ಸೋಮವಾರಪೇಟೆ, ನ.18: ಅಕ್ರಮ ಗಾಂಜಾ ಮಾರಾಟ ಮತ್ತು ಸೇವನೆಗೆ ಕಡಿವಾಣ, ಅಕ್ರಮ ಮದ್ಯ ಮಾರಾಟಕ್ಕೆ ತಡೆ ಸೇರಿದಂತೆ ವಿದ್ಯಾರ್ಥಿಗಳಿಗೆ ಶಾಲೆಗೆ ತೆರಳಲು ಸಾರಿಗೆ ವ್ಯವಸ್ಥೆಗೆ ಆಗ್ರಹಿಸಿ ಐಗೂರು ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಂದ ಐಗೂರು ವ್ಯಾಪ್ತಿಯಲ್ಲಿ ಜಾಥಾ ಮೂಲಕ ಪ್ರತಿಭಟನೆ ನಡೆಯಿತು.ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವಾರೆ, ಕಂತಳ್ಳಿ, ಐಗೂರು,

(ಮೊದಲ ಪುಟದಿಂದ) ಸಜ್ಜಳ್ಳಿ, ಕಾಜೂರು, ಯಡವನಾಡು ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಲ್ಲದೆ, ಯುವಕರು ಗಾಂಜಾ ವ್ಯಸನಿಗಳಾಗುತ್ತಿದ್ದು ಸಂಬಂಧಿಸಿದ ಇಲಾಖೆಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವದೇ ಪ್ರಯೋಜನವಾಗಿಲ್ಲ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಜನಜಾಗೃತಿ ಸಮಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಆಗ್ರಹಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಗಿರಿಜನರ ಹಾಡಿಗಳಿದ್ದು, ಈ ಭಾಗಗಳಿಂದ ವಿದ್ಯಾರ್ಥಿಗಳು ಕಾಜೂರು ಶಾಲೆಗೆ ಬರಲು 9 ಕಿ.ಮೀ ನಡೆದುಕೊಂಡು ಬರಬೇಕಿದೆ. ಈ ವ್ಯಾಪ್ತಿಗೆ ಸಾರಿಗೆ ವ್ಯವಸ್ಥೆಗಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಮನವಿ ಮಾಡಿದರೂ ಯಾವದೇ ಪ್ರಯೋಜನವಾಗಿಲ್ಲ. ಕೂಡಲೇ ಈ ಭಾಗಗಳಿಗೆ ಶಾಲಾ-ಕಾಲೇಜು ಅವಧಿಯಲ್ಲಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಕೊಡಬೇಕೆಂದು ಯಡವಾರೆ, ಕಾಜೂರು ಸರ್ಕಾರಿ ಪ್ರಾಥಮಿಕ ಶಾಲೆಗಳು, ಐಗೂರು ಪ್ರೌಢಶಾಲೆ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಒತ್ತಾಯಿಸಿದರು. ಮನವಿಯನ್ನು ಐಗೂರು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಲಿಂಗರಾಜು ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಮನವಿ ಸಲ್ಲಿಕೆಗೂ ಮುನ್ನ ಯಡವಾರೆ, ಕಂತಳ್ಳಿ, ಐಗೂರು, ಸಜ್ಜಳ್ಳಿ, ಕಾಜೂರು ಗ್ರಾಮಗಳಲ್ಲಿ ಘೋಷಣೆಗಳೊಂದಿಗೆ ಜಾಥಾ ನಡೆಸಲಾಯಿತು.

ಈ ಸಂದರ್ಭ ಐಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ. ರಮೇಶ್, ಉಪಾಧ್ಯಕ್ಷೆ ಕೆ.ಪಿ. ಶೋಭಾ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವಿಶ್ವನಾಥ ರಾಜೇ ಅರಸ್, ನವಜೀವನ ಸಮಿತಿ ಸದಸ್ಯ ಯಡವಾರೆ ಸತೀಶ್, ಕಾಲೇಜಿನ ಪ್ರಾಂಶುಪಾಲರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.