ಸುಂಟಿಕೊಪ್ಪ, ನ. 18 : ಒಗ್ಗಟ್ಟಿನಿಂದ ಹೊಸ ಯೋಜನೆಗಳನ್ನು ರೂಪಿಸಿ ಗೌಡ ಸಮಾಜವನ್ನು ಸದೃಢಗೊಳಿಸುವ ಮೂಲಕ ಜನಾಂಗ ಬಾಂಧವರ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಮಳವಳ್ಳಿ ಕಾವೇರಿ ನಿಗಮದ ಲೆಕ್ಕ ಪರಿಶೋಧಕ ಅಧಿಕಾರಿ ಬಾಲಪ್ಪನಮನೆ ಪುಷ್ಪಾವತಿ ಕರೆ ನೀಡಿದರು. ಗೌಡ ಸಂಘ ಸುಂಟಿಕೊಪ್ಪ ನಾಡಿನ 4ನೇ ವಾರ್ಷಿಕೋತ್ಸವ ಸಮಾರಂಭ ಸುಂಟಿಕೊಪ್ಪ ಸಂತಮೇರಿ ಚರ್ಚ್‍ನ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಯಂಕನ ಎಂ. ಉಲ್ಲಾಸ್ ಅಧ್ಯಕ್ಷತೆಯಲ್ಲಿ ನಡೆಯಿತು. ಸನ್ಮಾನ ಸ್ವೀಕರಿಸಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಪುಷ್ಪಾವತಿ ಜನಾಂಗ ಬಾಂಧವರು ಕೃಷಿ, ವ್ಯಾಪಾರ ಸರಕಾರಿ ಸೇವೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿ ಕೊಂಡಿದ್ದಾರೆ. ಸತತ ಪರಿಶ್ರಮದಿಂದ ಮುಂದೆ ಬರಲು ಶ್ರಮಿಸಬೇಕು ಎಂದು ಹೇಳಿದರು. ಇನ್ನೋರ್ವ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಗೌಡ ಸಮಾಜದ ಮಹಿಳಾ ಘಟಕದ ಉಪಾಧ್ಯಕ್ಷೆ ಚೆಟ್ಟಿಮಾಡ ರತ್ನಉತ್ತಪ್ಪ ಮಾತನಾಡಿ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಗಮನಹರಿಸಬೇಕು ಗೌಡ ಜನಾಂಗಕ್ಕೆ ಸರಕಾರದ ಆನೇಕ ಸೌಲಭ್ಯ ಲಭಿಸುತ್ತಿದೆ. ಸದುಪಯೋಗ ಪಡಿಸಿಕೊಂಡು ಜನಾಂಗದ ಇತರ ಸದಸ್ಯರುಗಳಿಗೆ ಹೇಳಿ ಕೊಡುವ ಮನೋಭಾವ ಬೆಳಸಿಕೊಳ್ಳಬೇಕು ಇದರಿಂದ ಜನಾಂಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ ಅವರು ಜನಾಂಗದವರಲ್ಲಿ ಬಾಂಧವ್ಯ, ಒಡನಾಟ ಮೂಡಿಸುವದು ಸೇರಿಂದತೆ ಪ್ರತಿಭಾನ್ವಿತ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಲಾಗುತ್ತಿದೆ. ಅಂತರರ್ರಾಷ್ಟ್ರೀಯ ಕ್ರೀಡಾಪಟುಗಳಿಗೂ ಪ್ರೋತ್ಸಾಹ ನೀಡಲಾಗುತ್ತಿದೆ. ಎಲ್ಲಾ ಸದಸ್ಯರುಗಳು ಸಹಕರಿಸಿದರೆ ನಿವೇಶನ ಖರೀದಿಸಿ ಗೌಡ ಸಂಘದ ಸುಸಜ್ಜಿತ ಕಲ್ಯಾಣ ಮಂಟಪ ಕಟ್ಟಲು ಕಟ್ಟಿಬದ್ಧರಾಗಿದ್ದೇವೆ. ಈಗಾಗಲೇ ಜಾಗ ಗುರುತಿಸಲಾಗಿದೆ ಎಂದು ಸಭೆಗೆ ವಿವರಣೆ ನೀಡಿದರು.
ಸನ್ಮಾನ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಟ್ಟೆಮನೆ ನವನೀತ ( ಅಂತರಾಷ್ಟೀಯ ಬಾಸ್ಕೆಟ್‍ಬಾಲ್), ಗರಗಂದೂರಿನ ಕೀಜನ ಲಕ್ಷಣ (ಈಜುಗಾರಿಕೆ), ಪಡನೋಳನ ರತೀಶ (ಕೃಷಿ) ಚೆಟ್ಟಿಮಾಡ ರಕ್ಷಿತ್ (ಸಮಾಜ ಸೇವೆ), ಬಿಳಿಯಾರ ಜವಾಹರ್ (ಕೃಷಿ), ಕೊಳಂಬೆ ಚೇತನ (ಡಾಕ್ಟರೇಟ್), ಯುವ ವಿಜ್ಞಾನಿ ಪಾರಿತೋಷಕ ಪಡೆದ ರಕ್ಷಾ ಅವರುಗಳನ್ನು ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಸದಸ್ಯರುಗಳ ಮಕ್ಕಳಿಗೆ ನೆನಪಿನ ಕಾಣಿಕೆ, ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಯಿತು.
ವಾರ್ಷಿಕ ಮಹಾಸಭೆ: ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಯಂಕನ ಉಲ್ಲಾಸ್ ಅವರು ಸಂಘ ಸಧೃಢವಾಗಬೇಕು. ಸಂಘಕ್ಕೆ ನಿವೇಶನ ಖರೀದಿಗಾಗಿ ಜಾಗ ಗುರುತಿಸಲಾಗಿದೆ ಅಂದಾಜು 50 ಲಕ್ಷ ದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲು ಮುಂದಾಗಿದ್ದೇವೆ. ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು. ವೇದಿಕೆಯಲ್ಲಿ ಹಿರಿಯರಾದ ಬೈಚನ ತಮ್ಮಯ್ಯ, ಉದ್ಯಮಿ ಚೈತ್ರಾ ಭಾರತೀಶ್, ಉದ್ಯಮಿ ಚಂದ್ರಶೇಖರ್ ಗೌಡ ಸಂಘದ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಉಪಾಧ್ಯಕ್ಷ ಬಿಳಿಯಾರ ಜವಾಹರ್ ಸ್ವಾಗತಿಸಿ, ಪರಪ್ಪನಮನೆ ಹರ್ಶಿತ್ ನಿರೂಪಿಸಿ, ಪೆರಂಲಾಡಿ ಚಂಗಪ್ಪ ವಂದಿಸಿದರು.