ಮಡಿಕೇರಿ, ನ. 19: ಮಡಿಕೇರಿಯ ಐತಿಹಾಸಿಕ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ತಾ. 22 ರಂದು ಅಷ್ಟಮಂಗಲ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪುಲಿಯಂಡ ಜಗದೀಶ್ ತಿಳಿಸಿದ್ದಾರೆ.ಕೇರಳ ಮುಳ್ಳೇರಿಯಾದ ಜ್ಯೋತಿಷಿ ಚೇಕೋಡು ಸುಬ್ರಮಣ್ಯ ಭಟ್ ಅವರು ಪ್ರಶ್ನಾ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ವಿಶೇಷವೆಂದರೆ ಕನ್ನಡದಲ್ಲಿಯೇ ಅವರು ಜ್ಯೋತಿಶಾಸ್ತ್ರ ಮಾಹಿತಿ ನೀಡಲಿದ್ದಾರೆ. ಅಂದು ಬೆಳಿಗ್ಗೆ 10 ಗಂಟೆಯಿಂದ ಕಾರ್ಯಕ್ರಮ ಪ್ರಾರಂಭವಾಗಲಿರುವದಾಗಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್ ತಿಳಿಸಿದ್ದಾರೆ.ಮುಖ್ಯವಾಗಿ ಶೀಘ್ರದಲ್ಲಿ ಏರ್ಪಡಿಸಬೇಕಾದ ದೇವಾಲಯ ಬ್ರಹ್ಮಕಲಶ ಧಾರ್ಮಿಕ ಕಾರ್ಯಕ್ಕೆ ಮಾರ್ಗದರ್ಶನ ಪಡೆಯಲು ಅಷ್ಟಮಂಗಲ ಪ್ರಶ್ನೆಯನ್ನು ಹಮ್ಮಿಕೊಂಡಿರುವದಾಗಿ ಅಧ್ಯಕ್ಷ ಜಗದೀಶ್ ತಿಳಿಸಿದ್ದಾರೆ.
1994ರಲ್ಲಿ ಬ್ರಹ್ಮಕಲಶ ನಡೆದ ಬಳಿಕ 24 ವರ್ಷಗಳಿಂದ ಬ್ರಹ್ಮಕಲಶ ನಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಧಾರ್ಮಿಕ ವಿಧಿವಿಧಾನಾನುಸಾರ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಜಿಲ್ಲೆಯ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ಪ್ರಶ್ನಾ ಕಾರ್ಯಕ್ರಮ ಮುಕ್ತಾಯಗೊಂಡ ಬಳಿಕ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸಭೆಯನ್ನು ನಡೆಸಿ ಪ್ರಮುಖ ನಾಗರಿಕ ಭಕ್ತಾದಿಗಳನ್ನು ಒಳಗೊಂಡಂತೆ ಬ್ರಹ್ಮಕಲಶೋತ್ಸವ ಸಮಿತಿಯೊಂದನ್ನು ರಚಿಸಲಿರುವದಾಗಿ ಅಧ್ಯಕ್ಷರು ಮಾಹಿತಿಯಿತ್ತಿದ್ದಾರೆ.