲಿಸಿ ಸಂಘದ ಬೆಳವಣಿಗೆಗೆ ಕಾರಣಕರ್ತರಾದ ಹಿರಿಯ ಸಹಕಾರಿಗಳಾದ ಕುಪ್ಪುಡಿರ ಐ. ಕಾಳಪ್ಪ, ಕಳಕಂಡ ಪಿ. ತಿಮ್ಮಯ್ಯ, ನೆಲ್ಲೀರ ಎಂ. ಪೂವಯ್ಯ, ಬಲ್ಯಮೀದೇರಿರ ಸಿ. ನಾಣಯ್ಯ, ಬೊಟ್ಟಂಗಡ ಎಂ. ರಾಜು, ಚೇರಂಡ ಎಸ್. ಕಾರ್ಯಪ್ಪ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.