*ಸಿದ್ದಾಪುರ, ನ. 19: ವಾಲ್ನೂರು-ತ್ಯಾಗತ್ತೂರು ಗ್ರಾಮ ಪಂಚಾಯಿತಿಯ ಇಬ್ಬರು ಸದಸ್ಯರನ್ನು ಹೊರತುಪಡಿಸಿ ಉಳಿದ 9 ಸದಸ್ಯರು ಮಂಗಳವಾರದಂದು ನಡೆಯಬೇಕಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸದೇ ದೂರ ಉಳಿದರು.

ಸತತ ಎರಡನೇ ಬಾರಿಗೆ ಚುನಾಯಿತ ಸದಸ್ಯರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅಸಮಾಧಾನಗೊಂಡು ಸಭೆಯನ್ನು ಬಹಿಷ್ಕರಿಸಿದರು.

ಸದಸ್ಯರು ಸಭೆಗಳಿಗೆ ಗೈರು ಹಾಜರಾಗಿ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅಧ್ಯಕ್ಷೆ ನಾಗರತ್ನ ಸರ್ಕಾರ ತನ್ನನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ನೇಮಿಸಿದೆಯೇ ಹೊರತು ಸದಸ್ಯರು ತನ್ನನ್ನು ಅಧ್ಯಕ್ಷೆಯಾಗಿ ನೇಮಿಸಿಲ್ಲ ಆದ್ದರಿಂದ ರಾಜಿನಾಮೆ ನೀಡುವದಿಲ್ಲ ಎಂದಿದ್ದಾರೆ.

ಮಂಗಳವಾರದ ಸಭೆಗೆ ಉಪಾಧ್ಯಕ್ಷ ಸತೀಶ್, ಸದಸ್ಯರುಗಳಾದ ಅಂಚೆಮನೆ ಸುಧಿಕುಮಾರ್, ಭುವನೇಂದ್ರ, ಯಶೋಧ, ನಳಿನಿ, ಜಮೀಲ, ಕವಿತ, ಕಮಲಮ್ಮ, ಗೈರು ಹಾಜರಾಗಿದ್ದು, ಸದಸ್ಯರಾದ ದಿನೇಶ್, ಸಲೀಂ ಮತ್ತು ಅಧ್ಯಕ್ಷೆ ನಾಗರತ್ನ ಮಾತ್ರ ಹಾಜರಾಗಿದ್ದರು. ಗ್ರಾಮಾಭಿವೃದ್ಧಿ ಅಧಿಕಾರಿ ಹೆಚ್.ಎಸ್.ಅನೀಲ್, ಕಾರ್ಯದರ್ಶಿ ರವಿ ಸಭೆಗೆ ಆಗಮಿಸಿ ಸಭೆಗೆ ಕೋರಮ್ ಇಲ್ಲದ ಕಾರಣ ಸಭೆಯನ್ನು ರದ್ದುಪಡಿಸಲಾಯಿತು. - ಅಂಚೆಮನೆ ಸುಧಿ