ಮಡಿಕೇರಿ, ನ. 19: ಜಿಲ್ಲೆಯಲ್ಲಿ ತುಳುವೆರ ಜನಪದ ಪತ್ತಿನ ಸಹಕಾರ ಸಂಘವನ್ನು ಸ್ಥಾಪಿಸುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೆ ಸಹಕಾರ ಸಂಘ ಅಸ್ತಿತ್ವಕ್ಕೆ ಬರಲಿದೆ ಎಂದು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ ತಿಳಿಸಿದ್ದಾರೆ.

ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ನಡೆದ ತುಳುವೆರ ಜನಪದ ಕೂಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಹಕಾರ ಸಂಘ ಸ್ಥಾಪನೆಯಿಂದ ತುಳು ಸಮಾಜದ ಬಡಕುಟುಂಬಗಳಿಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ತುಳು ಬಾಷಿಕ ಸಮುದಾಯದ ತಲಾ ಒಬ್ಬೊಬ್ಬ ಸದಸ್ಯರನ್ನು ಸಹಕಾರ ಸಂಘದ ಆಡಳಿತ ಮಂಡಳಿಗೆ ನೇಮಕ ಮಾಡಲು ಸಭೆ ನಿರ್ಧರಿಸಿದೆ.

ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ತುಳು ಭಾಷಿಕರ ಸಂಘಟನೆಯನ್ನು ಬಲ ಪಡಿಸಬೇಕಾಗಿದ್ದು, ಈ ಕಾರ್ಯಕ್ಕೆ ಎಲ್ಲಾ ತುಳು ಭಾಷಿಕರು ಹಾಗೂ ಸಮುದಾಯದ ನಾಯಕರು ಹೆಚ್ಚಿನ ಶ್ರಮ ವಹಿಸಬೇಕೆಂದು ಪ್ರಮುಖರು ತಿಳಿಸಿದರು. ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ವಿವಿಧ ತುಳು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ತುಳು ಭಾಷೆ, ಸಂಸ್ಕøತಿ, ಪದ್ಧತಿ, ಪರಂಪರೆಯನ್ನು ಉಳಿಸುವ ಕಾರ್ಯವಾಗಬೇಕಾಗಿದೆ ಎಂದರು.

ಮುಂದಿನ ವರ್ಷ ಮಾರ್ಚ್ ತಿಂಗಳಿನಲ್ಲಿ ಜಿಲ್ಲಾ ತುಳುವೆರ ಜನಪದ ಕೂಟದ ಮಹಾಸಭೆ ನಡೆಯಲಿದ್ದು, ಮೂರು ತಾಲೂಕು ಸಮಿತಿಯನ್ನು ವಿಸರ್ಜಿಸಿ ಪುನರ್ ರಚಿಸುವ ಕುರಿತು ಚರ್ಚೆ ನಡೆಯಿತು.

ಜಿಲ್ಲಾ ಗೌರವ ಸಲಹೆಗಾರ ಬಿ.ಬಿ. ಐತ್ತಪ್ಪ ರೈ, ಜಿಲ್ಲಾ ಉಪಾಧ್ಯಕ್ಷ ಬಿ.ವೈ. ಆನಂದ ರಘು, ಸಲಹೆಗಾರ ಕೆ.ಆರ್. ಬಾಲಕೃಷ್ಣ ರೈ, ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ, ಉಪಾಧ್ಯಕ್ಷೆ ಸಂಧ್ಯಾಗಣೇಶ್ ರೈ, ಸ್ಥಾಪಕ ಕಾರ್ಯದರ್ಶಿ ಹರೀಶ್ ಆಳ್ವ, ನಿರ್ದೇಶಕರುಗಳಾದ ಬಿ.ಎಸ್. ಜಯಪ್ಪ, ಪುರುಷೋತ್ತಮ, ರಮೇಶ್ ಆಚಾರ್ಯ, ಜಗದೀಶ್ ಆಚಾರ್ಯ, ಲೀಲಾಶೇಷಮ್ಮ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.