ಸೋಮವಾರಪೇಟೆ, ನ.19: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿನಲ್ಲಿ ಸೋಮವಾರಪೇಟೆಯಲ್ಲಿ ಕಳೆದ 10 ವರ್ಷಗಳ ಹಿಂದೆ ಚಾಲನೆ ಕಂಡಿದ್ದ ಭವನವೊಂದು ಇದೀಗ ಪೂರ್ಣಗೊಳ್ಳುತ್ತಿದ್ದು, ಉದ್ಘಾಟನೆಗೆ ಎದುರು ನೋಡುತ್ತಿದೆ.ಸೋಮವಾರಪೇಟೆ ಪಟ್ಟಣದಲ್ಲಿ ಅಂಬೇಡ್ಕರ್ ಭವನ ನಿರ್ಮಿಸಲು ಹಲವಷ್ಟು ಸಂಘಟನೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ಹಿನ್ನೆಲೆ ಕಳೆದ 2009ರಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಹಸಿರು ನಿಶಾನೆ ತೋರಲಾಗಿತ್ತು.
ಪರಿಣಾಮ ಇಲ್ಲಿನ ಪ.ಪಂ.ಗೆ ಸೇರಿದ, ತಾಲೂಕು ಪಂಚಾಯಿತಿ ಕಚೇರಿ ಸಮೀಪದಲ್ಲಿನ ನಿವೇಶನದಲ್ಲಿ ರೂ. 50 ಲಕ್ಷ ವೆಚ್ಚದ ಕ್ರಿಯಾ ಯೋಜನೆಯೊಂದಿಗೆ ಭವನದ ನೀಲನಕ್ಷೆ ಸಿದ್ಧವಾಗಿ, ಕಾಮಗಾರಿ ಯನ್ನು ಪ್ರಾರಂಭಿಸಲಾಯಿತು. ಪ್ರಾರಂಭದಲ್ಲಿ 16 ಲಕ್ಷ ವಿನಿಯೋಗಿಸಿ ನಿವೇಶನವನ್ನು ಸಮತಟ್ಟು ಗೊಳಿಸುವದು, ಅಡಿಪಾಯ ಸೇರಿದಂತೆ ಗೋಡೆಗಳ ನಿರ್ಮಾಣ ಕಾರ್ಯ ಬಿರುಸಿನಿಂದ ನಡೆಯಿತು.ಪ್ರಾರಂಭದಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರು ರೂ. 5 ಲಕ್ಷ ಅನುದಾನ ನೀಡಿದ್ದರೆ, ಉಳಿದ ಅನುದಾನವನ್ನು ತಾಲೂಕು ಪಂಚಾಯಿತಿಯಿಂದ ಭರಿಸಲಾಗಿತ್ತು. ನಂತರ ಅಂಬೇಡ್ಕರ್ ಭವನಕ್ಕೆ ಅನುದಾನ ಕೊರತೆಯ ಗ್ರಹಣ ಬಡಿಯಿತು. ಬರೋಬ್ಬರಿ 7 ವರ್ಷಗಳ ಕಾಲ ಭವನದ ಕಾಮಗಾರಿ ಸ್ಥಗಿತಗೊಂಡು ಇಡೀ ಆವರಣ ಹಾಳುಕೊಂಪೆಯಂತಾಗಿತ್ತು. ನಂತರ 2016ರಲ್ಲಿ ಮತ್ತೊಮ್ಮೆ ಕ್ರಿಯಾ ಯೋಜನೆ
(ಮೊದಲ ಪುಟದಿಂದ) ತಯಾರಿಸಿ ಸಮಾಜ ಕಲ್ಯಾಣ ಇಲಾಖೆ ಮುಖಾಂತರ ಕಾಮಗಾರಿಯನ್ನು ನಿರ್ವಹಿಸಲು ಅನುಮೋದನೆ ಪಡೆಯಲಾಯಿತು.
ಪ್ರಾರಂಭದಲ್ಲಿ 50 ಲಕ್ಷ ವೆಚ್ಚದ ಕ್ರಿಯಾಯೋಜನೆ ಇದ್ದರೂ ಸಹ ಅನುದಾನದ ಕೊರತೆಯಿಂದ ಕಾಮಗಾರಿ ಸ್ಥಗಿತಗೊಂಡಿದ್ದರಿಂದ ನೂತನವಾಗಿ 1.50 ಕೋಟಿ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಯಿತು. ಅಲ್ಲಿಂದ ಬಿರುಸಿನ ಕಾಮಗಾರಿ ನಡೆದು ಇದೀಗ ಪೂರ್ಣಗೊಳ್ಳುವ ಹಂತದಲ್ಲಿದೆ.
ಎರಡು ಅಂತಸ್ತಿನ ನೂತನ ಭವನದಲ್ಲಿ ಈಗಾಗಲೇ 3 ವಾಣಿಜ್ಯ ಮಳಿಗೆ, ಎರಡು ಸಭಾಂಗಣ, ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಕಟ್ಟಡವನ್ನು ನಿರ್ಮಿಸಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಸಮಾಜ ಕಲ್ಯಾಣ ಇಲಾಖೆಯ ಅನುದಾನವನ್ನು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಮೂಲಕ ಅನುಷ್ಠಾನಗೊಳಿಸಲಾಗಿದೆ. ಸದ್ಯದಲ್ಲಿಯೇ ಕಟ್ಟಡದ ಉದ್ಘಾಟನೆ ನಡೆಯಲಿದೆ ಎಂದು ಅಭಿಯಂತರ ವೀರೇಂದ್ರ ತಿಳಿಸಿದ್ದಾರೆ.
ಅಂಬೇಡ್ಕರ್ ಭವನವನ್ನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಬಳಸಬೇಕು. ಸರ್ಕಾರದ ಯಾವದೇ ಇಲಾಖೆಯನ್ನು ಇಲ್ಲಿಗೆ ಸ್ಥಳಾಂತರಿಸಬಾರದು. ಭವನದ ಉಸ್ತುವಾರಿ ಹೊಣೆಯನ್ನು ಯಾವದಾದರೂ ದಲಿತಪರ ಸಂಘಟನೆಗೆ ವಹಿಸಬೇಕು ಎಂಬ ಬೇಡಿಕೆಯನ್ನು ಈಗಾಗಲೇ ಸಂಬಂಧಿಸಿದವರಿಗೆ ಸಲ್ಲಿಸಲಾಗಿದೆ ಎಂದು ದಲಿತ ಸೇನೆಯ ಜಿಲ್ಲಾಧ್ಯಕ್ಷ ಟಿ.ಈ. ಸುರೇಶ್ ತಿಳಿಸಿದ್ದಾರೆ.
ಒಟ್ಟಾರೆ ಈ ಭಾಗದ ದಲಿತಪರ ಸಂಘಟನೆಗಳ ಹಲವು ದಶಕಗಳ ಬೇಡಿಕೆಯಾಗಿದ್ದ ಅಂಬೇಡ್ಕರ್ ಭವನ ನಿರ್ಮಾಣ ಕೊನೆಗೂ ಈಡೇರಿದ್ದು, 10 ವರ್ಷಗಳ ನಂತರ ಸಾರ್ವಜನಿಕ ಉಪಯೋಗಕ್ಕೆ ಸಿದ್ಧವಾಗುತ್ತಿದೆ.