ವೀರಾಜಪೇಟೆ, ನ. 18: ಮೈಕ್ರೋ ಫೈನಾನ್ಸ್ ಸಂಸ್ಥೆಯಡಿಯಲ್ಲಿ ವಿವಿಧ ರೀತಿಯ ಹೆಸರಿನ್ನಿಟ್ಟುಕೊಂಡು ಹಣಕಾಸು ವ್ಯವಹಾರ ನಡೆಸುತ್ತಿರುವ ಸಂಸ್ಥೆಗಳು ಮಹಿಳೆಯರಿಗೆ ಅದರಲ್ಲೂ ಕಾರ್ಮಿಕರು, ನಿರ್ಗತಿಕರು, ದುರ್ಬಲ ವರ್ಗದ ಮಹಿಳೆಯರಿಗೆ ಸಾಲ ನೀಡಿ, ಸಾಲ ಹಿಂಪಡೆಯುವಾಗ ದುಬಾರಿ ಬಡ್ಡಿ ವಿಧಿಸಿ ಸಾಲ ಪಾವತಿಸುವಂತೆ ಕಿರುಕುಳ ನೀಡುವದರೊಂದಿಗೆ ಮಹಿಳೆಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ ಎಂದು ಆರೋಪಿಸಿ ಇಂದು ಮಹಿಳಾ ಸಂಘಟನೆಗಳು ಜೆಡಿಎಸ್ ಪಕ್ಷದ ಜಿಲ್ಲಾ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ರಾಜ್ಯ ಮಾನವ ಹಕ್ಕುಗಳ ಸಮಿತಿಯ ಉಪಾಧ್ಯಕ್ಷೆ ಅಪ್ಪನೆರವಂಡ ಶಾಂತಿ ಅಚ್ಚಪ್ಪ ನೇತೃತ್ವದಲ್ಲಿ ಇಲ್ಲಿನ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಾಲೂಕು ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.
ಜೆ.ಡಿಎಸ್.ನ ತಾಲೂಕು ಹಾಗೂ ನಗರ ಸಮಿತಿಯಿಂದ ನಡೆದ ಪ್ರತಿಭಟನೆಯಲ್ಲಿ ನಗರ ಸಮಿತಿ ಅಧ್ಯಕ್ಷ ಪಿ.ಎ. ಮಂಜುನಾಥ್ ಮಾತನಾಡಿ, ರಾಜ್ಯ ಸರಕಾರ ಇಂತಹ ಬೇನಾಮಿ ಹಣಕಾಸು ಸಂಸ್ಥೆಗಳನ್ನು ನಿಷೇಧಿಸಬೇಕು. ಸಾಲ ಪಡೆದುಕೊಂಡ ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಂದನೆಯನ್ನು ತಪ್ಪಿಸಬೇಕು. ಅಮಾಯಕ ಮಹಿಳೆಯರಿಗೆ ರಕ್ಷಣೆ ಒದಗಿಸಬೇಕು ಎಂದರು.
ಪ್ರತಿಭಟನೆಯಲ್ಲಿ ಪಕ್ಷದ ತಾಲೂಕು ಸಮಿತಿಯ ಪಡಿಕಲ್ ಕುಸುಮಾವತಿ ಚಂದ್ರಶೇಖರ್, ಪರಿಶಿಷ್ಠ ಪಂಗಡದ ಜಿಲ್ಲಾ ಸಮಿತಿ ಅಧ್ಯಕ್ಷೆ ಎಚ್.ವಿ. ಜಯ, ಸಿ. ಗಣಪತಿ, ಮಜೀದ್, ಪುಷ್ಪ ಸೇರಿದಂತೆ ಅಧಿಕ ಸಂಖ್ಯೆಯಲ್ಲಿ ಮಹಿಳೆಯರಿದ್ದರು.
-ವರದಿ : ಹೆಚ್.ಕೆ. ಜಗದೀಶ್, ಹರೀಶ್ ಮಾದಪ್ಪ, ವಿಜಯ್ ಹಾನಗಲ್, ಡಿ.ಎಂ.ಆರ್.