ಚೆಟ್ಟಳ್ಳಿ, ನ. 19: ಚೆಟ್ಟಳ್ಳಿಯ ಚರ್ಚ್ ಸಮೀಪದ ಕಾಫಿ ತೋಟವೊಂದರಲ್ಲಿ ಇಂದು ಕೊಳೆತ ಸ್ಥಿತಿಯಲ್ಲಿ ಪುರುಷನೋರ್ವನ ಮೃತ ದೇಹ ಪತ್ತೆಯಾಗಿದೆ. ಸ್ಥಳೀಯ ನಿವಾಸಿ ವಿಠಲ ಎಂಬಾತನ ಮೃತ ದೇಹವೆಂದು ಗುರುತಿಸಲಾಗಿದ್ದು; ವಿವಾಹಿತನಾಗಿರುವ ಈತ ಕಳೆದ ಎರಡು ವಾರಗಳ ಹಿಂದೆ ಇದ್ದಕ್ಕಿದಂತೆ ಕಣ್ಮರೆಯಾಗಿದ್ದ. ಆದರೆ ಮನೆಯವರು ಪೊಲೀಸ್ ಪುಕಾರು ನೀಡಿರಲಿಲ್ಲ. ಇಂದು ಸಂಜೆ ಕಾರ್ಮಿಕ ಮಹಿಳೆಯೊಬ್ಬರು ಮೃತ ದೇಹವನ್ನು ನೋಡಿ ಬೇರೆಯವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ವಿಠಲನ ತಾಯಿ ಮೃತದೇಹದ ಮೇಲಿದ್ದ ಬಟ್ಟೆಯ ಆಧಾರದಲ್ಲಿ ತನ್ನ ಮಗನೆಂದು ಗುರುತಿಸಿದ್ದಾರೆ. ವಿಠಲ ಹದಿನೈದು ದಿವಸಗಳ ಹಿಂದೆ ಅಸುನೀಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಪೋಲಿಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.