ಕೂಡಿಗೆ, ನ. 18 : ನೀರಾವರಿ ಇಲಾಖೆ ವತಿಯಿಂದ ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ತೊರೆನೂರು, ಶಿರಂಗಾಲ ಚಿಕ್ಲಿಹೊಳೆ, ಹಾರಂಗಿ ವ್ಯಾಪ್ತಿಯ ರಸ್ತೆ ಮತ್ತು ಇನ್ನಿತರ ಕಾಮಗಾರಿಗಳಿಗೆ, ಹಾರಂಗಿ ಮುಖ್ಯ ನಾಲೆಯ ಉಪ ಸೇತುವೆಗಳ ನಿರ್ಮಾಣ ಹಾಗೂ ನೀರಾವರಿ ಅಚ್ಚುಕಟ್ಟು ವ್ಯಾಪ್ತಿಗೊಳಪಡುವ ದೇವಾಲಯದ ಮುಂಭಾಗದ ಕಾಂಕ್ರಿಟ್ ರಸ್ತೆ ಮತ್ತು ತಡೆಗೋಡೆಗಳ ನಿರ್ಮಾಣಕ್ಕೆ ರೂ.17 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ದೊರಕಿದ್ದು, ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಕಾರ್ಯಕ್ರಮ ನಿಮಿತ್ತ ಬಂದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈಗಾಗಲೇ ಮದಲಾಪುರ-ಸೀಗೆಹೊಸೂರು ರಸ್ತೆಯ ಕಾಮಗಾರಿಗೆ ರೂ.35 ಲಕ್ಷ ಬಿಡುಗಡೆಯಾಗಿದ್ದು, ಇನ್ನುಳಿದ ರಸ್ತೆ ದುರಸ್ತಿ ಕಾಮಗಾರಿಯು ಸದ್ಯದಲ್ಲೇ ನಡೆಯಲಿದೆ.
17 ಕೋಟಿ ರೂ. ವೆಚ್ಚದ ಹಣದಲ್ಲಿ ಕೂಡಿಗೆಯ ದಂಡಿನಮ್ಮ ದೇವಾಲಯದ ಅಭಿವೃದ್ಧಿ ಮತ್ತು ಕಾಂಕ್ರಿಟಿಕರಣ ತೊರೆನೂರು-ಚಿಕ್ಕಅಳುವಾರ ರಸ್ತೆಯ ಕಾಂಕ್ರಿಟಿಕರಣ ಮತ್ತು ಹೊಸ ಸೇತುವೆ ನಿರ್ಮಾಣ ಕಾಮಗಾರಿ, ಹಾರಂಗಿ ಮೀನು ತೊಟ್ಟಿ ಸಮೀಪವಿರುವ ಮುಖ್ಯ ನಾಲೆಯ ರಸ್ತೆಯ ದುರಸ್ತಿ, ಚಿಕ್ಲಿಹೊಳೆ, ಅತ್ತೂರು ಗ್ರಾಮದ ರಸ್ತೆಗಳಿಗೆ ಸಾರ್ವಜನಿಕರ ಬೇಡಿಕೆಯಂತೆ ಶೀಘ್ರವಾಗಿ ಎಲ್ಲಾ ಕಾಮಗಾರಿಗಳನ್ನು ನಡೆಸಲಾಗುವದು ಎಂದು ಶಾಸಕರು ತಿಳಿಸಿದರು. ಈ ಸಂದರ್ಭ ಗ್ರಾ.ಪಂ ಉಪಾಧ್ಯಕ್ಷ ಗಿರೀಶ್‍ಕುಮಾರ್, ಮಾಜಿ ಅಧ್ಯಕ್ಷ ಜಗದೀಶ್ ಸೇರಿದಂತೆ ಸ್ಥಳೀಯರು ಇದ್ದರು.